ಬಾಲ್ಯ ವಿವಾಹದ ವಿರುದ್ಧದ ಹೋರಾಟ, ಹೆಣ್ಣುಮಕ್ಕಳ ಶಿಕ್ಷಣವನ್ನು ಖಾತ್ರಿಪಡಿಸಿದ ಕಥನ

ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಬೂದುಗುಂಪ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 19ರ ಸಮೀಪದಲ್ಲಿರುವ ಒಂದು ಸಣ್ಣ ಗ್ರಾಮ. ಕೊಪ್ಪಳ ತಾಲ್ಲೂಕಿನಡಿ ಬರುವ ಈ ಗ್ರಾಮದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 4342 ಇದ್ದು, 2,276 ಪುರುಷರು ಹಾಗೂ 2,066 ಮಹಿಳೆಯರಿದ್ದಾರೆ.

Pic 1 900x607

ಶಾಲೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೂದುಗುಂಪ, ಕೊಪ್ಪಳ, ಕರ್ನಾಟಕ. ಶಿಕ್ಷಕ: ಪ್ರಕಾಶ

This is a translation of the article originally written in English.

ಶಾಲೆಯ ಹಿನ್ನೆಲೆ:

ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಬೂದುಗುಂಪ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 19ರ ಸಮೀಪದಲ್ಲಿರುವ ಒಂದು ಸಣ್ಣ ಗ್ರಾಮ. ಕೊಪ್ಪಳ ತಾಲ್ಲೂಕಿನಡಿ ಬರುವ ಈ ಗ್ರಾಮದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 4342 ಇದ್ದು, 2,276 ಪುರುಷರು ಹಾಗೂ 2,066 ಮಹಿಳೆಯರಿದ್ದಾರೆ. ಒಂದು ಗ್ರಾಮ ಪಂಚಾಯಿತಿ, ಎರಡು ಸರ್ಕಾರಿ ಶಾಲೆಗಳು, ಎರಡು ಖಾಸಗಿ ಶಾಲೆಗಳು, ಆರು ಔಷಧ ಅಂಗಡಿಗಳಿದ್ದು ಗ್ರಾಮದಲ್ಲಿ ಯಾವುದೇ ಸಾರ್ವಜನಿಕ ಆರೋಗ್ಯ ಸೌಲಭ್ಯವಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿಂದುಳಿದಿರುವುದರಿಂದ ಕೊಪ್ಪಳ ಜಿಲ್ಲೆ, ಹೈದರಾಬಾದ್ ಕರ್ನಾಟಕ ಪ್ರಾಂತ್ಯದ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು ಕಲಬುರಗಿಗಳೊಂದಿಗೆ ಸಂವಿಧಾನದ 371ಜೆ ಅನುಚ್ಛೇದದಡಿ ವಿಶೇಷ ಸ್ಥಾನಮಾನ ಪಡೆದಿದೆ. ಈ ಅನುಚ್ಛೇದವು ಶಿಕ್ಷಣಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ಮತ್ತು ವೃತ್ತಿಪರ ತರಬೇತಿ ಸಂಸ್ಥೆಗಳಲ್ಲಿ ಸ್ಥಾನ ಮೀಸಲಾತಿಯನ್ನು (ಹುಟ್ಟಿನಿಂದ ಅಥವಾ ಕಾಯಂ ವಾಸಿಗಳಿಗೆ) ಕಲ್ಪಿಸುತ್ತದೆ.

ಬೂದುಗುಂಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಜಿಎಚ್‍ಪಿಎಸ್)ಯು ನಿಶ್ಶಬ್ಧವಾದ ರಸ್ತೆಯ ಕೊನೆಯಲ್ಲಿದ್ದು, ಎರಡೂ ಬದಿಗಳಲ್ಲಿ ಮನೆಗಳಿವೆ. ತಮ್ಮ ಶಾಲೆಯಲ್ಲಿ ಹೆಚ್ಚು ಸಂಖ್ಯೆಯ ಮಕ್ಕ ಳಿದ್ದಾರೆ ಎಂದು ಶಿಕ್ಷಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಶಾಲೆಯಲ್ಲಿ 693 ಮಕ್ಕಳು (384 ಬಾಲಕರು ಹಾಗೂ 309 ಬಾಲಕಿಯರು) ಹಾಗೂ 13 ಶಿಕ್ಷಕರಿದ್ದಾರೆ. ಹೆಚ್ಚಿನ ಮಕ್ಕಳು ಬೂದು ಗುಂಪದವರಾಗಿದ್ದು, ಕೆಲವರು ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಬರುತ್ತಾರೆ. ಅವರೆಲ್ಲರೂ ಶಾಲೆಯ ಸಮೀಪದಲ್ಲೇ ಇರುವ ಸರ್ಕಾರಿ ವಸತಿನಿಲಯದಲ್ಲಿ ನೆಲೆಸಿದ್ದಾರೆ. ಹೆಚ್ಚಿನ ಶಿಕ್ಷಕರು 25 ಕಿಮೀ ದೂರದಲ್ಲಿರುವ ಕೊಪ್ಪಳ ನಗರದಿಂದ ಬರುತ್ತಾರೆ. ಹೆಚ್ಚಿನ ಮಕ್ಕಳ ಪೋಷಕರು ಕೃಷಿ ಕಾರ್ಮಿಕರು: ಕೆಲವರು ಮಾತ್ರ ಜಮೀನುದಾರರು ಹಾಗೂ ಗುತ್ತಿಗೆದಾರರು. ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಎಂಟು ಕೊಠಡಿಗಳು, ಮುಖ್ಯ ಗುರುಗಳ ಕೊಠಡಿ, ಬಿಸಿಯೂಟ ತಯಾರಿಕೆಗೆ ಅಡುಗೆ ಕೋಣೆ ಹಾಗೂ ಅಜೀಂ ಪ್ರೇಮ್‍ಜಿ ಫೌಂಡೇಶನ್ನಿನ ಶಿಕ್ಷಕರ ಕಲಿಕಾ ಕೇಂದ್ರವಿರುವ ಒಂದು ಕೊಠಡಿಯಿದ್ದು, ಎಲ್ಲವೂ ಆಟದ ಮೈದಾನಕ್ಕೆ ತೆರೆದುಕೊಳ್ಳುತ್ತವೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯಗಳಿವೆ. ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಹುತೇಕ ತರಗತಿ ಕೋಣೆಗಳಲ್ಲಿ ಬೆಂಚು ಮತ್ತು ಡೆಸ್ಕ್ ಇಲ್ಲ ಹಾಗೂ ಹೆಚ್ಚಿನ ಮಕ್ಕಳು ಪಾದರಕ್ಷೆ ಧರಿಸಿಲ್ಲ. ಆದರೆ, ತಮ್ಮ ಪರಿಸ್ಥಿತಿಯಲ್ಲಿನ ಅಡೆತಡೆಗಳು ಬೂದುಗುಂಪ ಶಾಲೆಯ ಮಕ್ಕಳ ಸ್ಪಂದನಶೀಲ ಚೈತನ್ಯವನ್ನು ಹತ್ತಿಕ್ಕುವಲ್ಲಿ ವಿಫಲವಾಗಿವೆ. ಶಾಲಾ ಕೊಠಡಿ ಮತ್ತು ಆಟದ ಮೈದಾನದಿಂದ ಹೊರಬರುವ ಹರ್ಷೋದ್ಗಾರ, ಅವರ ಮುಖದಲ್ಲಿನ ಮಂದಹಾಸ, ತುಂಟತನ ಚಿಮ್ಮುತ್ತಿರುವ ಕಣ್ಣುಗಳು ಮತ್ತು ಸಂದರ್ಶಕರೊಡನೆ ಸಂವಾದ ನಡೆಸಬೇಕೆಂಬ ಕುತೂಹಲ ವೀಕ್ಷಕರನ್ನು ಅವರ ಕಲಿಕಾ ಜಗತ್ತಿಗೆ ಉತ್ಸಾಹದಿಂದ ಆಹ್ವಾನಿಸುತ್ತದೆ. ಅದೇ ಸಮಯದಲ್ಲಿ, ಮನುಷ್ಯರ ಅನುಭವಗಳ ಶ್ರೀಮಂತಿಕೆ, ಅಗಾಧತೆ ಹಾಗೂ ಆಳ ಮತ್ತು ಸಮಾಜದ ಅಂಚಿನಲ್ಲಿರುವ ಜನರ ಪುಟಿದೇಳುವ ಸಾಮರ್ಥ್ಯವನ್ನು ಅರಿಯಬೇಕೆಂಬುದರತ್ತ ಮೆಲ್ಲಗೆ ನಮ್ಮನ್ನು ಪ್ರೇರೇಪಿಸುತ್ತದೆ.

ಪ್ರಕಾಶ್: ವೈಯಕ್ತಿಕ ಚಿತ್ರಣ

ಟಿಸಿಎಚ್ (ಟೀಚರ್ ಸರ್ಟಿಫಿಕೇಟ್ ಹೈಯರ್) ಶಿಕ್ಷಣ ಪಡೆದಿರುವ ವಿಜ್ಞಾನ ಶಿಕ್ಷಕ ಪ್ರಕಾಶ್, ಚಿತ್ರದುರ್ಗ ಜಿಲ್ಲೆಯವರು. ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ, ಕಾಲೇಜಿನಲ್ಲಿದ್ದಾಗಲೇ ಕೆಲಸ ಮಾಡಿ ಹಣ ಸಂಪಾದಿಸಲು ಮುಂದಾಗಬೇಕಾಯಿತು. ಯೌವನ ಕಾಲದ ಬಡತನದ ಸಂಕಷ್ಟ ಹಾಗೂ ಯಾತನೆಯನ್ನು ಹಾಗೂ ಶಿಕ್ಷಕ ವೃತ್ತಿಯನ್ನು ಸೇರಲು ನಡೆಸಿದ ತಮ್ಮ ಕ್ಲಿಷ್ಟಕರ ಪ್ರಯಾಣವನ್ನು ಕುರಿತು ಪ್ರಕಾಶ್ ಮಾಹಿತಿ ಹಂಚಿಕೊಂಡರು. ಶಿಕ್ಷಕನಾಗಬೇಕೆಂಬ ತಮ್ಮ ಹಂಬಲ, ಅದರಲ್ಲೂ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಕಲಿಸಬೇಕೆಂಬ ತಮ್ಮ ಕಾಳಜಿ ಹಾಗೂ ತಾವು ಶಿಕ್ಷಕನಾಗಿ ನೇಮಕಗೊಂಡ ಪ್ರಕ್ರಿಯೆಯಲ್ಲಿ ಬಗೆಹರಿಸಿಕೊಂಡ ಕಾನೂನು ಸಮಸ್ಯೆಗಳನ್ನು ಕುರಿತು ಮಾತನಾಡಿದರು. 2002ರಲ್ಲಿ ಬೂದುಗುಂಪ ಶಾಲೆಗೆ ಅವರನ್ನು ವಿಜ್ಞಾನ ಶಿಕ್ಷಕರಾಗಿ ನೇಮಿಸಲಾಯಿತು. ಪ್ರಸ್ತುತ ಅವರು ಪ್ರಾಥಮಿಕ ತರಗತಿಗಳಿಗೆ ವಿಜ್ಞಾನ ಮತ್ತು ಗಣಿತಶಾಸ್ತ್ರವನ್ನು ಕಲಿಸುತ್ತಿದ್ದಾರೆ.

ಪ್ರಕಾಶ್ ಅವರ ಶೈಕ್ಷಣಿಕ ಕಾಣ್ಕೆ ಮಕ್ಕಳ ಯೋಗಕ್ಷೇಮವನ್ನು ದೃಷ್ಟಿಯಲ್ಲಿರಿಸಿಕೊಂಡಿದೆ. ಬಡ ಕುಟುಂಬಗಳ ಈ ಮಕ್ಕಳಿಗೆ ಸಮಾಜ ನ್ಯಾಯ ಒದಗಿಸಬೇಕೆಂದು ಬಯಸುವ ಅವರು, ಮಕ್ಕಳ ಶಿಕ್ಷಣ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಮುಂದುವರಿಕೆಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಮಕ್ಕಳು ಹಾಗೂ ಶಿಕ್ಷಣ ಕುರಿತ ಅವರ ಬದ್ಧತೆಯನ್ನು ನಿರೂಪಿಸಲು 

ನಾನು ಅವರ ಕೆಲಸದ ಎರಡು ಗಮನಾರ್ಹ ಆಯಾಮಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅವೆಂದರೆ, ಬಾಲ್ಯ ವಿವಾಹದ ನಿಲುಗಡೆ ಹಾಗೂ ವಿಜ್ಞಾನ ಬೋಧನೆಯಲ್ಲಿನ ಅವರ ಕಾರ್ಯೋತ್ಸಾಹ. ಇದನ್ನು ವಿವರಿಸಲು ಪ್ರಕಾಶ್ ಅವರ ಕೆಲಸವನ್ನು ಮಕ್ಕಳೊಂದಿಗೆ ಶಾಲಾ ಕೊಠಡಿಯ ಹೊರಗೆ’ ಹಾಗೂ ಮಕ್ಕಳೊಂದಿಗೆ ಶಾಲಾ ಕೊಠಡಿಯೊಳಗೆ’ ಎಂದು ಪರಿಕಲ್ಪಿಸಿಕೊಳ್ಳಲಾಗಿದೆ ಮತ್ತು ಮಕ್ಕಳಿಗೆ ಕಲಿಸುವ ಅವರ ವೃತ್ತಿಪರ ಕೆಲಸವನ್ನು ನಿರಂತರತೆಯ ಹಂದರದಲ್ಲಿ ವೀಕ್ಷಿಸಲು ವಾಚಕರನ್ನು ಆಹ್ವಾನಿಸಲಾಗುತ್ತಿದೆ.

ಮಕ್ಕಳೊಂದಿಗೆ ಶಾಲಾ ಕೊಠಡಿಯ ಹೊರಗೆ:

ಕೊಪ್ಪಳದಲ್ಲಿ ಹೆಣ್ಣು ಮಕ್ಕಳ ಶಿಕ್ಷಣವನ್ನು ಬೆಂಬಲಿಸುವಲ್ಲಿ ಪ್ರಕಾಶ್ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಕೊಪ್ಪಳ ಹಾಗೂ ಸುತ್ತಮುತ್ತ ಇಂದಿಗೂ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿದ್ದು, ಮಾನವ ಹಕ್ಕುಗಳನ್ನು ನೇರವಾಗಿ ಉಲ್ಲಂಘಿಸಿ, ಹಿರಿಯ ಪ್ರಾಥಮಿಕ ಇಲ್ಲವೆ ಪ್ರೌಢ ಶಾಲೆ ಹಂತದಲ್ಲಿ ಇರುವಾಗಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಲಾಗುತ್ತದೆ. ಹತ್ತನೇ ತರಗತಿ ಬಳಿಕ ಬಹುತೇಕ ಕುಟುಂಬಗಳು ಹೆಣ್ಣುಮಕ್ಕಳ ಶಿಕ್ಷಣವನ್ನು ನಿಲ್ಲಿಸುತ್ತವೆ. ಶಾಲೆಯನ್ನು ತೊರೆಯುವವರು ತಾವಾಗಿಯೇ ಶಾಲೆಯನ್ನು ಬಿಡುವುದಿಲ್ಲ. ಬದಲಿಗೆ, ಆಳವಾಗಿ ಬೇರೂರಿರುವ ಸಾಂಸ್ಕೃತಿಕ ಆಚರಣೆಗಳು, ಲಿಂಗ ತಾರತಮ್ಯ, ಆರ್ಥಿಕ ಸಮಸ್ಯೆಗಳು ಹಾಗೂ ಬಾಲ್ಯವಿವಾಹದ ನಕಾರಾತ್ಮಕ ಪರಿಣಾಮಗಳ ಕುರಿತು ಅರಿವು ಇಲ್ಲದೆ ಇರುವುದು ಇತ್ಯಾದಿಯ ಸಂಕೀರ್ಣ ಸರಮಾಲೆಗಳಿಂದ ಅವರನ್ನು ಶಾಲೆಯಿಂದ ಹೊರತಳ್ಳಲಾಗುತ್ತದೆ’ (ಸಿನ್ಹಾ ಮತ್ತು ರೆಡ್ಡಿ, 2011).. ಈ ಹೆಣ್ಣು ಮಕ್ಕಳು ಯಾವುದೇ ತಪ್ಪು ಮಾಡದಿದ್ದರೂ, ಶಾಲಾ ವ್ಯವಸ್ಥೆಯಿಂದ ಹೊರತಳ್ಳಲ್ಪಡುತ್ತಾರೆ. ಈ ಆಚರಣೆಗಳಿಂದ ಹೆಣ್ಣುಮಕ್ಕಳು ತಮ್ಮ ಮನಸ್ಸು ಹಾಗೂ ದೇಹದ ಹಕ್ಕಿಗೆ ಸಂಬಂಧಿಸಿದ ವಿಷಯಗಳ ಕುರಿತು ದನಿಯಿಲ್ಲದವರಾಗುತ್ತಾರೆ. ಪ್ರಕಾಶ್ರ ಪ್ರಕಾರ, ಇಂಥ ಆಚರಣೆಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಶಾಲೆಗೆ ಆಗಮಿಸುವ ಈ ಮೊದಲ ಪೀಳಿಗೆಯ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳಲು ಪ್ರಕಾಶ್ ಏನು ಮಾಡುತ್ತಾರೆ ಮತ್ತು ಹೆಣ್ಣು ಮಕ್ಕಳಿಗೆ ಆಗುತ್ತಿರುವ ನಿರಂತರ ಅನ್ಯಾಯವನ್ನು ಹೇಗೆ ಎದುರಿಸುತ್ತಾರೆ?

ಬಾಲ್ಯ ವಿವಾಹದ ನಕಾರಾತ್ಮಕ ಪರಿಣಾಮ ಹಾಗೂ ಶಾಸನ ಅದನ್ನು ನಿಷೇಧಿಸಿದೆ ಎಂಬ ಅರಿವು ಮೂಡಿಸುವಲ್ಲಿ ಪ್ರಕಾಶ್ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂತಹ ಹಲವು ವಿವಾಹಗಳನ್ನು ನಿಲಿಸಿಯೂ ಇದ್ದಾರೆ. ಒಂಭತ್ತನೇ ತರಗತಿಯ ಹುಡುಗಿಯೊ ಬ್ಬಳು ಮದುವೆ ಆಗುತ್ತಿದ್ದಾಳೆ ಎನ್ನುವುದು ಪ್ರಕಾಶ್‍ಗೆ ಗೊತ್ತಾದಾಗ, ಆಕೆಯ ಪೋಷಕರನ್ನು ಹಲವು ಬಾರಿ ಭೇಟಿಯಾಗಿ ಅವರ ಮನವೊಲಿಸಿ ಮದುವೆಯಾಗುವುದನ್ನು ನಿಲ್ಲಿ ಸಿದರು. ಆ ಹುಡುಗಿ ಈಗ ಪಿಯುಸಿ (ಪ್ರಿಯೂನಿವರ್ಸಿಟಿ ಕೋರ್ಸ್) ಮಾಡುತ್ತಿದ್ದಾಳೆ. ಇನ್ನೊಂದು ಪ್ರಕರಣದಲ್ಲಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯ ವಿವಾಹ ನಿಶ್ಚಯವಾಗಿ 2 ವರ್ಷ ಆಗಿತ್ತು. ಆಕೆ ಓದಿನಲ್ಲಿ ಮುಂದೆ ಇದ್ದರೂ, ಪೋಷಕರು ಶಿಕ್ಷಣವನ್ನು ನಿಲ್ಲಿಸಿ ಮದುವೆ ಮಾಡಲು ಮುಂದಾಗಿದ್ದರು. ಪ್ರಕಾಶ್ ಮಧ್ಯಪ್ರವೇಶಿಸಿ ಮನವೊಲಿಸಿದ್ದರಿಂದ ನಿಶ್ಚಿತಾರ್ಥ ರದ್ದಾಯಿತು. ಆಕೆ ಕೂಡ ಈಗ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇನ್ನೊಂದು ಪ್ರಕರಣ ಹೀಗಿದೆ: ಕುಟುಂಬದ ಹಿರಿಯ ಮಗಳಿಗೆ ಬೇಗ ಮದುವೆ ಮಾಡಿದ್ದರು ಎಂಬ ಅರಿವಿದ್ದ ಪ್ರಕಾಶ್, ಕಿರಿಯ ಮಗಳು ಋತುಮತಿಯಾದ ಕೂಡಲೆ ಮುಂಜಾಕರೂಕತೆಯಿಂದ ಕುಟುಂಬದವರು ಆಕೆಯ ಮದುವೆ ಕುರಿತು ಮಾತು ಆರಂಭಿಸಿದಾಗಲೆ, ಪೋಷಕರನ್ನು ಭೇಟಿ ಮಾಡಿ ಆರ್ಥಿಕ ನೆರವು ಕ್ರೋಢೀಕರಿಸಿದರಲ್ಲದೆ, ಕುಟುಂಬಕ್ಕೆ ಎಲ್ಲ ನೆರವು ನೀಡುವ ಆಶ್ವಾಸನೆ ಕೊಟ್ಟು ಮದುವೆ ರದ್ದಾಗುವಂತೆ ಮಾಡಿದರು. ಹುಡುಗಿಗೆ 18 ವರ್ಷ ಆದ ಬಳಿಕವಷ್ಟೇ ಆಕೆಯ ವಿವಾಹ ನಡೆಯಿತು.

ಪ್ರಕಾಶ್ ಬಾಲಕರ ಮದುವೆಯನ್ನೂ ತಡೆದಿದ್ದು, ಅವರೂ ವಿದ್ಯಾಭ್ಯಾಸ ಮುಂದುವರಿಸುವಂತೆ ಮಾಡಿದ್ದಾರೆ. ಇಂಥ ಹಲವು ಪ್ರಕರಣಗಳನ್ನು ಉಲ್ಲೇಖಿಸಿದ ಪ್ರಕಾಶ್, ಶಾಲೆ ಮತ್ತು ಸಮುದಾಯ ದಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಯ ಅಗಾಧತೆ ಹಾಗೂ ಅವನ್ನು ಎದುರಿಸಲು ಬೇಕಾದ ಎದೆಗಾರಿಕೆಯ ಬಗ್ಗೆ ಅರಿವು ಮೂಡಿಸಿದರು. ಬಾಲಕಿಯರು ಶಿಕ್ಷಣವನ್ನು ಮುಂದುವರಿಸದೆ ಇರಲು ಹಾಗೂ ಬಾಲ್ಯ ವಿವಾಹಕ್ಕೆ ಅವರಿಗೆ ಪ್ರತ್ಯೇಕ ಶಾಲೆಗಳು ಇಲ್ಲದೆ ಇರುವುದು ಕಾರಣ ಎನ್ನುವ ಸಂಶೋಧನಾ ಅಧ್ಯಯನಗಳನ್ನು ಪ್ರಕಾಶ್ ಒಪ್ಪಲಿಲ್ಲ. ಬದಲಾಗಿ, ದೊಡ್ಡ ಗಾತ್ರದ ಕುಟುಂಬಗಳು, ಕಿತ್ತು ತಿನ್ನುವ ಬಡತನ, ಮನೆಗಳಲ್ಲಿ ಜಾಗದ ಕೊರತೆ, ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಸ್ಥಿತಿ, ಮಕ್ಕಳ ಆರೋಗ್ಯ ಮತ್ತು ಭವಿಷ್ಯ ಕುರಿತು ಅರಿವು ಇಲ್ಲದೆ ಇರುವುದು, ಬಾಲ್ಯದಲ್ಲೇ ಹೆಣ್ಣುಮಕ್ಕಳ ವಿವಾಹ ಮಾಡುವಲ್ಲಿ ಕುಟುಂಬಗಳ ಪ್ರಭಾವ.. ಇವೆಲ್ಲವೂ ಬಾಲ್ಯವಿವಾಹಕ್ಕೆ ಕಾರಣ ಎನ್ನುತ್ತಾರೆ ಪ್ರಕಾಶ್. ಬಾಲ್ಯವಿವಾಹದಿಂದ ತಮ್ಮ ಮೇಲಿನ ಹೊರೆ ಕಡಿಮೆಯಾಗುತ್ತದೆ ಎನ್ನುವುದು ಪೋಷಕರ ಎಣಿಕೆ.

ಚಾಲ್ತಿಯಲ್ಲಿರುವ ಆಚರಣೆಗಳ ವಿರುದ್ಧ ನಡೆದು ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಲು ಪ್ರಕಾಶ್ ಅವರಿಗೆ ಇರುವ ಪ್ರೇರಣೆಗಳಾದರೂ ಏನು? ಬಾಲ್ಯವಿವಾಹ ನಿಲ್ಲಿಸಲು ಅವರು ನಿರ್ದಿಷ್ಟವಾಗಿ ಪೋಷಕರು ಮತ್ತು ಹೆಣ್ಣುಮಕ್ಕಳ ಮುಂದಿರಿಸುವ ವಾದಗಳಾವುವು? ಇಂತಹ ಮದುವೆಗಳನ್ನು ನಿಲ್ಲಿಸಲು ಅವರು ನಿರ್ದಿಷ್ಟವಾಗಿ ಏನು ಮಾಡುತ್ತಾರೆ? ಶಾಲೆಯಲ್ಲಿ ಅವರು ತೆಗೆದುಕೊಳ್ಳುವ ಪೂರಕವಾದ ಹಾಗೂ ತಡೆಯೊಡ್ಡುವ ಕ್ರಮಗಳಾದರೂ ಏನು? ಸಮುದಾಯದ 

ಸಾಂಸ್ಕೃತಿಕ ಆಚರಣೆಗಳ ವಿರುದ್ಧ ಧೈರ್ಯವಾಗಿ ನಿಲ್ಲಲು ಅವರಿಗೆ ಇರುವ ಬೆಂಬಲವಾದರೂ ಯಾವುದು? ಪ್ರಕಾಶ್ ತಮ್ಮ ಅನುಭವಗಳನ್ನು ವಿವರಿಸುತ್ತಿದ್ದಾಗ ಮನಸ್ಸಿನಲ್ಲಿ ಈ ಕೆಲವು ಪ್ರಶ್ನೆಗಳು ಹಾದು ಹೋಗುತ್ತವೆ.

ಮಕ್ಕಳ ಶಿಕ್ಷಣ ಹಾಗೂ ಅವರ ಯೋಗಕ್ಷೇಮದ ಬಗೆಗಿನ ಕಾಳಜಿ ಪ್ರಕಾಶ್ ಅವರ ಕೆಲಸಕ್ಕೆ ಸ್ಪೂರ್ತಿ ತುಂಬುತ್ತದೆ ಎನ್ನಬಹುದು. ಅವರು ಹೇಳುತ್ತಾರೆ,”ಮಕ್ಕಳ ಒಳಿತು ಶಿಕ್ಷಣದ ತಿರುಳು. ಹೆಣ್ಣುಮಕ್ಕಳು ಸ್ವತಂತ್ರರಾಗುವಂತೆ ಮಾಡಬೇಕು,’. ಮಕ್ಕಳ ಜೊತೆ ನೇರ ಸಂವಹನ ಅವರು ಆಯ್ದುಕೊಂಡ ಪ್ರಾಥಮಿಕ ಮಾರ್ಗ. ಆಗಾಗ ತರಗತಿಯಲ್ಲಿ 10 – 15 ನಿಮಿಷ ಶಿಕ್ಷಣದ ಪ್ರಾಮುಖ್ಯ ತೆ ಮತ್ತು ಮೌಲ್ಯವನ್ನು ಕುರಿತು ಅವರು ಮಾತಾಡುತ್ತಾರೆ. ಆ ಮೂಲಕ ಬಾಲ್ಯವಿವಾಹದ ಪರಿಣಾಮಗಳನ್ನು ಕುರಿತು ಪ್ರಸ್ತಾಪಿಸಿ, ಅದರಲ್ಲೂ ಹೆಣ್ಣುಮಕ್ಕಳು ಬಾಲ್ಯವಿವಾಹವನ್ನು ಮುಂದೂಡುವುದು, ಶಿಕ್ಷಣವನ್ನು ಮುಂದುವರೆಸುವುದು ಹಾಗೂ ಸ್ವತಂತ್ರರಾಗುವ ಅಗತ್ಯತೆ ಕುರಿತು ತಿಳಿಹೇಳುತ್ತಾರೆ. ಇದರಿಂದ, ಮನಸ್ಥಿತಿಯನ್ನು ಬದಲಿಸುವ ಮೊದಲ ಪಾಠ ತರಗತಿ ಕೊಠಡಿಯಲ್ಲಿ ಪ್ರಾರಂಭವಾಗುತ್ತದೆ. ಮಕ್ಕಳು ತಮ್ಮ ಕುಟುಂಬ ಹಾಗೂ ಇತರ ಕುಟುಂಬಗಳಲ್ಲಿ ಆಗುವ ಮದುವೆಗಳನ್ನು ಕುರಿತು ಮುಕ್ತವಾಗಿ ಚರ್ಚಿಸುತ್ತಾರೆ. ಪೋಷಕರು ಮಗುವಿನ ಭವಿಷ್ಯ ಕುರಿತು ಮಾರ್ಗದರ್ಶನ ಪಡೆಯಲು ಅಥವಾ ವಿಷಯ ತಿಳಿಸಲು ಪ್ರಕಾಶ್ ಅವರನ್ನು ಭೇಟಿಯಾಗುವುದೂ ಇದೆ. ಬಾಲ್ಯವಿವಾಹ ಕಾನೂನುಬಾಹಿರವಾಗಿರುವುದು, ಮಕ್ಕಳ ಆರೋಗ್ಯದ ಮೇಲೆ ಅದು ಬೀರುವ ಪರಿಣಾಮ ಹಾಗೂ ಹೆಣ್ಣುಮಕ್ಕಳು ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಬೇಕಾದ ಅಗತ್ಯ ಕುರಿತು ಪ್ರಕಾಶ್ ಅರಿವು ಮೂಡಿಸುತ್ತಾರೆ.

ಕುಟುಂಬವೊಂದು ತಮ್ಮ ಮಗುವಿನ ಮದುವೆಗೆ ಮುಂದಾಗಿದೆ ಎಂದು ತಿಳಿದ ತಕ್ಷಣ ಅವರು ಆ ಕುಟುಂಬಕ್ಕೆ ಭೇಟಿ ನೀಡಿ, ಕಾನೂನು ಸಮಸ್ಯೆ ಎದುರಾಗುವ ಕುರಿತು ಅರಿವು ಮೂಡಿಸಿ, ಅನುಚ್ಛೇದ 371ಜೆ ಅಡಿ ಶಿಕ್ಷಣ ಮುಂದುವರಿಸಬೇಕಾದ ಅನಿವಾರ್ಯತೆ ಕುರಿತು ತಿಳಿಹೇಳಿ, ಆರ್ಥಿಕ ಸಮಸ್ಯೆ ಏನಾದರೂ ಇದೆಯೇ ಎಂದು ವಿಚಾರಿಸುವುದಲ್ಲದೆ, ಹೆಣ್ಣುಮಕ್ಕಳನ್ನು ಮತ್ತೆ ಶಾಲೆಗೆ ಕರೆತರಲು ಪ್ರಯತ್ನ ಮಾಡುತ್ತಾರೆ. ಕೆಲವೊಮ್ಮೆ ಇಂಥ ನಾಚಿಕೆಗೇಡು ಕೆಲಸ ಮಾಡುತ್ತಿರುವುದಕ್ಕೆ ಪೋಷಕರನ್ನು ಛೇಡಿಸುವುದೂ ಇದೆ. ಕೆಲವೊಮ್ಮೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದೆಂದು ಭಯ ಹುಟ್ಟಿಸುವುದೂ ಇದೆ. ಯಾರಾದರೂ ಪೋಷಕರು ಬಾಲ್ಯವಿವಾಹಕ್ಕೆ ಆಹ್ವಾನಿಸಿದರೆ, ಇಂಥ ಹೀನ ಕೃತ್ಯದಲ್ಲಿ ಪಾಲುದಾರನಾಗುವುದಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸುತ್ತಾರೆ. ಗಂಡುಮಕ್ಕಳ ಬಾಲ್ಯ ವಿವಾಹಕ್ಕೆ ಮುಂದಾಗುವ ಕುಟುಂಬಗಳಿಗೆ POCSO ಕಾಯಿದೆಯಡಿ ಶಿಕ್ಷೆಗೆ ಒಳಗಾಗುತ್ತೀರಿ ಎಂದು ಎಚ್ಚರಿಸುತ್ತಾರೆ. ನಮ್ಮ ಕುಟುಂಬ ಹಾಗೂ ಮಕ್ಕಳನ್ನು ನೀವು ನೋಡಿಕೊಳ್ಳುತ್ತೀರಾ ಎಂದು ಪೋಷಕರ ಅಣುಕು ಮಾತುಗಳಿಂದ ಅವಮಾನಕ್ಕೀಡಾಗಿದ್ದೂ ಇದೆ. ಆದರೆ, ಇದರಿಂದ ಪ್ರಕಾಶ್ ವಿಚಲಿತರಾಗಿಲ್ಲ. ಅವರು ಹೇಳುತ್ತಾರೆ,”ಸಮಾಜದಲ್ಲಿ ಕೆಲವು ನಕಾರಾತ್ಮಕ ವಿಷಯಗಳಿವೆ. ಆದರೆ, ನಾನು ನಾನಾಗಿಯೇ ಮುಂದುವರಿಯುತ್ತೇನೆ’

ಶಾಲೆ ತೊರೆಯುವ ಮಕ್ಕಳ ಸಂಖ್ಯೆಯನ್ನು ಕಡಿಮೆಗೊಳಿಸುವ ಕೆಲಸ ಮುಂದುವರಿಸಲು ಅವರಿಗೆ ಸ್ಪೂರ್ತಿಯಾಗಿರುವುದು, ಪೋಷಕರು ಹಾಗೂ ಸಮುದಾಯದ ಸದಸ್ಯರಿಂದ ಅವರಿಗೆ ಸಿಗುತ್ತಿರುವ ಗೌರವ. ಸಮುದಾಯದ ಹಲವರಿಗೆ ಮತದಾರರ ಗುರುತಿನ ಚೀಟಿ (ವೋಟರ್ ಐಡಿ ಕಾರ್ಡ್) ಪಡೆದುಕೊಳ್ಳಲು ನೆರವು ನೀಡಿರುವುದರಿಂದ, ಅವರ ನಂಬಿಕೆ ಹಾಗೂ ವಿಶ್ವಾಸ ಗಳಿಸಿಕೊಂಡಿದ್ದಾರೆ. ಅಜೀಂ ಪ್ರೇಮ್‍ಜಿ ಫೌಂಡೇಶನ್ನಿನ ಸದಸ್ಯರು ಶಿಕ್ಷಕರ ಕಲಿಕಾ ಕೇಂದ್ರದ ಮೂಲಕ ನೀಡುತ್ತಿರುವ ಬೆಂಬಲವನ್ನು ಕುರಿತು ಸಹ ಅವರು ಮಾತನ್ನಾಡಿದರು. ಸಹೋದ್ಯೋಗಿಗಳು ತಮ್ಮ ಕೆಲಸದಲ್ಲಿ ಸಹಕಾರ ಹಾಗೂ ನೆರವು ನೀಡುತ್ತಾರೆ ಎಂದೂ ಗುರುತಿಸುತ್ತಾರೆ.

ಮಾನವನ ಘನತೆ ಮತ್ತು ಜೀವಕ್ಕೆ ಸಂಬಂಧಿಸಿದಂತೆ, ಆಯ್ಕೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯದ ನಿರಾಕರಣೆ ತೀವ್ರ ಆತಂಕಕ್ಕೆ ಕಾರಣವಾಗುವ ಅಂಶವಾಗಿದೆ. ಸರತಿ ಸಾಲಿನ ಕಟ್ಟಕಡೆಯಲ್ಲಿ ನಿಂತ ವ್ಯಕ್ತಿಯ ಆಶಯಗಳೇನು ಎನ್ನುವ ಬಗ್ಗೆ ಆಲೋಚಿಸಬೇಕು ಎಂದು ಅದು ಒತ್ತಾಯಿಸುತ್ತದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಶಿಕ್ಷಿತರನ್ನಾಗಿಸಬೇಕು ಎಂದುಕೊಂಡಿರುವ ಪೋಷಕರ ಆಶಯಕ್ಕೆ ಅನಪೇಕ್ಷಣೀಯ ಸಾಮಾಜಿಕ ಆಚರಣೆಗಳು ಭಂಗ ತರುತ್ತವೆಯೇ? ಪ್ರಕಾಶ್ ಅವರ ಕಥನಗಳು ಪೋಷಕರ ಆಶಯಗಳು ನಿರಾಶಾದಾಯಕವಾಗಿವೆ ಎಂದೇನೂ ಹೇಳುವುದಿಲ್ಲ. ಪ್ರಕಾಶ್ ಶಾಲೆಗೆ ಸೇರಿದ ಹೊಸದರಲ್ಲಿ ಹಾಗೂ ಪೋಷಕರು ತಮ್ಮ ಮಕ್ಕಳಿಗೆ (ವಿಶೇಷವಾಗಿ ಉನ್ನತ ತರಗತಿಗಳಲ್ಲಿ) ಶಿಕ್ಷಣ ಅಗತ್ಯವಿಲ್ಲ ಎಂದುಕೊಂಡಿದ್ದ 2000ರ ಆರಂಭಕ್ಕೆ ಹೋಲಿಸಿದರೆ, ಈಗ ಪರಿಸ್ಥಿತಿ ಬದಲಾಗಿದೆ ಮತ್ತು ಕೊಪ್ಪಳದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಗಂಡುಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆಳವಾಗಿ ವಿಶ್ಲೇಷಿಸಬೇಕಿರುವ ಅಂಶವೆಂದರೆ ಹೆಣ್ಣುಮಕ್ಕಳ ಶಿಕ್ಷಣ ಕ್ರಮೇಣ ಹೇಗೆ ಮುಂದುವರೆದಿದೆ ಅ ಎಂದು. ಶಿಕ್ಷಣ ಮತ್ತು ವೃತ್ತಿಪರ ತರಬೇತಿಯಲ್ಲಿ ಸಮಾನಾವಕಾಶ ನೀಡುವ 371ಜೆ ಅನುಚ್ಛೇದದ ಪ್ರಸ್ತಾವಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಪೋಷಕರನ್ನು ಪ್ರೋತ್ಸಾಹಿಸಿದೆಯೇ? ಪ್ರಕಾಶ್ ಅವರ ಕ್ರಮಗಳು ಈ ದಿಕ್ಕಿನೆಡೆ ಸಾಗಿದ್ದು, ಜನರ ಮನಸ್ಸಿನ ಆಳದಲ್ಲಿ ಉಳಿದುಕೊಂಡಿರುವ ಕೆಲವು ಸಾಮಾಜಿಕ – ಸಾಂಸ್ಕೃತಿಕ ಆಚರಣೆಗಳು ಹಾಗೂ ದೊಡ್ಡ ಕುಟುಂಬ ಹೇರುವ ಹೊರೆ ಕುರಿತು ಅರಿವು ಇಲ್ಲದೆ ಇರುವುದು ಸವಾಲಾಗಿ ನಿಂತಿವೆ.

ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶಾಲೆಯಿಂದ ಹೊರಹೋದ ಬಳಿಕವೂ ಅವರ ಕುರಿತ ಪ್ರಕಾಶ್ರ ಕಾಳಜಿ ಮುಂದುವರಿಯುತ್ತದೆ. ಪ್ರಾಥಮಿಕ ಶಾಲೆ ಮುಗಿಸಿದವರು ಮುಂದಿನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆಯೇ ಎಂಬುದನ್ನು ಹತ್ತಿರದ ಪ್ರೌಢಶಾಲೆಗೆ ಭೇಟಿ ನೀಡಿ ಆಗಿಂದಾಗ್ಗೆ ಪ್ರಕಾಶ್ ಗಮನಿಸುತ್ತಿರುತ್ತಾರೆ. ಒಂದು ವೇಳೆ ವಸತಿನಿಲಯದಲ್ಲಿರುವ ಬಾಲಕರು (ಅಂದಾಜು 100 ಬಾಲಕರಿರಬಹುದು) ಶಾಲೆಗೆ ಗೈರುಹಾಜರಾದರೆವಾರ್ಡನ್ರಿಗೆ ಕರೆ ಮಾಡಿ ವಿಚಾರಿಸುತ್ತಾರೆ. ಶಾಲೆಯನ್ನು ಪ್ರೌಢಶಾಲೆಯಾಗಿ ವಿಸ್ತರಿಸಲು ಭೂಮಿಗಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನಷ್ಟು ಮಕ್ಕಳಿಗೆ ಅವಕಾಶ ನೀಡುವ ಪ್ರೌಢಶಾಲೆಯೊಂದನ್ನು ಪ್ರಾರಂಭಿಸಬೇಕೆಂಬುದು ತಮ್ಮ ಕನಸಿನ ಬಗ್ಗೆ ಪ್ರಕಾಶ್ ಹಲವು ಬಾರಿ ಪ್ರಸ್ತಾಪಿಸಿದರು. ಈ ಕನಸನ್ನು ನನಸಾಗಿಸಲು ಸಮುದಾಯದ ಸದಸ್ಯರೊಂದಿಗೆ ಸೌಹಾರ್ದಯುತವಾಗಿ ಕೆಲಸ ಮಾಡುತ್ತಿದ್ದಾರೆ.

ಮಕ್ಕಳೊಂದಿಗೆ ಶಾಲಾ ಕೊಠಡಿಯೊಳಗೆ:

ಗಣಿತ ಹಾಗೂ ವಿಜ್ಞಾನ ಬೋಧನೆಯಲ್ಲಿ ಪ್ರಕಾಶ್ ತುಂಬು ಉತ್ಸಾಹವುಳ್ಳವರು. ಅವರ ನಂಬಿಕೆ ಏನೆಂದರೆ, 1). ಆರಂಭಿಕ ವರ್ಷಗಳಲ್ಲೇ ವಿಜ್ಞಾನವನ್ನು ಆಸಕ್ತಿ ಹುಟ್ಟಿಸುವಂತೆ ಕಲಿಸಿದರೆ, ಗಣಿತ‑ವಿಜ್ಞಾನದಲ್ಲಿ ಉನ್ನತ ಶಿಕ್ಷಣಕ್ಕೆ ಅದರಿಂದ ನೆರವಾಗಬಹುದು ಎಂದು. 2) ಮಕ್ಕಳಿಗೆ ಗಣಿತದಲ್ಲಿ ಆಸಕ್ತಿ ಹುಟ್ಟಿದಲ್ಲಿ, ಉಳಿದೆಲ್ಲ ವಿಷಯಗಳಲ್ಲೂ ಆಸಕ್ತಿ ಹುಟ್ಟುತ್ತದೆ. ಗಣಿತದ ಬೋಧನೆಯಲ್ಲಿ ಅವರಿಗಿರುವ ಆಸಕ್ತಿ ಅವರ ತರಗತಿಯನ್ನು ಗಮನಿಸಿದರೆ ಅರಿವಿಗೆ ಬರುತ್ತದೆ.

ತರಗತಿಗೆ ಬರಬೇಕೆಂದು ನಮ್ಮನ್ನು ಅವರು ಒತ್ತಾಯಿಸಿದಾಗ, ಮಧ್ಯಾಹ್ನ ಊಟದ ಸಮಯವಾಗಿತ್ತು. ಒಟ್ಟು 49 ವಿದ್ಯಾರ್ಥಿಗಳಿದ್ದ, ಬಾಲಕ ಮತ್ತು ಬಾಲಕಿಯರು ಬಹುತೇಕ ಸಮಸಂಖ್ಯೆಯಲ್ಲಿದ್ದ ತರಗತಿಯಲ್ಲಿ ಪ್ರಕಾಶ್, ಲವಲವಿಕೆಯಿಂದ ಎಲ್ಲ ಮಕ್ಕಳನ್ನೂ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದ್ದರು. ಭಿನ್ನರಾಶಿ’ ಕುರಿತು ಮಕ್ಕಳು ಗಮನವಿಟ್ಟು ಆಲಿಸಿದರು ಹಾಗೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೊಲ, ಬೆಳೆ ಇತ್ಯಾದಿ ಮಕ್ಕಳಿಗೆ ಸಂಬಂಧಿಸಿದ ಉದಾಹರಣೆಗಳ ಮೂಲಕ ಪಾಠ ಆರಂಭಿಸಿದರು ಮತ್ತು ವಿದ್ಯಾರ್ಥಿಗಳು ಅವರ ಪ್ರಶ್ನೆಗಳಿಗೆ ಒಕ್ಕೊರಲಿನಿಂದ ಪ್ರತಿಕ್ರಿಯಿಸಿದರು. ಮೂರ್ತ ವಸ್ತುಗಳನ್ನು ತೋರಿಸಿದ ಬಳಿಕ ಕ್ರಮೇಣ ಸಿದ್ಧಾಂತದ ಸಾರಾಂಶ ತಿಳಿಸಿಕೊಟ್ಟರು. ಮಕ್ಕಳನ್ನು ಕಪ್ಪು ಹಲಗೆ ಬಳಿ ಕರೆದರಲ್ಲದೆ, ಕಲಿತದ್ದನ್ನು ಪ್ರದರ್ಶಿಸಲು ಹೇಳಿದರು. ಪ್ರತಿ ಬುಧವಾರ ವಿದ್ಯಾರ್ಥಿಗಳು ತರಗತಿಯಲ್ಲಿ ವಿಜ್ಞಾನವನ್ನು ಕುರಿತು ಮುಂದೆ ಬಂದು ಮಾತನ್ನಾಡುತ್ತಾರೆ ಎಂದು ಪ್ರಕಾಶ್ ಹೇಳಿದರು. ಅವರ ಆಸಕ್ತಿಯ ವಸ್ತುವೊಂದನ್ನು ತಂದು, ಸಹಪಾಠಿಗಳಿಗೆ ಅದರ ಬಗ್ಗೆ ಹೇಳಲು ವಿದ್ಯಾರ್ಥಿಗಳನ್ನು ಉತ್ತೇಜಿಸಲಾಗುತ್ತದೆ. ವಸ್ತುವೊಂದನ್ನು ಭಾವಿಸಿ, ಸ್ಪರ್ಶಿಸಿ ಹಾಗೂ ಬಳಸುವುದರಿಂದ, ಮಕ್ಕಳು ಜ್ಞಾನವನ್ನು ಗಳಿಸುತ್ತಾರೆ ಮತ್ತು ಅದನ್ನು ಕೌಶಲದಿಂದ ಬಳಸಿದಾಗ ಕಾರಣ ಮತ್ತು ಉದ್ದೇಶ’ವನ್ನು ಅರಿತುಕೊಳ್ಳುತ್ತಾರೆ ಎಂದು ಪ್ರಕಾಶ್ ನಂಬುತ್ತಾರೆ.

ಕೊಪ್ಪಳ ನಗರದ ಸಮೀಪದ ಶಾಲೆಗಳಲ್ಲಿ ನಡೆಯುವ ವಿಜ್ಞಾನ ಪ್ರದರ್ಶನಗಳಲ್ಲಿ ತಮ್ಮ ಶಾಲೆಯ ಮಕ್ಕಳು ಪಾಲ್ಗೊಳ್ಳುವುದನ್ನು ಅನುಕೂಲಿಸುತ್ತಾರೆ. ವಿದ್ಯಾರ್ಥಿಗಳನ್ನು ಆಟೋದಲ್ಲಿ ಹೆದ್ದಾರಿಯಲ್ಲಿ ದೂರದ ಸ್ಥಳಕ್ಕೆ ಕರೆದೊಯ್ದು, ಬಳಿಕ ಮನೆಗೆ ಕ್ಷೇಮವಾಗಿ ತಲುಪಿಸುವುದು ಜವಾಬ್ದಾರಿಯುತ ಕೆಲಸವಾಗಿದ್ದರೂ, ಅವರು ಅದನ್ನು ಮಾಡುತ್ತಾರೆ. ವಿಜ್ಞಾನ ಪ್ರದರ್ಶನಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಯೋಗಗಳ ಛಾಯಾಚಿತ್ರಗಳ ಆಲ್ಬಮನ್ನು ರೂಪಿಸಿ ಅದರ ಮೂಲಕ ಬೇರೆ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಬರುವಂತೆ ಮಾಡಬೇಕೆಂಬ ಆಶಯ ಅವರಿಗಿದೆ. ಶಾಲೆಯ ಸಣ್ಣ ಕೊಠಡಿಯಲ್ಲಿ ಅವರು ಸೃಷ್ಟಿಸಿರುವ ತಾರಾ ಪುಂಜ (galaxy) ಒಂದು ಆಸಕ್ತಿದಾಯಕ ಉಪಕ್ರಮ. ವಿದ್ಯಾರ್ಥಿಗಳು ರಾತ್ರಿಯ ಆಗಸ’ ವನ್ನು ಅನುಭವಿಸಬೇಕು ಎನ್ನುವುದು ಅವರ ಆಶಯ. ಕಪ್ಪು ಕೋಣೆಯ ಛಾವಣಿಯಲ್ಲಿ ರಂಧ್ರಗಳನ್ನು ಮಾಡಿದ್ದು, ಇದರ ಮೂಲಕ ಸೌರವ್ಯೂಹವನ್ನು ವಿವರಿಸುವುದನ್ನು ವಿದ್ಯಾರ್ಥಿಗಳು ಕಲಿತಿದ್ದಾರೆ.

ಸಾಮಾಜಿಕ ಸೂಕ್ಷ್ಮತೆಯನ್ನು ಜತೆಗೆ ಸಾಮಾಜಿಕ – ಆರ್ಥಿಕ ಸನ್ನಿವೇಶಗಳನ್ನು ಪಠ್ಯಕ್ರಮ ಹಾಗೂ ಶಿಕ್ಷಣಶಾಸ್ತ್ರದ ಆಚರಣೆಗಳ ಜೊತೆಗೆ ಒಗ್ಗೂಡಿಸುವ ಸಾಮರ್ಥ್ಯ ಅವರ ಬೋಧನೆಯ ಕೇಂದ್ರದಲ್ಲಿದೆ. ಅವರ ಬಹುತೇಕ ಪ್ರಯತ್ನಗಳನ್ನು ಬೇರೆ ಶಿಕ್ಷಕರು ಅನುಸರಿಸಬಹುದು. ಆದರೆ, ಇಂತಹ ಪ್ರಕ್ರಿಯೆಗೆ ತೆರೆದುಕೊಳ್ಳುವ ನಿರಂತರ ತುಡಿತದ ಅಗತ್ಯವಿದೆ. ಕಲಿಕೆ ಹಾಗೂ ಹೊಸ ಜ್ಞಾನದ ಆರ್ಜನೆಯನ್ನು ಅವರು ಪ್ರೀತಿಸುತ್ತಾರೆ. ಶಿಕ್ಷಕ ಕಲಿಕಾ ಕೇಂದ್ರದ ಸಭೆಗಳಲ್ಲಿ ತಪ್ಪದೆ ಪಾಲ್ಗೊಳ್ಳುವುದಲ್ಲದೆ, ಇತರ ಶಿಕ್ಷಕರನ್ನೂ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಾರೆ. ವಿಜ್ಞಾನ – ಗಣಿತದಲ್ಲಿ ಯಾವುದೇ ಸಂದೇಹ ಬಂದಲ್ಲಿ ಅಜೀಂ ಪ್ರೇಮ್‍ಜಿ ಫೌಂಡೇಶನ್ನಿನ ಜಿಲ್ಲಾ ಸಂಸ್ಥೆಯ ಸದಸ್ಯರ ನೆರವು ಪಡೆಯುತ್ತಾರೆ. ವಿಜ್ಞಾನ ಬೋಧನೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವುದಲ್ಲದೆ, ಸಮುದಾಯದಿಂದ ಐದು ಬಾರಿ ಉತ್ತಮ ಶಿಕ್ಷಕ’ ಎಂದು ಗೌರವಿಸಲ್ಪಟ್ಟಿದ್ದಾರೆ.

ನಿರಂತರತೆಯ ಜೊತೆ ಜೋಡಣೆ:

ಪ್ರಕಾಶ್ ಅವರ ಬಾಲ್ಯದ ದಿನಗಳ ಕಷ್ಟಕರ ಅನುಭವಗಳು, ಸಮಾಜದಿಂದ ಕಡೆಗಣಿಸಲ್ಪಟ್ಟ ವರ್ಗಗಳ ಮಕ್ಕಳನ್ನು ನೋಡುವ ರೀತಿಯನ್ನು ರೂಪುಗೊಳಿಸಿದೆ ಎನ್ನಬಹುದು. ಈ ಮಕ್ಕಳೊಡನೆ ಒಡನಾಡುವಾಗ ಅವರ ಬಗೆಗಿನ ಅನುಭೂತಿ, ಶ್ರದ್ಧೆ ಮತ್ತು ಕಾಳಜಿಯನ್ನು ಕಾಣಬಹುದು. ಮಕ್ಕಳ ಕಲಿಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಆಳವಾದ ಕರ್ತವ್ಯಪ್ರಜ್ಞೆ ಹೊಂದಿದ್ದಾರೆ. ಶಿಕ್ಷಣ ಮತ್ತು ವೈದ್ಯಕೀಯ ವೃತ್ತಿಯಲ್ಲಿ ಕಂಡುಬರುವ ವೃತ್ತಿಪರ ಸೇವಾ ಆದರ್ಶ’ ಎನ್ನುವುದು ಅವರ ಈ ಮಾತುಗಳಲ್ಲಿ ಪ್ರತಿಫಲಿತವಾಗುತ್ತದೆ: ನನ್ನ ಸೇವೆ ಮಕ್ಕಳ ಒಳಿತಿಗಾಗಿ ಇರುವಂಥ ದ್ದು’. ಪ್ರಕಾಶ್ ಜತೆ ನಡೆಸಿದ ಸಂಭಾಷಣೆಯಿಂದ ಗೊತ್ತಾಗುವುದೇನೆಂದರೆ, ಬೋಧನೆ ಎನ್ನುವುದನ್ನು ಕೆಲವು ಚಟುವಟಿಕೆ ಅಥವಾ ತಂತ್ರಗಳ ಸರಣಿ ಎನ್ನುವ ಕಿರಿದಾದ ಅರ್ಥದಲ್ಲಿ ಅವರು ಪರಿಭಾವಿಸಿಲ್ಲ. ಅವರ ಪ್ರಕಾರ, ಬೋಧನೆ ಎನ್ನುವುದು ಸಹ‑ಸಂಬಂಧಿತ ಆಚರಣೆ ಮತ್ತು ವಿದ್ಯಾರ್ಥಿಗಳೊಡನೆ ಅವರ ಸಂಬಂಧವು ಕಾಳಜಿ, ಪ್ರೀತಿ ಮತ್ತು ಅನುಭೂತಿಯಂಥ ಮೌಲ್ಯಗಳನ್ನು ಒಳಗೊಂಡಿದೆ. ಇದು ಕಾಳಜಿಯಿಂದ ಕೂಡಿದ ವೈಯಕ್ತಿಕ ಸಂಬಂಧ. ಏಕೆಂದರೆ, ಮನುಷ್ಯನಿಗೆ ಕಾಳಜಿಯ ಬಯಕೆ ಹಾಗೂ ಕಾಳಜಿ ತೋರಿಸುವ ಮೂಲಭೂತ ಗುಣವಿದೆ (ನೆಲ್ ನಾಡ್ಡಿಂಗ್ಸ್,1992). ಪ್ರಕಾಶ್ ಅವರ ಮಾತು ಹಾಗೂ ಕ್ರಿಯೆಗಳು ಬೋಧನೆಗೆ ಸಂಬಂಧಿಸಿದಂತೆ ಕಾಳಜಿ ಆಧಾರಿತ ವಾದವನ್ನು ಒಪ್ಪಿಕೊಳ್ಳುವಂತೆ ಮಾಡಬಹುದಾದರೂ, ಅವರು ಹೇಳುತ್ತಾರೆ: ನಮ್ಮಲ್ಲಿ ಸಮಾಜದ ನಾನಾ ವರ್ಗದ ಮಕ್ಕಳು ಇರುವುದರಿಂದ, ನಾನು ಎಲ್ಲರ ಜೊತೆಗೆ ನ್ಯಾಯಸಮ್ಮತವಾಗಿ ನಡೆದುಕೊಳ್ಳುವ ಅಗತ್ಯವಿದೆ ಮತ್ತು ಎಲ್ಲ ಮಕ್ಕಳನ್ನು ನಾನು ಅತ್ಯುತ್ತಮ ಎನ್ನಬಹುದಾದ ರೀತಿಯಲ್ಲಿ ತಲುಪಲು ಯತ್ನಿಸುತ್ತೇನೆ. ಎಲ್ಲ ಮಕ್ಕಳಿಗೂ ಶಾಲೆಗೆ ಪ್ರವೇಶಾವಕಾಶ ಸಿಗಬೇಕು,’

ಇದರಿಂದ ಸ್ಪಷ್ಟವಾಗುವುದೇನೆಂದರೆ, ಬೂದುಗುಂಪದ ಈ ಶಿಕ್ಷಕನಿಗೆ ಕಾಳಜಿ ಮತ್ತು ನ್ಯಾಯ ಒಂದೇ ನಾಣ್ಯದ ಎರಡು ಮುಖಗಳು: ಬೋಧನೆ ಕುರಿತ ಅವರ ನೈತಿಕ ಅನುಕೂಲಿಸುವಿಕೆಯಲ್ಲಿ ಇದು ಪ್ರತಿಫಲಿಸುತ್ತದೆ.

ಪ್ರಕಾಶ್ ಅವರಲ್ಲಿ ಗಾಢವಾದ ಚಿಂತನಶೀಲ ಮನಸ್ಸನ್ನು ಕಾಣಬಹುದು. ಜಾನ್ ಡ್ಯೂಯಿ ಹೇಳುತ್ತಾರೆ, ” ಚಿಂತನಶೀಲತೆ ಇಲ್ಲದ ಅನುಭವ ಟೊಳ್ಳು’. ಸ್ವ‑ಅರಿವು ಹಾಗೂ ಚಿಂತನಶೀಲ ತೆಯ ಪ್ರಜ್ಞೆಯು ಪ್ರತಿದಿನ ಎದುರಾಗುವ ಸವಾಲಿನ ಸನ್ನಿವೇಶಗಳಲ್ಲಿ ಅವರು ತೆಗೆದುಕೊಳ್ಳುವ ಶೈಕ್ಷಣಿಕ ನಿರ್ಧಾರಗಳಲ್ಲಿ ಪ್ರತಿಫಲಿತವಾಗಿದೆ. ಪೋಷಕರು, ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳೊಂದಿಗಿನ ಮುಖಾಮುಖಿಯಿಂದ ಅವರಿಗೆ ಅಪಾರ ಅನುಭವ ದಕ್ಕಿದ್ದು, ತಮ್ಮ ಬಗ್ಗೆ ಹಾಗೂ ಶಿಕ್ಷಕನಾಗಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗಿದೆ. ಆದರೆ, ಅವರ ನಿರಂತರ ಪ್ರಯತ್ನಕ್ಕೆ ಕಾರಣ ಅವರೇ ಹೇಳುವಂತೆ, ನನಗೆ ಬೇಕಿರುವುದು ಮಕ್ಕಳ ಪ್ರೀತಿ ಮತ್ತು ಸಮುದಾಯದ ಗೌರವ ಮಾತ್ರ. ಶಾಲೆ ನನ್ನ ಪಾಲಿಗೆ ಪೂಜಾಸ್ಥಳ ಹಾಗೂ ಮಕ್ಕಳು ನನ್ನ ದೇವರು”.

ಕೆಲವು ಪ್ರತಿಫಲನಗಳು:

ಸಾರ್ವಜನಿಕರು ಸರ್ಕಾರಿ ಶಾಲಾ ವ್ಯವಸ್ಥೆಯನ್ನು ತಿರಸ್ಕರಿಸುತ್ತಿರುವ, ಸಾರ್ವಜನಿಕ ಶಾಲೆಗಳನ್ನು ಮುಚ್ಚುತ್ತಿರುವ, ಶಿಕ್ಷಕರ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿರುವ, ಶಿಕ್ಷಕ ವೃತ್ತಿಗೆ ಸೇರುವವರು ಕಡಿಮೆ ಆಗುತ್ತಿರುವ ಮತ್ತು ಖಾಸಗಿ ಶಾಲೆಗಳ ಕಡೆಗೆ ಆಕರ್ಷಿತರಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ದೇಶದ ಕಡೆಗಣಿಸಲ್ಪಟ್ಟ ವರ್ಗಗಳ ಹೆಚ್ಚು ಜನರು ಆಶ್ರಯಿಸಿರುವ ಸಾರ್ವಜನಿಕ ಶಿಕ್ಷಣ ಕ್ಷೇತ್ರ ವನ್ನು ರಕ್ಷಿಸುವ ಅಗತ್ಯ ಹೆಚ್ಚಿದೆ. ಈ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಬಲಹೀನಗೊಳಿಸುವ ಬಡತನ, ಸಾಮಾಜಿಕ ಪಿಡುಗುಗಳು, ಅನಾರೋಗ್ಯ ಮತ್ತು ಅಪೌಷ್ಟಿಕತೆ ಬಗ್ಗೆ ಅರಿವು ಇದೆ. ಪ್ರಜಾಪ್ರಭುತ್ವ ಸಮೃದ್ಧಗೊಳ್ಳಬೇಕೆಂದರೆ, ಶೈಕ್ಷಣಿಕ ಅವಕಾಶಗಳನ್ನು ಸಮನಾಗಿ ನೀಡುವ’ ಭರವಸೆಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಗಮನ ನೀಡಬೇಕಿದೆ. ಕೆಲವು ಶಾಲೆಗಳು ಮೂಲಭೂತ ಸೌಲಭ್ಯಗಳಿಲ್ಲದೆ ಕುಸಿಯುತ್ತಿದ್ದು, ಕಲಿಕಾ ಸಾಧನಗಳು ಲಭ್ಯವಿಲ್ಲದೆಯೂ ಮತ್ತು ಅಗತ್ಯವಿರುವಷ್ಟು ಶಿಕ್ಷಕರು ಇಲ್ಲದಿದ್ದಾಗ್ಯೂ, ಕಾರ್ಯಬದ್ಧತೆಯಿರುವ ಹಾಗೂ ಪಟ್ಟು ಹಿಡಿದು ಸಾಧಿಸುವ ಮನೋಭಾವದ ಶಿಕ್ಷಕರೊಬ್ಬರು ಇದ್ದಲ್ಲಿ, ಪ್ರಾಯಶಃ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಿಂದ ಹೊರ ತಳ್ಳಲ್ಪಡುವುದು’ ನಿಲ್ಲುತ್ತದೆ ಮತ್ತು ಅವರ ಶಿಕ್ಷಣ ಮುಂದುವರಿಯುತ್ತದೆ.

ಶಿಕ್ಷಕರಾಗಿ ಪ್ರಕಾಶ್ ಅವರ ಕೆಲಸದ ವೈಶಿಷ್ಟ್ಯವನ್ನು ಸಾಮಾಜಿಕ ಸೂಕ್ಷ್ಮತೆ ಹಾಗೂ ಮಕ್ಕಳ ಕಲಿಕೆ ಬಗ್ಗೆ ಕಾಳಜಿ ಸೇರಿದಂತೆ ಹಲವು ಅಂಶಗಳು ಪ್ರಭಾವಿಸಿವೆ. ಶಿಕ್ಷಕನ ಸ್ವಂತ ಬದುಕಿನ ಸನ್ನಿವೇಶಗಳು, ಶಿಕ್ಷಕನ ಕಾಳಜಿಗೆ ಮಕ್ಕಳ ಪ್ರತಿಸ್ಪಂದನೆ, ಸಮುದಾಯದ ಸದಾಶಯ, ಪೋಷಕರು ನೀಡುವ ಗೌರವ, ಸಮಾನಮನಸ್ಕ ಸಹ‑ಶಿಕ್ಷಕ ಗುಂಪಿನ ಒತ್ತಾಸೆ, ಅವರ ವೈಯಕ್ತಿಕ ಹಾಗೂ ವೃತ್ತಿಪರ ಜ್ಞಾನ, ವೃತ್ತಿಪರ ಬೆಳವಣಿಗೆ ಬಗ್ಗೆ ಗಮನ, ಸ್ವ‑ಅರಿವು, ವಿಮರ್ಶಾತ್ಮಕ ಪ್ರತಿಫಲನ ಮತ್ತು ಬೋಧನೆಯಲ್ಲಿ ವಿಶೇಷ ಆಸಕ್ತಿಯಿಂದಾಗಿ, ಭಿನ್ನ ಮಾರ್ಗದಲ್ಲಿ ನಡೆಯುವ’, ಸಾರ್ವಜನಿಕ ಶಾಲೆಗಳಲ್ಲಿ ಒಳಗೊಳ್ಳುವಿಕೆಯನ್ನು ಖಾತ್ರಿಗೊಳಿಸುವ ಸದ್ಯದ ಪ್ರಾಯೋಗಿಕ ಚೌಕಟ್ಟು ಲಭ್ಯವಾಗಲಿದೆ. ಶಿಕ್ಷಕರ ಸಾಮರ್ಥ್ಯ ಬಲವರ್ಧನೆಯಿಂದ ಸಾರ್ವಜನಿಕ ಶಾಲಾ ಶಿಕ್ಷಣದಲ್ಲಿ ಪರ್ಯಾಯ ಕಾಣ್ಕೆಯೊಂದನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ.

ಕೃತಜ್ಞತೆಗಳು:

ಬೂದುಗುಂಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ್ ಅವರ ಭೇಟಿ, ಶಾಲೆಯ ಆವರಣದಲ್ಲಿ ಇರುವ ಅಜೀಂ ಪ್ರೇಮ್‍ಜಿ ಫೌಂಡೇಶನ್ನಿನ ಶಿಕ್ಷಕ ಕಲಿಕಾ ಕೇಂದ್ರದಲ್ಲಿ ನಡೆಯಿತು. ಉಷಾ ಮತ್ತು ರಝಾ (ಕೊಪ್ಪಳದ ಅಜೀಂ ಪ್ರೇಮ್‍ಜಿ ಫೌಂಡೇಶನ್ನಿನ ಜಿಲ್ಲಾ ಸಂಸ್ಥೆಯ ಸದಸ್ಯರು) ಮತ್ತು ನಾನು, ಪ್ರಕಾಶ್ ಜೊತೆ ಮಾತುಕತೆ ನಡೆಸಿದೆವು. ನಮ್ಮೊಡನೆ ಮಾತನಾಡಿದ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಗೆ ಧನ್ಯವಾದಗಳು. ತಮ್ಮ ವೈಯಕ್ತಿಕ ಪಯಣವನ್ನು ಹಂಚಿಕೊಂಡ ಪ್ರಕಾಶ್ ಅವರಿಗೆ ಧನ್ಯವಾದಗಳು.

ಲೇಖಕಿ: ರಾಜಶ್ರೀ ಶ್ರೀನಿವಾಸನ್, ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾನಿಲಯ

References

Dewey, J. (1938). Experience and education. New York: MacMillan
Nieto, S. (2003). What keeps teachers going? New York: Teachers College Press.
Sinha and Reddy (2011). School Dropouts or pushouts’? Overcoming barriers for the Right of Education. In R. Govinda (eds). Who goes to School? Exploring Exclusion in Indian Education. (pp166-204). New Delhi: Oxford University Press