ಲಂಬಾಣಿ ಮಕ್ಕಳಿಗೆ ವಸತಿ ಶಾಲೆ ಒದಗಿಸಿದ ಮುಖ್ಯ ಶಿಕ್ಷಕಿ – ಅನುಜಾ ಸಿದ್ದಪ್ಪ ಗುಬ್ಬ

ನಾವು ಅಂಬಲನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯನ್ನು ಪ್ರವೇಶಿಸಿದಾಗ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರು ಒಂದಲ್ಲ ಒಂದು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿತು

Thumbnail IMG 20190625 WA0038 900x675

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,
ಅಂಬಲನೂರು ಲಂಬಾಣಿ ತಾಂಡ, ಬಸವನಬಾಗೇವಾಡಿ, ವಿಜಯಪುರ ಜಿಲ್ಲೆ.

This is a translation of the article originally written in English

ಶಾಲೆಯ ಹಿನ್ನೆಲೆ:

ನಾವು ಅಂಬಲನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯನ್ನು ಪ್ರವೇಶಿಸಿದಾಗ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರು ಒಂದಲ್ಲ ಒಂದು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿರುವುದು ಕಂಡುಬಂದಿತು. ಈ ಶಾಲೆಯಲ್ಲಿ 79 ಗಂಡು ಮಕ್ಕಳು ಹಾಗೂ 86 ಹೆಣ್ಣುಮಕ್ಕಳು ಸೇರಿದಂತೆ ಒಟ್ಟು 165 ಮಕ್ಕಳು ಕಲಿಯುತ್ತಿದ್ದಾರೆ. ಮುಖ್ಯ ಶಿಕ್ಷಕರು ಸೇರಿದಂತೆ ಒಟ್ಟು 7 ಜನ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ. ಪ್ರತಿ ವರ್ಷ 4ರಿಂದ 5 ಮಕ್ಕಳು ಮೊರಾರ್ಜಿ ದೇಸಾಯಿ ಶಾಲೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್ ಎಂ ಎಸ್ಎ) ಅಥವಾ ನವೋದಯ ಶಾಲೆಗಳಿಗೆ ಆಯ್ಕೆಗೊಳ್ಳುತ್ತಲಿದ್ದಾರೆ. ಅಂಬಲನೂರ್ ಒಂದು ಲಂಬಾಣಿ ತಾಂಡಾ ಆಗಿದ್ದು ಇಲ್ಲಿ ಸುಮಾರು ಎರಡು ಸಾವಿರದಷ್ಟು ಜನಸಂಖ್ಯೆ ಇದೆ. ಇದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಬ್ಲಾಕ್ ನಿಂದ 12 ಕಿ ಮೀ ದೂರದಲ್ಲಿದೆ. ಈ ಗ್ರಾಮದ ಹೆಚ್ಚಿನವರು ಪ್ರತಿ ವರ್ಷ ಅಕ್ಟೋಬರ್ ನಿಂದ ಮಾರ್ಚ್ ತಿಂಗಳವರೆಗೆ ಕೆಲಸವನ್ನು ಅರಸಿ ಗೋವಾ, ಮಹಾರಾಷ್ಟ್ರಗಳಿಗೆ ವಲಸೆ ಹೋಗುವವರು. ಇವರಲ್ಲಿ ಅನೇಕರಿಗೆ ಮಕ್ಕಳನ್ನು ಊರಲ್ಲೇ ಬಿಟ್ಟು ಹೋಗುವುದು ಕಷ್ಟವಾದ ಕಾರಣ ತಾವು ಹೀಗೆ ಹೋಗುವಾಗ ತಮ್ಮ ಮಕ್ಕಳನ್ನೂ ತಮ್ಮೊಂದಿಗೆ ಕರೆದೊಯ್ಯುವುದರಿಂದ ವರ್ಷದ ಆರು ತಿಂಗಳ ಕಾಲ ಆ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾಗಿ ಬರುತ್ತದೆ. ಈ ದೀರ್ಘಾವಧಿಯ ಗೈರು ಹಾಜರಿಯಿಂದಾಗಿ ಮಕ್ಕಳು ತಮ್ಮ ಕಲಿಕೆಯಲ್ಲಿ ಹಿಂದೆ ಬೀಳುತ್ತಾರೆಂಬ ಆತಂಕ ಇಲ್ಲಿನ ಶಿಕ್ಷಕರನ್ನು ಕಾಡಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಕಾರ್ಯಸಾಧ್ಯವಾದ ಕೆಲವು ಕ್ರಮಗಳನ್ನು ಹಾಗು ಹಲವು ದಾರಿಗಳನ್ನು ಹುಡುಕುವಂತೆ ಮಾಡಿತು. ಶಿಕ್ಷಕರು ಸಮುದಾಯದೊಂದಿಗೆ ಒಂದು ತಂಡವಾಗಿ ಕೂಡಿ ಕಂಡುಹಿಡಿದ ಈ ಕೆಲವೊಂದು ಪರಿಹಾರಗಳು ಮಕ್ಕಳ ಕಲಿಕಾ ಮಟ್ಟದಲ್ಲಿ ಸುಧಾರಣೆ ತರಲು ನೆರವಾಗಿವೆ. ಇವು ನಮ್ಮ ಗಮನ ಸೆಳೆದವು. ಕಲಿಕೆಯಲ್ಲಿನ ಈ ಬೆಳವಣಿಗೆ ಮತ್ತು ಸುಧಾರಣೆಗಳಾಗಲು ಈ ಕೆಳಗೆ ಸೂಚಿಸಿರುವ ಎರಡು ಕಾರ್ಯತಂತ್ರಗಳು ಅವರಿಗೆ ನೆರವಾಗಿವೆ:

• ಋತುಮಾನ ಶಾಲೆ 2013 – 14
• ಪಾರದರ್ಶಕತೆ ಮತ್ತು ಒಟ್ಟಾಗಿ ಕೆಲಸ ಮಾಡುವುದು.

ಇವೆರಡೂ ಕಾರ್ಯತಂತ್ರಗಳನ್ನು ಯಾವ ರೀತಿಯಲ್ಲಿ ಅನುಷ್ಠಾನಗೊಳಿಸಲಾಯಿತು ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ.

ಅನುಜಾ ಸಿದ್ದಪ್ಪ ಗುಬ್ಬ ಅವರು ಲಕ್ಷ್ಮಿನಗರ ಶಾಲೆಯಿಂದ ಈ ಶಾಲೆಗೆ 2013ರಲ್ಲಿ ವರ್ಗಾವಣೆ ಆಗಿ ಬಂದರು. ಅವರು ಈ ಶಾಲೆಗೆ ಬಂದ ಕೂಡಲೇ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಮೊದಲನೆಯದು ಮಕ್ಕಳು ತಮ್ಮ ತಂದೆತಾಯಿಯರ ಜೊತೆಗೆ ವಲಸೆ ಹೋಗುವ ಸಮಸ್ಯೆಗೆ ಪರಿಹಾರ ಹುಡುಕುವುದು ಮತ್ತು ಮಕ್ಕಳ ಕಲಿಕಾ ಮಟ್ಟವನ್ನು ಸುಧಾರಿಸುವುದು. ಅಷ್ಟರಲ್ಲಿ, ಅಲ್ಲಿನ ಯುವಕರು ಅವರ ಬಳಿ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯನ್ನು ಮರುರಚನೆ ಮಾಡುವಂತೆ ಕೋರಿದರು. ಶಾಲೆಯನ್ನು ಮತ್ತು ಸಮುದಾಯವನ್ನು ಅರ್ಥಮಾಡಿಕೊಳ್ಳಲು ಅನುಜಾ ಅವರಿಗೆ ಸ್ವಲ್ಪ ಸಮಯ ಹಿಡಿಯಿತು. ನಂತರ ಅವರು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಮುಂದಿನ ವರ್ಷದಲ್ಲಿ ಮರುರಚಿಸುವುದಾಗಿ ಭರವಸೆ ನೀಡಿದರು.

ಶಿಕ್ಷಕಿ ಅನುಜಾ ಅವರ ಮುಂದಿದ್ದ ಸವಾಲುಗಳು

ಅಂಬಲನೂರು ಶಾಲೆಯಲ್ಲಿ ತರಗತಿ ಕೊಠಡಿಗಳ ಕೊರತೆಯಿತ್ತು. ಎರಡು ತರಗತಿಗಳು ಶಾಲೆಯ ಮುಂದಿನ ತೆರೆದ ಬಯಲಿನಲ್ಲಿ ನಡೆಯುತಿದ್ದವು. ಇದರೊಂದಿಗೆ ನೀರಿನ ಸರಬರಾಜು ಇರಲಿಲ್ಲ. ಅನುಜಾ ಅವರು ನೀರಿನ ಸರಬರಾಜು ಮತ್ತು ತರಗತಿ ಕೊಠಡಿಗಳ ಕೊರತೆಯ ಸಮಸ್ಯೆಯನ್ನು ಮೊದಲಿಗೆ ಕೈಗೆತ್ತಿಕೊಂಡು ಪರಿಹರಿಸಿದರು. ಎರಡು ತರಗತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾತಿ ಮಾಡಿಸಿಕೊಂಡರು. ಶಾಲೆಗೆ ಸೇರಿದ ಭೂಮಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿರಲಿಲ್ಲ. ಶಾಲೆಯ ಭೂಮಿಯ ಸಮೀಪದಲ್ಲೇ ದೇವಸ್ಥಾನವೊಂದು ಇದ್ದುದರಿಂದಾಗಿ ಸಮುದಾಯದವರು ತರಗತಿ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದರು, ಅನುಜಾ ಅವರು ಧೃತಿಗೆಡಲಿಲ್ಲ. ತರಗತಿ ಕೊಠಡಿಗಳ ನಿರ್ಮಾಣಕ್ಕಾಗಿ ಕೆಲವು ದಾನಿಗಳನ್ನು ಗುರುತಿಸಿದರು ಮತ್ತು ಅವರ ಕೃಷಿಭೂಮಿಯ ನಾಲ್ಕು ಗುಂಟೆ ಭೂಮಿಯನ್ನು (1 ಗುಂಟೆ ಅಂದರೆ 121 ಚದರ ಗಜ ಅಥವಾ 101.17 ಚದರ ಮೀಟರ್‌) ಅವರಿಂದ ದಾನ ಪಡೆದರು. ಈ ರೀತಿಯಾಗಿ, ತರಗತಿ ಕೊಠಡಿಗಳನ್ನು ನಿರ್ಮಿಸಲಾಯಿತು.

ಅನುಜಾ ಅವರು ಮತ್ತೊಂದು ಸಮಸ್ಯೆಯನ್ನು ಕೂಡ ಎದುರಿಸಬೇಕಾಗಿ ಬರುತ್ತಿತ್ತು. ಗ್ರಾಮಸ್ಥರು ಬಹಳಷ್ಟು ಸಲ ಪಾನಮತ್ತರಾಗಿ ಶಾಲೆಗೆ ಬರುತ್ತಿದ್ದರು. ಇದು ಶಾಲೆಯ ಮೇಲೆ ಮಕ್ಕಳ ಮತ್ತು ಶಿಕ್ಷಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿತ್ತು. ತಮ್ಮ ಸಹೋದ್ಯೋಗಿಗಳ ಸಹಾಯ ಮತ್ತು ಸಮುದಾಯದವರ ಬೆಂಬಲದೊಂದಿಗೆ ಅವರು ಅದನ್ನು ಪರಿಹರಿಸಿದರು. ಅವರು ಬಸವನ ಬಾಗೇವಾಡಿಯ ವೈದ್ಯರಾದ ಡಾ. ರಾಮು ನಾಯಕರವರನ್ನು ಸಂಪರ್ಕಿಸಿ ಸಮುದಾಯದ ಸದಸ್ಯರಿಗೆ ಮದ್ಯಪಾನ ಮಾಡಿರುವ ಸಂದರ್ಭದಲ್ಲಿ ಶಾಲೆಯ ಆವರಣದೊಳಗೆ ಬರಬಾರದೆಂದು ಮನದಟ್ಟಾಗುವಂತೆ ತಿಳಿಹೇಳಿಸಿದರು. ಅನುಜಾರವರು ತಮ್ಮ ಸಹೋದ್ಯೋಗಿಗಳೊಂದಿಗೆ ಕೂಡಿ ಹಳ್ಳಿಗರೊಂದಿಗೆ ಮಾತನಾಡಿ ತಮಗೆ ಈ ವಿಚಾರದಲ್ಲಿ ಸಹಕರಿಸುವಂತೆ ಮನವಿ ಮಾಡಿಕೊಂಡರು. ಮೊದಮೊದಲಿಗೆ ಕೆಲವು ವ್ಯಕ್ತಿಗಳು ಶಾಲೆಯ ಆವರಣದೊಳಕ್ಕೆ ಬರುತ್ತಿದ್ದರೂ ಕ್ರಮೇಣ ಬರುವುದನ್ನು ನಿಲ್ಲಿಸಿದರು. ಗ್ರಾಮಸ್ಥರು ಸಂಜೆ ಬಿಡುವಿನ ವೇಳೆಯನ್ನು ಶಾಲಾ ಆವರಣದಲ್ಲಿ ಕಳೆಯುವುದನ್ನು ಸಹ ನಿಲ್ಲಿಸಿದರು. ಈಗ ಗ್ರಾಮಸ್ಥರು ಶಾಲೆಯಲ್ಲಿ ಏನಾದರೂ ಕೆಲಸವಿದ್ದರೆ ಮಾತ್ರ ಶಾಲಾ ಆವರಣದೊಳಕ್ಕೆ ಬರುತ್ತಾರೆ.

ಅನುಜಾ ಅವರು ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯನ್ನು ಮರುರಚನೆ ಮಾಡುವ ಉದ್ದೇಶದೊಂದಿಗೆ ಪೋಷಕರ ಸಭೆ ಕರೆದರು. ಪೋಷಕರಿಗೆ ಪತ್ರ ಪಡೆದು ಅವರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು. ಸಭೆಯಲ್ಲಿ ಪೋಷಕರನ್ನು ಉದ್ದೇಶಿಸಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮಾಡುವುದರ ಉದ್ದೇಶವನ್ನು, ಅದರಲ್ಲಿ ಪೋಷಕರ ಪಾತ್ರವನ್ನು ವಿವರಿಸಿದರು ಮತ್ತು ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ಅದರಂತೆ, ಓದು ಬರಹ ಬಲ್ಲ, ಶಾಲೆಯನ್ನು ಕುರಿತು ಕಾಳಜಿ ಹೊಂದಿರುವ ಸದಸ್ಯರಿಂದ ಕೂಡಿದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆಯಾಯಿತು.

ಮಧ್ಯಾಹ್ನದ ಬಿಸಿ ಊಟದ ಸಿಬ್ಬಂದಿಗಳು ಅಡುಗೆಯನ್ನು ಮಾತ್ರ ಸಿದ್ಧಪಡಿಸುತ್ತಿದ್ದರು. ಅವರು ಶಾಲೆಯ ಇತರ ಯಾವುದೇ ಕೆಲಸಗಳಲ್ಲಿ ಭಾಗವಹಿಸುವುದಾಗಲೀ ಬಿಸಿಯೂಟ ಆದ ಮೇಲೆ ಊಟದ ತಟ್ಟೆ ಲೋಟಗಳನ್ನು ತೊಳೆಯುವುದಾಗಲೀ, ಊಟ ಮಾಡಿದ ಜಾಗವನ್ನು ಶುಚಿಗೊಳಿಸುವುದಾಗಲೀ ಮಾಡುತ್ತಿರಲಿಲ್ಲ. ಮಕ್ಕಳು ಬಹಳಷ್ಟು ಬಾರಿ ನೆಲದ ಮೇಲೆ ಚೆಲ್ಲಾಡಿದ ಆಹಾರವನ್ನು ತುಳಿದಾಡುವುದು ಆಗುತ್ತಿತ್ತು.

ಅನುಜಾ ಅವರು ಇದನ್ನು ಕುರಿತು ಬಿಸಿ ಊಟದ ಸಿಬ್ಬಂದಿಗಳ ಜೊತೆಯಲ್ಲಿ ಮಾತನಾಡಲು ಪ್ರಯತ್ನಿಸಿದಾಗ ಅದಕ್ಕೆ ಸಹಕರಿಸದೆ ಹೋದರು. ಗ್ರಾಮ ಪಂಚಾಯತಿ ಮುಖ್ಯಸ್ಥರ ಮಡದಿಯು ಬಿಸಿ ಊಟದ ಸಿಬ್ಬಂದಿಗಳಲ್ಲಿ ಒಬ್ಬರಾಗಿದ್ದರು. ಮತ್ತೆ ಮತ್ತೆ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೂ ಅದರಲ್ಲಿ ಫಲ ಸಿಗದೆ ಹೋದಾಗ ಅನುಜಾರವರು ಧೈರ್ಯವಹಿಸಿ ರಾಜಕೀಯದ ನೆರಳಿಲ್ಲದಂತೆ ಇರುವ ಬೇರೆ ಬಿಸಿ ಊಟದ ಸಿಬ್ಬಂದಿಯನ್ನು ತರುವ ಒಂದು ನಿರ್ಧಾರವನ್ನು ತೆಗೆದುಕೊಂಡರು. ಹೊಸ ಬಿಸಿ ಊಟದ ಸಿಬ್ಬಂದಿಯವರು ಶಿಕ್ಷಕರಿಗೆ ಹಲವು ವಿಧಗಳಲ್ಲಿ ಸಹಾಯ ಮಾಡುವುದಕ್ಕೆ ಮುಂದೆ ಬಂದರು. ಉದಾಹರಣೆಗೆ, ಶಾಲೆಯ ಬಾಗಿಲನ್ನು ಪ್ರತಿ ದಿನ ತೆರೆಯುವುದು ಮುಚ್ಚುವುದು, ಶಾಲೆಗೆ ಭೇಟಿ ಕೊಡುವ ಅತಿಥಿಗಳಿಗೆ ಚಹಾ ಉಪಾಹಾರ ತಯಾರಿಸಿ ಕೊಡುವುದು, ತರಗತಿ ಕೊಠಡಿಗಳನ್ನು ಮತ್ತು ಶಾಲಾ ಆವರಣವನ್ನು ಮಧ್ಯಾಹ್ನದ ಊಟದ ನಂತರ ಶುಚಿಗೊಳಿಸುವುದು ಮುಂತಾದ ಕೆಲಸಗಳಲ್ಲಿ ನೆರವಾಗತೊಡಗಿದರು.

ಇವೇ ಅಲ್ಲದೆ, ತಮ್ಮ ಕಲಿಕೆಗೆ ಪ್ರತಿಕೂಲ ಪರಿಣಾಮ ಬೀರುವ ಹಾಗೆ ಪಾಲಕರೊಂದಿಗೆ ವಲಸೆ ಹೋಗುತ್ತಿದ್ದ ಮಕ್ಕಳನ್ನು ವಲಸೆ ಹೋಗದಂತೆ ತಡೆಯುವುದು ಅನುಜಾ ಅವರ ಮುಂದಿದ್ದ ಮತ್ತೊಂದು ದೊಡ್ಡ ಸವಾಲಾಗಿತ್ತು. ಅವರು ಅದನ್ನು ಕುರಿತು ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಋತುಮಾನ ಶಾಲೆ’ ಪ್ರಾರಂಭಿಸಲು ತೀರ್ಮಾನಿಸಿದರು. 50 ಜನ ಮಕ್ಕಳೊಂದಿಗೆ ಅದನ್ನು ಪ್ರಾರಂಭಿಸಿದ ಅವರು, ಮಕ್ಕಳಿಗೆ ಆಹಾರ ಮತ್ತು ವಸತಿಯ ವ್ಯವಸ್ಥೆ ಮಾಡಿದರು. ಮಕ್ಕಳಿಗೆ ಊಟ ಒದಗಿಸಿ ಅವರ ಕಲಿಕೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳುವ ಸ್ವಯಂ ಸೇವಕರನ್ನು ವ್ಯವಸ್ಥೆ ಮಾಡಿದರು. ಈ ಪ್ರತಿಯೊಂದು ಕೆಲಸವೂ ತಾವು ಯೋಜಿಸಿದಂತೆಯೇ ನಡೆಯುವಂತೆ ಅವರೆಲ್ಲರು ಕೂಡಿ ನೋಡಿಕೊಂಡರು.

ಇದರಿಂದಾಗಿ ಮಕ್ಕಳು ನಿರಂತರವಾಗಿ ಕಲಿಕೆಯಲ್ಲಿ ತೊಡಗುವಂತೆ ಮತ್ತು ಶಿಕ್ಷಕರು ಪರಿಣಾಮಕಾರಿಯಾಗಿ ಕಲಿಸುವುದರಲ್ಲಿ ತೊಡಗಿಕೊಳ್ಳುವಂತೆ ಮಾಡಲು ಸಹಾಯವಾಯಿತು. ಈ ಮಕ್ಕಳಿಗೆ ಅಗತ್ಯ ವೈದ್ಯಕೀಯ ಆರೈಕೆ ನೀಡುವುದರೊಂದಿಗೆ ಮಕ್ಕಳ ಪಾಲಕರೊಂದಿಗೆ ನಿಯತವಾಗಿ ದೂರವಾಣಿ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಪಾಲಕರೂ ಮಕ್ಕಳೂ ಚಿಂತಾ ಮುಕ್ತರಾದರು.

ಋತುಮಾನ ಶಾಲೆಯನ್ನು ಪ್ರಾರಂಭಿಸುವುದು ಮತ್ತು 50 ಜನ ಮಕ್ಕಳ ಶಿಕ್ಷಣ ವಸತಿಗಳ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು – ಅವರಿಗೆ ಊಟದ ವ್ಯವಸ್ಥೆ ಮಾಡುವುದು, ಅವರ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ವಾತ್ಸಲ್ಯಪೂರ್ವಕವಾಗಿ ಕೈಗೊಳ್ಳುವುದು ಇವೆಲ್ಲ ನಿಜಕ್ಕೂ ಸವಾಲಿನ ಕೆಲಸಗಳೇ ಆಗಿವೆ. ಇವೆಲ್ಲವುಗಳ ಮೇಲೆ ಮುಖ್ಯ ಶಿಕ್ಷಕಿಯವರು ವೆಚ್ಚ ಮಾಡಿದ ಪೂರಾ ಹಣದ ಮರುಪಾವತಿಯನ್ನು ಪಡೆಯುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ.ಆದರೆ ಅನುಜಾರವರ ಈ ದಿಟ್ಟ ಹೆಜ್ಜೆ ಪಾಲಕರಿಗೆ ತಮ್ಮ ಮಕ್ಕಳು ಈಗ ಇನ್ನೂ ಚೆನ್ನಾಗಿ ಕಲಿಯುತ್ತಿದ್ದಾರೆ ಎಂದು ಮನದಟ್ಟು ಮಾಡಿಸಿತು. ಈ ವಲಸಿಗ ತಂದೆತಾಯಿಯರು ದೂರದ ಊರುಗಳಿಗೆ ಕೆಲಸ ಅರಸಲು ಕರೆದೊಯ್ಯುವುದಕ್ಕೆ ಬದಲಾಗಿ ಈಗ ತಮ್ಮ ಮಕ್ಕಳನ್ನು ತಮ್ಮ ಹಿರಿಯ ಮಕ್ಕಳೊಂದಿಗೆ, ಅಜ್ಜ ಅಜ್ಜಿಯರೊಂದಿಗೆ ಮತ್ತು ಸಂಬಂಧಿಕರ ಊರಿನಲ್ಲೇ ಇರಿಸಿ ಹೋಗಲು ಪ್ರಾರಂಭಿಸಿದರು.

ಮಕ್ಕಳು ಅಡೆ ತಡೆಯಿಲ್ಲದೆ ವಿದ್ಯಾಭ್ಯಾಸ ಮುಂದುವರಿಸುವುದು ಇದರಿಂದ ಸಾಧ್ಯವಾಗಿದೆ. ಈಗ ಶಿಕ್ಷಕರು ಮಕ್ಕಳ ಪಾಲನೆ ನೋಡಿಕೊಳ್ಳುತ್ತಾರೆ ಹಾಗೆಯೇ ಅವರ ಪಾಲಕರೊಂದಿಗೆ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಪಾಲಕರೊಂದಿಗೆ ವಲಸೆ ಹೋಗುತ್ತಿದ್ದ ವಿದ್ಯಾರ್ಥಿಗಳು ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಮೇಲಿನ ಕಥೆಯನ್ನು ಓದಿದಾಗ, ಮಕ್ಕಳು ಮತ್ತು ಶಿಕ್ಷಕರ ನಡುವೆ ಭಾಷೆಯ ಕಂದರ ಇದ್ದಿರಬೇಕೆಂಬ ಗುಮಾನಿ ನಮ್ಮಲ್ಲಿ ಮೂಡುತ್ತದೆ. ಶಿಕ್ಷಕರಾಗಲೀ ಮುಖ್ಯ ಶಿಕ್ಷಕರಾಗಲೀ ಇದನ್ನು ಒಂದು ಅಡೆತಡೆಯಾಗಲು ಅವಕಾಶ ಮಾಡಿಕೊಟ್ಟಿಲ್ಲ. ಈ ಸವಾಲನ್ನು ಎದುರಿಸಲು, ಅವರು ಪಾಲಕರು-ಶಿಕ್ಷಕರ ಸಭೆಯನ್ನು ಆಯೋಜಿಸಿ ಮಕ್ಕಳ ಕಲಿಕೆಯನ್ನು ಸುಧಾರಿಸುವಲ್ಲಿ ಪಾಲಕರ ಬೆಂಬಲವನ್ನು ಕೋರಿದರು. ಪಾಲಕರು ತಮ್ಮ ಮಕ್ಕಳೊಂದಿಗೆ ತಮ್ಮ ಮನೆಗಳಲ್ಲಿ ಲಂಬಾಣಿ ಭಾಷೆಯಲ್ಲದೆ, ಕನ್ನಡ ಭಾಷೆಯಲ್ಲಿಯೂ ಮಾತನಾಡುವಂತೆ ಶಿಕ್ಷಕರು ಪಾಲಕರಲ್ಲಿ ಕೇಳಿಕೊಂಡರು. ಹಿರಿಯ ತರಗತಿಯ ಮಕ್ಕಳಿಂದ ನಲಿ-ಕಲಿ ತರಗತಿಯ ಮಕ್ಕಳ ಕಲಿಕೆಯ ಸುಧಾರಣೆಗೆ ಸಹಾಯವನ್ನು ಶಿಕ್ಷಕರು ಪಡೆದಿದ್ದಾರೆ. ಇದರಿಂದಾಗಿ ಮಕ್ಕಳನ್ನು ಪರಿಣಾಮಕಾರಿ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಲು ಶಿಕ್ಷಕರಿಗೆ ಸಾಧ್ಯವಾಯಿತು. ಕ್ರಮೇಣ, ಲಂಬಾಣಿ ಭಾಷೆಯು ಮಕ್ಕಳ ಬೋಧನೆ ‑ಕಲಿಕೆ ಪ್ರಕ್ರಿಯೆಗೆ ತೊಡಕಾಗುವುದು ಕಡಿಮೆಯಾಗುತ್ತಾ ಬಂದಿತು.

ಅನುಜಾರವರು ಹೇಳುವಂತೆ, ನಾವು ಜನರಿಗೆ ಸೇವೆ ಮಾಡಲು ಸಿದ್ಧವಾದರೆ ಅವರು ನಮಗೆ ಸಹಕಾರ ನೀಡುತ್ತಾರೆ. ಈ ಮಕ್ಕಳು ಉತ್ತಮ ಗುಣಗಳಿಂದ ಕೂಡಿದ ಉತ್ತಮ ವ್ಯಕ್ತಿತ್ವ ಪಡೆದ ಉತ್ತಮ ಮನುಷ್ಯರಾಗಲೆಂದು ಹಾಗು ದೇಶದ ಉತ್ತಮ ಪ್ರಜೆಗಳಾಗಲೆಂದು ನಾವು ಆಶಿಸುತ್ತೇವೆ, ಎಲ್ಲರೂ ಕಾರ್ಮಿಕರೇ ಆದ ಈ ಗ್ರಾಮಸ್ಥರು ಅತ್ಯುತ್ತಮ ಬೆಂಬಲ ನೀಡಿದ್ದಾರೆ. ಅವರು ಶಾಲೆಗೆ ತಮ್ಮಿಂದ ಸಾಧ್ಯವಿರುವ ಎಲ್ಲ ಬಗೆಯ ಸಹಕಾರವನ್ನೂ ನೀಡಿದ್ದಾರೆ. ಶಾಲೆ ಅಥವಾ ಶಾಲಾ ಸಿಬ್ಬಂದಿ ಅವರಿಂದ ಯಾವುದೇ ಬಗೆಯ ಹಣಕಾಸಿನ ಸಹಾಯವನ್ನು ನಿರೀಕ್ಷಿಸುವುದಿಲ್ಲ.

ಅನುಜಾರವರು ಶಾಲೆಗೆ ಬಂದು ಮುಖ್ಯ ಶಿಕ್ಷಕರಾಗಿ ಜವಾಬ್ದಾರಿ ವಹಿಸಿಕೊಂಡ ಕೂಡಲೇ ಶಾಲೆಗೆ ಬಣ್ಣ ಹೊಡೆಸುವ ನಿರ್ಧಾರ ಮಾಡಿ ರೂ.20,000 ಖರ್ಚಿನಲ್ಲಿ ಬಣ್ಣವನ್ನು ಕೊಂಡರು. ಇದಕ್ಕೆ ಲಭ್ಯವಿದ್ದ ಅನುದಾನ ರೂ.17,000 ಆಗಿತ್ತು. ಸಮುದಾಯದ ಸದಸ್ಯರು ಬಣ್ಣಕ್ಕೆ ತಾವೂ ಒಂದಷ್ಟು ಹಣ ಕೊಡುವುದೇ ಅಲ್ಲದೆ ಮುಖ್ಯ ಶಿಕ್ಷಕರಿಗೆ ಹಣಕ್ಕೆ ತೊಂದರೆಯಾಗದಂತೆ ಮಜೂರಿಯನ್ನು ಅವರೇ ನೀಡಿದರು. ಈ ರೀತಿಯಲ್ಲಿ ಸಮುದಾಯದವರು ಶಾಲೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ಶಾಲಾ ಸಿಬ್ಬಂದಿಗಳೊಂದಿಗೆ ಕೈಜೋಡಿಸಿದರು. ನಮ್ಮ ತಾಂಡಾದ ಶಾಲೆ ಯಾವುದೇ ವಿಷಯದಲ್ಲೂ ಹಿಂದೆ ಬೀಳಬಾರದು’ ಎಂದು ಸಮುದಾಯದವರು ನಂಬುತ್ತಾರೆ ಎಂದು ಅನುಜಾ ಹೇಳಿದರು.

ಶಾಲಾ ಅಭಿವೃದ್ಧಿಯ ಪ್ರಯತ್ನಗಳಲ್ಲಿ ಸಮುದಾಯದ ಭಾಗವಹಿಸುವಿಕೆ ಪ್ರಶಂಸಾರ್ಹ. ಶಾಲೆ ಮತ್ತು ಸಮುದಾಯದ ಸಹಯೋಗಕ್ಕೆ ಶಾಲೆಯ ಒಟ್ಟಾರೆ ಅಭಿವೃದ್ಧಿ ಮತ್ತು ಮಕ್ಕಳ ಕಲಿಕೆಯೇ ಸಾಕ್ಷಿಯಾಗಿದೆ. ಕ್ಲಸ್ಟರ್ ಮಟ್ಟದ, ಹೋಬಳಿ/ತಾಲ್ಲೂಕು ಮಟ್ಟದ ವಿಶೇಷ ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಇಡೀ ದಿನ ಶಾಲೆಯಲ್ಲಿದ್ದು ಸಹಾಯ ಮಾಡುತ್ತಾರೆ. ಇಲಾಖೆಯಿಂದ ಯಾವುದಾದರೂ ಅನುದಾನವು ಶಾಲೆಗೆ ಬಂದಾಗ ಮುಖ್ಯ ಶಿಕ್ಷಕರು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ, ಸಹೋದ್ಯೋಗಿಗಳಿಗೆ ಮತ್ತು ಸಮುದಾಯದ ಪ್ರತಿನಿಧಿಗಳಿಗೆ ಮಾಹಿತಿಯನ್ನು ನೀಡುತ್ತಾರೆ. ಎಲ್ಲರೂ ಒಟ್ಟುಗೂಡಿ ಈ ಅನುದಾನದ ಸದ್ಬಳಕೆ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಅನುದಾನದ ಹಣ ಸಾಕಾಗದೇ ಬಂದರೆ ಹೆಚ್ಚುವರಿ ಹಣವನ್ನುಕೊಡಲು ಸಮುದಾಯದವರು ಮುಂದೆ ಬರುತ್ತಾರೆ. ಉದಾಹರಣೆಗೆ, ಪ್ರತಿಭಾ ಕಾರಂಜಿಯ ಅನುದಾನ ಬಂದಾಗ, ಸಮುದಾಯದ ಪ್ರತಿನಿಧಿಗಳು ರೂ.5,000/- ಕೊಡುಗೆಯಾಗಿ1 ನೀಡಿದರು, ಪ್ರತಿಯೊಬ್ಬ ಶಿಕ್ಷಕರೂ ರೂ.1000/- ವನ್ನು ಅದಕ್ಕೆ ಸೇರಿಸಿದರು, ಮುಖ್ಯ ಶಿಕ್ಷಕರು ರೂ.2000/- ಕೊಡುಗೆ ನೀಡಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ತಿಂಗಳಿಗೆ ಒಂದು ಬಾರಿ ಸಭೆ ಸೇರುತ್ತದೆ. ವಿಶೇಷ ಕಾರ್ಯಕ್ರಮಗಳ ಆಚರಣೆ ಕುರಿತ ಚರ್ಚೆ ನಡೆಯುವಾಗ, ಸರ್ಕಾರದಿಂದ ಅನುದಾನ ಬಂದಾಗ ಅಥವಾ ಶಾಲೆಗೆ ಹಣದ ಅಗತ್ಯವಿದ್ದಾಗ ಗ್ರಾಮಸ್ಥರು ಮತ್ತು ಸಮುದಾಯದ ಪ್ರತಿನಿಧಿಗಳು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯೊಂದಿಗೆ ಕೂಡಿ ಭಾಗವಹಿಸುತ್ತಾರೆ. ಶಾಲೆಯ ಜವಾಬ್ದಾರಿಗಳನ್ನು ಶಾಲಾ ಸಿಬ್ಬಂದಿಗಳು ಹಾಗೂ ಬಿಸಿ ಊಟದ ಸಿಬ್ಬಂದಿಗಳು ಹಂಚಿಕೊಂಡು ತಮ್ಮ ತಮ್ಮ ಶಕ್ತಿಯ ಅನುಸಾರ ಅದರಲ್ಲಿ ಪಾಲ್ಗೊಳ್ಳುತ್ತಾರೆ. ಸಿಬ್ಬಂದಿ ಸಭೆಯು ನಿಯತವಾಗಿ ನಡೆಯುತ್ತಿದ್ದು, ತರಗತಿಯಲ್ಲಿ ಕಲಿಕಾ ಸಾಮಗ್ರಿಗಳ ಬಳಕೆಯನ್ನು ಕುರಿತು, ಮಕ್ಕಳ ಕಲಿಕೆ ಮತ್ತು ಇಲಾಖೆಯ ಮಾರ್ಗದರ್ಶಕಗಳ ಅನುಷ್ಠಾನವನ್ನು ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ.

ಶಾಲಾ ನಾಯಕತ್ವ ಅಭಿವೃದ್ಧಿ ಯೋಜನೆಯು (SLDP) ಮುಖ್ಯ ಶಿಕ್ಷಕರ ನಾಯಕತ್ವದ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆ ನೀಡಿದೆ. ಎಲ್ಲಾ ಸಂದರ್ಭದಲ್ಲೂ ಮುಖ್ಯ ಶಿಕ್ಷಕರು ಮುಂದಾಳತ್ವ ವಹಿಸುವಂತೆ ಸ್ಫೂರ್ತಿ ನೀಡಿದ್ದು ಅವರ ನಡವಳಿಕೆಯನ್ನು ತಿದ್ದಿ ರೂಪಿಸಿದೆ. ಶಾಲೆಯಲ್ಲಿ ಮಕ್ಕಳಿಗೆ ಸರಳ ಪ್ರಯೋಗ, ರಸ ಪ್ರಶ್ನೆ, ಪುಸ್ತಕ ಓದುವಿನಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ಇದು ನೆರವಾಗಿದೆ.

ಅನುಜಾ ಅವರು ಶಾಲೆಯ ಅಭಿವೃದ್ಧಿ, ಮಕ್ಕಳ ಕಲಿಕೆಯಲ್ಲಿ ಸುಧಾರಣೆ- ಇವು ಸಾಧ್ಯವಾಗಿರುವುದು ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದಲೇ ಹೊರತು ಕೇವಲ ಮುಖ್ಯ ಶಿಕ್ಷಕರಿಂದ ಅಲ್ಲ’. ಎಂದು ಹೇಳುತ್ತಾರೆ. ಮುಂದುವರಿದು ಅವರು ಇತ್ತೀಚೆಗೆ, ಶಾಲೆ ಚೆನ್ನಾಗಿ ಆಗುತ್ತಿದೆ, ಅಭಿವೃದ್ಧಿ ಹೊಂದುತ್ತಿದೆ ಎಂದು ಸಮುದಾಯದವರೇ ಹೇಳತೊಡಗಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಪಾರದರ್ಶಕತೆಯನ್ನು ಕಾಯ್ದುಕೊಂಡು ಸವಾಲುಗಳನ್ನು ಸ್ವೀಕರಿಸಿ ಪರಿಹರಿಸಲು ಕೆಲಸ ಮಾಡಬೇಕಾಗಿದೆ. ನಾನು ಈ ಶಾಲೆಗೆ ಬಂದ ನಂತರ, ನನ್ನ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕರು ಪರಸ್ಪರ ವರ್ಗಾವಣೆಗೆ ತಾವು ಸಿದ್ಧ ಎಂದರು. ಇದರಿಂದ ನಾನು ನನ್ನ ಸ್ವಂತ ಗ್ರಾಮಕ್ಕೆ ವರ್ಗಾವಣೆ ಪಡೆಯಬಹುದಾಗಿತ್ತು. ಆದರೆ ಇಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿ ನಾವು ಪರಿಹರಿಸಿದ್ದೇವೆ.ಸಮುದಾಯದವರೂ ಶಾಲೆಯ ಪ್ರಯತ್ನ ಮತ್ತು ಶ್ರಮಗಳಿಗೆ ಉತ್ತಮವಾಗಿ ಪ್ರತಿಸ್ಪಂದಿಸುತ್ತಿದ್ದಾರೆ ಆದ್ದರಿಂದ ಇಲ್ಲೇ ಮುಂದುವರೆಯುವುದು ಉತ್ತಮವೆಂದು ನನಗೆ ಅನಿಸಿತು. ಹಾಗಾಗಿ ಪರಸ್ಪರ ವರ್ಗಾವಣೆಗೆ ಒಪ್ಪದಿರಲು ನಾನು ನಿರ್ಧರಿಸಿದೆ’’ ಎಂದು ಹೇಳಿದರು.

ಶಿಕ್ಷಕಿ ಅನುಜಾ ಅವರ ಹಿನ್ನೆಲೆ:

ಅನುಜಾ ಅವರು ಸಿದ್ದಪ್ಪ ಗುಬ್ಬ ಅವರ ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂರನೆಯವರು, ಉಳಿದವರು ಇಬ್ಬರು ಗಂಡು ಮಕ್ಕಳು. ಅವರು ಪ್ರೌಢಶಾಲಾ ಶಿಕ್ಷಕರಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದು ಮಾತ್ರವಲ್ಲದೆ ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬದುಕಲು ಕಲಿಸಿದ್ದಾರೆ. ಅವರ ಆರು ಮಕ್ಕಳಲ್ಲಿ ಮೂವರು ವೈದ್ಯರಾಗಿದ್ದಾರೆ ಮತ್ತು ಉಳಿದ ಮೂವರು ಶಿಕ್ಷಕ ವೃತ್ತಿಯಲ್ಲಿದ್ದಾರೆ. ಮೂವರು ವೈದ್ಯರು ಗುಬ್ಬ ಆಸ್ಪತ್ರೆಯನ್ನು ಬಸವನ ಬಾಗೇವಾಡಿಯಲ್ಲಿ ನಡೆಸುತ್ತಾರೆ.ಎಲ್ಲ ಮಕ್ಕಳೂ ಸ್ವಾವಲಂಬಿಗಳು. ಅನುಜಾರ ಪತಿ ಶ್ರೀಶೈಲ ಭಿಮ್ಮಣ್ಣ ಹಾವಿನಾಳ್ ಕೂಡ ಬಸವನ ಬಾಗೇವಾಡಿಯ ನ್ಯೂ ಹೈಸ್ಕೂಲ್ ನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ಕೃಷಿಯಲ್ಲಿ ಅವರಿಗೆ ವಿಶೇಷ ಆಸಕ್ತಿ. ಅನುಜಾ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಮೊದಲಿಗೆ ಕೆಬಿಹೆಚ್ ಪಿ ಎಸ್ ಯರನಾಳ್ ನಲ್ಲಿ 1989 – 97ರವರೆಗೆ ಸೇವೆ ಸಲ್ಲಿಸಿದ್ದಾರೆ. ಮುಂದೆ ಅವರನ್ನು ಬಸವನ ಬಾಗೇವಾಡಿಯ ಲಕ್ಷ್ಮೀನಗರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ವರ್ಗಾಯಿಸಲಾಯಿತು.

ಆಸಕ್ತಿಕರ ವಿಷಯವೆಂದರೆ, ಅವರು ಲಕ್ಷ್ಮಿನಗರ ಕಿರಿಯ ಪ್ರಾಥಮಿಕ ಶಾಲೆಗೆ ಸೇವೆಗೆ ಸೇರಿದ್ದರೂ, ಆ ಶಾಲೆಗೆ ಇಲಾಖೆಯು ಕೇವಲ ಕಾಗದದ ಮೇಲೆ ಮಾತ್ರ ಅನುಮೋದನೆ ನೀಡಿತ್ತು. ಅದಕ್ಕೆ ನಿರ್ದಿಷ್ಟವಾದ ಜಮೀನು ಅಥವಾ ಸ್ಥಳ ಯಾವುದೂ ಇರಲಿಲ್ಲ. ಶಾಲೆಯಲ್ಲಿ ಕೊಠಡಿಗಳಾಗಲೀ ಮಕ್ಕಳಾಗಲೀ ಇರಲಿಲ್ಲ. ನಾನು ಅಕ್ಷರಶ: ಅತ್ತುಬಿಟ್ಟಿದ್ದೆ. ಪಟ್ಟಣ ಪ್ರದೇಶದಲ್ಲಿ ಸೇವೆಗೆ ಸೇರಿದ್ದಕ್ಕಾಗಿ ಸಂತೋಷಗೊಂಡಿದ್ದೆ, ಆದರೆ ಶಾಲೆಯೇ ಇಲ್ಲದ್ದರಿಂದ ಮತ್ತು ತರಗತಿಗಳಾಗಲೀ ಮಕ್ಕಳಾಗಲೀ ಇಲ್ಲದ್ದರಿಂದ ಚಿಂತಿತಳಾಗಿದ್ದೆ. ಏನು ಮಾಡಬೇಕೆಂದೇ ತೋಚದವಳಾಗಿದ್ದೆ. ಸರ್ವೆ ನಡೆದು, ಬಾಡಿಗೆ ಜಾಗದಲ್ಲಿ ಶಾಲೆ ಪ್ರಾರಂಭಗೊಂಡಿತು. ಶಾಲೆಯನ್ನು ನಡೆಸುತ್ತಲೇ ಜಮೀನು ಪಡೆಯಲು ಓಡಾಡುವುದು ಒಂದು ಹೋರಾಟವೇ ಆಗಿತ್ತು. ನಾವು ಜಾಗಕ್ಕಾಗಿ ಹುಡುಕಾಡಿದೆವು, ಆದರೆ ಸರಿಯಾದ ಜಾಗಗಳಾವುವೂ ಸಿಗಲಿಲ್ಲ. ಕೊನೆಯಲ್ಲಿ, ಕೆರೆ ಪಕ್ಕದ ಪ್ರದೇಶವೊಂದರಲ್ಲಿ ನಗರಸಭೆಯ ಅಧಿಕಾರಿಗಳು ಜಾಗ ನೀಡಲು ಒಪ್ಪಿದರು. ನಮಗೆ ಜಾಗ ಸಿಕ್ಕದ್ದೇನೋ ಸಂತೋಷ ಕೊಟ್ಟಿತು, ಆದರೆ ಅದು ಮಣ್ಣಿನ ದಿಬ್ಬಗಳಿಂದ ಕೂಡಿದ ಪ್ರದೇಶವಾಗಿತ್ತು. ನಾವು ಸಮುದಾಯದವರೊಂದಿಗೆ ಮಾತನಾಡಿ ಒಂದೇ ರಾತ್ರಿಯಲ್ಲಿ ಜೆಸಿಬಿ ತರಿಸಿ ನೆಲವನ್ನು ಸಮತಟ್ಟುಗೊಳಿಸಿದೆವು’. ಮುಂದಿನ ಕೆಲಸ ಶಾಲಾ ಕಟ್ಟಡ ನಿರ್ಮಾಣ ಮಾಡುವಂತೆ ಮಾಡುವುದು. ಅನುಜಾ ಅವರು ಬಿಇಓ ಮಠಪತಿಯವರನ್ನು ಭೇಟಿಯಾದಾಗ ಅವರು ಒಂದು ಕೊಠಡಿಯನ್ನಾದರೂ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಲು ತಿಳಿಸಿದರು.

ಇನ್ನೊಂದಷ್ಟು ಚರ್ಚೆ ಮಾಡಿದ ಮೇಲೆ ಒಂದು ಕೊಠಡಿ ಸಾಕಾಗುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಮತ್ತೆ ಮೂರು ಕೊಠಡಿಗಳಿಗಾಗಿ ಮನವಿ ಸಲ್ಲಿಸಲಾಯಿತು. ಅದರಂತೆ, ಮೂರು ಕೊಠಡಿಗಳು ಮಂಜೂರಾದವು. ಮುಂದೆ, ಬಿಇಓ ಬತಕುಣಕಿಯವರ ಕಾಲದಲ್ಲಿ ಮೂರು ಕೊಠಡಿಗಳು ಮಂಜೂರಾದವು. ಹೀಗೆ, ಪ್ರಾರಂಭದಲ್ಲಿ ಭೂಮಿ ಇರಲಿಲ್ಲ, ತರಗತಿಕೋಣೆಗಳಿರಲಿಲ್ಲ, ಶಾಲೆಯಲ್ಲಿ ಮಕ್ಕಳೂ ಇರಲಿಲ್ಲ, ಈಗ ಶಾಲೆಗೆ ಸ್ವಂತ ಜಮೀನಿದೆ, ತರಗತಿ ಕೊಠಡಿಗಳಿವೆ, ಮಕ್ಕಳಿದ್ದಾರೆ ಮತ್ತು ಶಾಲೆಯ ಸುತ್ತಲೂ ಹಸಿರಿದೆ. ಜನವರಿ 2013ರಲ್ಲಿ ಅನುಜಾ ಅವರು ಅಂಬಲನೂರು ಲಂಬಾಣಿ ತಾಂಡ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಬಂದರು. ಈ ಶಾಲೆಯಲ್ಲೂ ಹಲವು ಸವಾಲುಗಳಿದ್ದವು. ಅವನ್ನೆಲ್ಲ ಅನುಜಾ ಗುಬ್ಬ ಹೇಗೆ ನಿಭಾಯಿಸಿದರು ಎನ್ನುವುದನ್ನು ನಾವು ಈ ಮೇಲಿನ ನಿರೂಪಣೆಗಳಿಂದ ನೋಡಬಹುದಾಗಿದೆ.

ಉಮಾಶಂಕರ್ ಪೆರಿಯೋಡಿ:
ಉಮಾಶಂಕರ್ ಪೆರಿಯೋಡಿಯವರು ಅಜೀಂ ಪ್ರೇಮ್‌ಜೀ ಫೌಂಡೇಷನ್ನಿನ ಕರ್ನಾಟಕ ರಾಜ್ಯ ಕಾರ್ಯಕ್ರಮದ ಮುಖ್ಯಸ್ಥರು. ಅಭಿವೃದ್ಧಿ ಕ್ಷೇತ್ರದಲ್ಲಿ ಎರಡು ದಶಕಗಳ ಕಾರ್ಯಾನುಭವ ಅವರಿಗಿದೆ. ಬುಡಕಟ್ಟು ಜನರು ಮತ್ತು ಇತರೆ ಅಭಿವೃದ್ಧಿಯ ಅಂಚಿನ ಜನವರ್ಗಗಳ ಜೊತೆ ಕೆಲಸಮಾಡಿದ್ದಾರೆ. ಫೌಂಡೇಷನ್ನಿನಲ್ಲಿ ಅವರು ೨೦೦೩ರಿಂದ ವಿಭಿನ್ನ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದಾರೆ.

ಸುನೀತ ಎಸ್ ರಾವ್:

ಸುನೀತ ಎಸ್ ರಾವ್ ಅವರು ಅವಕಾಶವಂಚಿತರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ೧೦ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ವಿಜಯಪುರ ಜಿಲ್ಲಾ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

  1. A program for schools in which cultural and literary competitions are conducted at cluster, block, and district and state levels.↩︎