ಕಥಾವನ 2022, ಸಾಹಿತ್ಯದೆಡೆಗೆ ಮಕ್ಕಳ ಪ್ರತಿಸ್ಪಂದನೆಯನ್ನು ಗುರುತಿಸಿ ಅದನ್ನು ಪೋಷಿಸುವ ದಾರಿಗಳನ್ನು ಶೋಧಿಸಲಿದೆ. ಮಕ್ಕಳು ಸಾಹಿತ್ಯದೊಂದಿಗೆ ವಿವಿಧ ರೀತಿಯಲ್ಲಿ ತೊಡಗಿಕೊಂಡು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಪಾತ್ರಗಳೊಂದಿಗೆ ಅನುಭೂತಿ ತೋರಿದರೆ ಇನ್ನು ಕೆಲವರು ಕವಿತೆಯನ್ನು ಇಷ್ಟಪಡದೆಯೇ ಇರಬಹುದು! ಕೆಲವರಿಗೆ ಇದು ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಬಹುದು ಹಾಗೂ ಚಿತ್ರಿಸುವುದು ಮತ್ತು ಅದರ ಕುರಿತು ಮಾತನಾಡುವ ಮೂಲಕ ಅವರು ಭಾವ ವಿರೇಚನವನ್ನು (ತುಮುಲವನ್ನು ಹೊರಹಾಕುವುದು) ಹೊಂದಬಹುದು ಅಥವಾ ಒಂದು ಪುಟದಲ್ಲಿರುವ ಪದಗಳನ್ನು ಓದುವ ಮೂಲಕ ಆನಂದಿಸಬಹುದು.

ಮಕ್ಕಳು ಸಾಹಿತ್ಯಕ್ಕೆ ಪ್ರತಿಸ್ಪಂದಿಸಬಹುದಾದ ಅನೇಕ ವಿಧಾನಗಳಿವೆ. ಮಕ್ಕಳನ್ನು ಸಾಹಿತ್ಯದೆಡೆಗಿನ ಒಂದು ನಿರ್ದಿಷ್ಟ ರೀತಿಯ ಪ್ರತಿಕ್ರಿಯೆಗೆ ಸೀಮಿತಗೊಳಿಸಿದರೆ ಸಹಾನುಭೂತಿ, ಕಲ್ಪನೆ ಮತ್ತು ಸೃಜನಶೀಲತೆಯೆಡೆಗೆ ಅವರು ಹೊಂದಿರುವ ಸಹಜ ಒಲವನ್ನು ಮೊಟಕುಗೊಳಿಸಿದಂತಾಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಸಾಹಿತ್ಯಕ್ಕೆ ಪ್ರತಿಕ್ರಿಯಿಸುವ ಬೇರೆ ಬೇರೆ ವಿಧಾನಗಳು ಮತ್ತು ವಿಭಿನ್ನ ಚಿಂತನೆಯಲ್ಲಿ ತೊಡಗಲು ಮಕ್ಕಳನ್ನು ಉತ್ತೇಜಿಸಿದರೆ ಅವರ ಸೌಂದರ್ಯಪ್ರಜ್ಞೆ ಹಾಗೂ ಅವುಗಳಿಂದ ಪಡೆಯುವ ತೃಪ್ತಿಯನ್ನು ಸಮೃದ್ಧಗೊಳಿಸಲು ಸಹಾಯವಾಗುತ್ತದೆ. ಇದಕ್ಕಿಂತಲೂ ಮಿಗಿಲಾಗಿ, ಮಗುವು ಸಾಹಿತ್ಯವನ್ನು ಕುರಿತಂತೆ ಹೊಂದಿರುವ ವೈಯಕ್ತಿಕ ದೃಷ್ಟಿಕೋನವನ್ನು ಇದು ಗೌರವಿಸುತ್ತದೆ ಹಾಗೂ ಸಾಹಿತ್ಯದ ಪ್ರತಿಸ್ಪಂದನೆಯಲ್ಲಿ ಮಗುವನ್ನೇ ಕೇಂದ್ರ ಸ್ಥಾನದಲ್ಲಿರಿಸುತ್ತದೆ. ಹೀಗಾಗಿ, ಸಾಹಿತ್ಯಕ್ಕೆ ಮಕ್ಕಳ ಪ್ರತಿಕ್ರಿಯೆಯನ್ನು ಪೋಷಿಸುವಲ್ಲಿ ತಮ್ಮ ಪಾತ್ರವನ್ನು ಅರಿತುಕೊಳ್ಳುವುದು ಮತ್ತು ಈ ತೊಡಗಿಸಿಕೊಳ್ಳುವಿಕೆಯಲ್ಲಿ ಮಕ್ಕಳನ್ನು ಬೆಂಬಲಿಸಲು ದಾರಿ ಕಂಡುಕೊಳ್ಳುವುದು ಶಿಕ್ಷಕರು ಮತ್ತು ಪೋಷಕರಿಗೆ ಅನಿವಾರ್ಯವೆನಿಸುತ್ತದೆ. ಈ ಕಾಣ್ಕೆಯನ್ನು ಸಾಕಾರಗೊಳಿಸಲು, ಕಥಾವನ 2022ರಲ್ಲಿ ಈ ಕೆಳಗಿನ ನಾಲ್ಕು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.

1. ಮಕ್ಕಳ ಸಾಹಿತ್ಯಿಕ ಆನ್ಲೈನ್‌ಸಪ್ತಾಹ | ನವೆಂಬರ್ 1418 :

ಇದು 5 ದಿನಗಳ ಮಕ್ಕಳ ಸಾಹಿತ್ಯೋತ್ಸವವಾಗಿದ್ದು ನಡೆಯಲಿದೆ. ಬಾಗಲಕೋಟೆ, ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ಮಂಡ್ಯ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಸೇರಿದಂತೆ ಕರ್ನಾಟಕದ 9 ಜಿಲ್ಲೆಗಳ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಈ ಸಾಹಿತ್ಯೋತ್ಸವ ನಡೆಯಲಿದೆ. 

2. ಶಾಲಾ ಶಿಕ್ಷಕರಿಗಾಗಿ ವಸತಿ ಸಹಿತ ಎರಡು ದಿನದ ಕಾರ್ಯಾಗಾರ: 

ʻಸಾಹಿತ್ಯಕ್ಕೆ ಮಕ್ಕಳ ಪ್ರತಿಸ್ಪಂದನೆ: ಶಿಕ್ಷಕರು ಮತ್ತು ಪೋಷಕರ ಪಾತ್ರ’ ಎನ್ನುವ ವಿಷಯವಸ್ತುವನ್ನು ಹೊಂದಿರುವ, 2 ದಿನಗಳ (ಒಟ್ಟು 12 ಗಂಟೆಗಳು) ವಸತಿಸಹಿತ ಕಾರ್ಯಾಗಾರವನ್ನು ಶಿಕ್ಷಕರಿಗಾಗಿ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ನಡೆಸಲಾಗುವುದು. 

3. ಮಕ್ಕಳ ಸಾಹಿತ್ಯೋತ್ಸವ: 

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಬೆಂಗಳೂರಿನ ಸರ್ಜಾಪುರ ಕ್ಯಾಂಪಸ್‌ನಲ್ಲಿ ಸುಮಾರು 1000 ಜನರಿಗೆ (750 ಮಕ್ಕಳು ಸೇರಿದಂತೆ) ಒಂದು ದಿನದ ಕಥಾವನದ ಮೇಳವನ್ನು ಆಯೋಜಿಸಲಿದೆ. ʻಸಮುದಾಯ ಬಾಂಧವ್ಯ ವಿಭಾಗ (ಕಮ್ಯೂನಿಟಿ ಎಂಗೇಜ್ಮೆಂಟ್ ಸೆಲ್)’ ಮತ್ತು ʻಶೈಕ್ಷಣಿಕ ಅಭ್ಯಾಸ (ಎಜುಕೇಷನ್ ಪ್ರಾಕ್ಟಿಕಮ್ ಪ್ರೊಗ್ರಾಂ)’ ಕಾರ್ಯಕ್ರಮಗಳ ಮೂಲಕ ನಾವು ಕೆಲಸ ಮಾಡುತ್ತಿರುವ ನಮ್ಮ ನೆರೆಹೊರೆಯ ಸಮುದಾಯದ ಮಕ್ಕಳು ಮತ್ತು ಶಿಕ್ಷಕರನ್ನು ಈ ಮೇಳಕ್ಕೆ ಆಹ್ವಾನಿಸಲಾಗುವುದು. ವಸತಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿರುವ ಶಿಕ್ಷಕರನ್ನು ಸಹ ಆಹ್ವಾನಿಸಲಾಗುವುದು. ಸಾಹಿತ್ಯದೊಂದಿಗೆ ತೊಡಗಿಸಿಕೊಳ್ಳುವ ವಿವಿಧ ವಿಧಾನಗಳನ್ನು ಮಕ್ಕಳಿಗೆ ನೇರವಾಗಿ ಪರಿಚಯಿಸುವುದಕ್ಕಾಗಿ ಲೇಖಕರು, ಚಿತ್ರಕಾರರು, ರಂಗಭೂಮಿ ಪ್ರದರ್ಶಕರು, ಕಥೆಗಾರರು, ಕವಿಗಳು, ಪ್ರಕಾಶಕರು, ಜಾನಪದ ಕಲಾ ಪ್ರದರ್ಶಕರು ಇನ್ನೀತರ ಜನರನ್ನು ಒಳಗೊಂಡಿರುವ ಸುಮಾರು 20 ಪ್ರದರ್ಶನಾ ಮಳಿಗೆಗಳು ಇರಲಿವೆ. 

4. ತಜ್ಞರನ್ನೊಳಗೊಂಡ ಚರ್ಚೆ | ಫೆಬ್ರವರಿ 32023

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಬೆಂಗಳೂರಿನ ಸರ್ಜಾಪುರ ಕ್ಯಾಂಪಸ್ ನಲ್ಲಿ ಶಿಕ್ಷಣ ಶಾಸ್ತ್ರ ವಿಷಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಾಹಿತ್ಯದೆಡೆಗೆ ಮಕ್ಕಳ ಪ್ರತಿಸ್ಪಂದನೆ’ ವಿಷಯವನ್ನು ಕುರಿತು ತಜ್ಞರೊಂದಿಗೆ ಚರ್ಚೆಯನ್ನು ಆಯೋಜಿಸಲಾಗಿದೆ.

ಮಕ್ಕಳ ಸಾಹಿತ್ಯಿಕ ಆನ್ಲೈನ್‌ಸಪ್ತಾಹ | ದಿನ — 1

ನವೆಂಬರ್ 14 | 10:00 AM-11:30 AM

ಮಕ್ಕಳ ಸಾಹಿತ್ಯಿಕ ಆನ್ಲೈನ್‌ಸಪ್ತಾಹ | ದಿನ — 2 

ನವೆಂಬರ್ 15 | 10:00 AM-11:30 AM

ಮಕ್ಕಳ ಸಾಹಿತ್ಯಿಕ ಆನ್ಲೈನ್‌ಸಪ್ತಾಹ | ದಿನ — 3

ನವೆಂಬರ್ 16 | 10:00 AM-11:30 AM

ಮಕ್ಕಳ ಸಾಹಿತ್ಯಿಕ ಆನ್ಲೈನ್‌ಸಪ್ತಾಹ | ದಿನ — 4

ನವೆಂಬರ್ 17 | 10:00 AM-11:30 AM

ಮಕ್ಕಳ ಸಾಹಿತ್ಯಿಕ ಆನ್ಲೈನ್‌ಸಪ್ತಾಹ | ದಿನ — 5

ನವೆಂಬರ್ 18 | 10:00 AM-11:30 AM