ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ವತಿಯಿಂದ ಮೇ 13ರಂದು ಶಿರಸಿಯಲ್ಲಿ ‘ಸಾಹಿತ್ಯ ಸಹವಾಸ’ ಕಾರ್ಯಕ್ರಮದ ಆಯೋಜನೆ
ಶಿರಸಿಯ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ವಿ ಜಿ ಭಟ್ ಮತ್ತು ಶಾಂತಿನಾಥ ದೇಸಾಯಿ ಇವರುಗಳ ಬದುಕು ಮತ್ತು ಸಾಹಿತ್ಯಕ ಕೊಡುಗೆಗಳನ್ನು ಸಂಭ್ರಮಿಸುತ್ತದೆ.
ಶಿರಸಿ | ಬೆಂಗಳೂರು, ಮೇ 10: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಬೆಂಗಳೂರು ಮೇ 13ರಂದು ಶಿರಸಿಯಲ್ಲಿ ’ಸಾಹಿತ್ಯ ಸಹವಾಸ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು ರಾಜ್ಯದ ಸಾಂಸ್ಕೃತಿಕ ಪರಂಪರೆ, ಕನ್ನಡದ ಪ್ರಮುಖ ಸಾಹಿತಿಗಳು, ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಂಭ್ರಮಿಸಲು ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ನಾಲ್ಕನೆಯದಾಗಿದೆ.
ಶಿರಸಿಯ ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಾಹಿತಿಗಳಾದ ಗೌರೀಶ ಕಾಯ್ಕಿಣಿ, ಯಶವಂತ ಚಿತ್ತಾಲ, ವಿ ಜಿ ಭಟ್ ಮತ್ತು ಶಾಂತಿನಾಥ ದೇಸಾಯಿ ಇವರುಗಳ ಬದುಕು ಮತ್ತು ಸಾಹಿತ್ಯಕ ಕೊಡುಗೆಗಳನ್ನು ಸಂಭ್ರಮಿಸುತ್ತದೆ.
ಖ್ಯಾತ ಲೇಖಕರೂ, ಗೀತಸಾಹಿತಿಗಳೂ ಆದ ಜಯಂತ ಕಾಯ್ಕಿಣಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶಯನುಡಿಗಳನ್ನು ಆಡಲಿದ್ದಾರೆ. ಇಡೀ ದಿನದ ಕಾರ್ಯಕ್ರಮದಲ್ಲಿ ಲೇಖಕರಾದ ರಾಜೇಂದ್ರ ಚೆನ್ನಿ, ರಾಘವೇಂದ್ರ ಪಾಟೀಲ, ಎಂ.ಜಿ. ಹೆಗಡೆ ಮತ್ತು ಕಮಲಾಕರ ಕಡವೆ ಅವರಿಂದ ವಿದ್ವತ್‌ಪೂರ್ಣ ಭಾಷಣಗಳು, ಉತ್ತರ ಕನ್ನಡ ಜಿಲ್ಲೆಯ ಕವಿಗಳ ಗೀತಗಾಯನ ಮತ್ತು ಮೇಲಿನ ಸಾಹಿತಿಗಳನ್ನೊಳಗೊಂಡ ಭಾವಚಿತ್ರ ಪ್ರದರ್ಶನ ಇರುತ್ತವೆ. ಅಲ್ಲದೆ ಕಾರ್ಯಕ್ರಮದ ಭಾಗವಾಗಿ ಪದವಿ ಹಂತದ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿಮರ್ಶಾ ಲೇಕನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಬೆಂಗಳೂರಿನಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು, ವಾರ್ಷಿಕ ಮಕ್ಕಳ ಸಾಹಿತ್ಯೋತ್ಸವ ‘ಕಥಾವನ’, ಎಲ್ಲರ ಲಭ್ಯತೆಗಾಗಿ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳನ್ನೊಳಗೊಂಡ ಮುಕ್ತ ಆನ್ಲೈನ್ ಕಣಜ ‘ಅನುವಾದ ಸಂಪದ’, ಕರ್ನಾಟಕದ ಸಾಂಸ್ಕೃತಿಕ ವಿವಿಧತೆಯನ್ನು ಸಂಭ್ರಮಿಸುವ ’ಕೃಷ್ಣೆಯಿಂದ ಕಾವೇರಿ’ ಉತ್ಸವ ಮತ್ತು ‘ಸಂಸ್ಕೃತಿ ಸಂಭ್ರಮ’ ಸರಣಿ, ರೇಡಿಯೊ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ವತಿಯಿಂದ ಕರ್ನಾಟಕದ ಏಳ್ಗೆಗೆ ಮಹತ್ತರ ಪಾತ್ರ ವಹಿಸಿರುವ ವಿದ್ಯಮಾನ, ಸ್ಥಳ ಮತ್ತು ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ‘ನೂರಕ್ಕೆ ನೂರು ಕರ್ನಾಟಕ’ ಪಾಡ್ ಕ್ಯಾಸ್ಟ್‌ನ ಪ್ರಸಾರ, ಮುಂತಾದ ಕನ್ನಡ ಉಪಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ರಂಗಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಹೆಚ್ಚಿನ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದು, ಸರಣಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಲು ಉದ್ದೇಶಿಸಿದೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಕುರಿತು: ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರಕಾರದ 2010ರ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಕಾಯಿದೆಯಡಿಯಲ್ಲಿ ಸ್ಥಾಪಿಸಲಾಗಿದೆ. ಅಜೀಂ ಪ್ರೇಮ್‍ಜಿ ಫೌಂಡೇಷನ್ ಸ್ಥಾಪಿಸಿರುವ ಈ ವಿಶ್ವವಿದ್ಯಾಲಯವು ಸಂಪೂರ್ಣವಾಗಿ ಸಮಾಜೋಪಕಾರಿ ಉದ್ದೇಶವನ್ನು ಹೊಂದಿದ್ದು, ಲಾಭರಹಿತ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯವು ಸ್ಪಷ್ಟವಾದ ಸಾಮಾಜಿಕ ಗುರಿಯನ್ನು ಹೊಂದಿದ್ದು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರಶ್ಮಿ ಪ್ರಭಾಕರ್
ಮೊಬೈಲ್: +91 9481934254
Rashmi.prabhakar@k2communications.in
