ಪರಿವರ್ತನೆಯ ಹರಿಕಾರನಾಗಿ ಮುಖ್ಯ

ಲೇ: ಶರದ್ ಸುರೆ ಮತ್ತು ಮೇಘಾ ಕುಲಕರ್ಣಿ | Aug 1, 2019

ಯಾದಗಿರಿ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ 120 ಕಿಲೋಮೀಟರ್ ದೂರದಲ್ಲಿ ಜುಮಾಲಾಪುರ ದೊಡ್ಡ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ.

Pic 1

ಶಿಕ್ಷಕ – ಅಚ್ಚಪ್ಪ ಗೌಡ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜುಮಾಲಾಪುರ ದೊಡ್ಡತಾಂಡ, ಯಾದಗಿರಿ ಜಿಲ್ಲೆ

This is a translation of the article originally written in English

ಗ್ರಾಮ ಮತ್ತು ಶಾಲೆ:

ಯಾದಗಿರಿ ಜಿಲ್ಲೆಯ ಜಿಲ್ಲಾ ಕೇಂದ್ರದಿಂದ 120 ಕಿಲೋಮೀಟರ್ ದೂರದಲ್ಲಿ ಜುಮಾಲಾಪುರ ದೊಡ್ಡ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಈ ದೊಡ್ಡ ತಾಂಡಾಕ್ಕೆ ಯಾದಗಿರಿಯಿಂದ ಎರಡೂವರೆ ಗಂಟೆಯ ದಾರಿ. ಜುಮಲಾಪುರ ದೊಡ್ಡ ತಾಂಡಾದ ಸುತ್ತಮುತ್ತ ಇರುವ ಮೂರು ಶಾಲೆಗಳಲ್ಲಿ ಇದೂ ಒಂದು. ಶಾಲೆಯ ಸುತ್ತಲಿನ ಗ್ರಾಮದಲ್ಲಿ ಸುಮಾರು 400 ಮನೆಗಳಿವೆ. ಈ ಮನೆಗಳ ಪೈಕಿ ಸಣ್ಣ ಜಮೀನುಗಳನ್ನು ಹೊಂದಿದವರು ಅಥವಾ ಕೃಷಿ ಸಂಬಂಧಿ ಕಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವವರು ಶೇಕಡಾ 80 ರಷ್ಟಿದ್ದಾರೆ. ಇಲ್ಲಿನ ಸುಮಾರು 40 ಕುಟುಂಬಗಳು ಲಂಬಾಣಿ ಸಮುದಾಯಕ್ಕೆ ಸೇರಿವೆ. ಇದು ಒಟ್ಟೂ ಜನಸಂಖ್ಯೆಯ ಅತ್ಯಂತ ಸಣ್ಣ ಭಾಗ ಅಷ್ಟೇ. ಲಂಬಾಣಿಗಳು ಹಿಂದುಳಿದ ಸಮುದಾಯದವರಾಗಿದ್ದು, ಪರಿಶಿಷ್ಟ ಜನಾಂಗದ ಪಟ್ಟಿಯಲ್ಲಿ ಅವರನ್ನು ಗುರುತಿಸಲಾಗಿದೆ. ಲಂಬಾಣಿ ಸಮುದಾಯದ ಸದಸ್ಯರು ಕೃಷಿ ಕಾರ್ಮಿಕರಾಗಿದ್ದು, ಮುಖ್ಯವಾಗಿ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ.

ಜುಮಾಲಾಪುರದ ಪ್ರಾಥಮಿಕ ಶಾಲೆ 1965ರಲ್ಲಿ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಈಗ 500 ಮಕ್ಕಳಿದ್ದು, ಶೇಕಡಾ 90ರಷ್ಟು ಮಕ್ಕಳು ಎಸ್‍ಸಿ/ಎಸ್‍ಟಿ ಪಂಗಡಕ್ಕೆ ಸೇರಿದವರಾಗಿದ್ದಾರೆ. ಒಂದನೆಯ ತರಗತಿಯಿಂದ ಐದರ ವರೆಗೆ 400 ಮಕ್ಕಳು ದಾಖಲಾಗಿದ್ದಾರೆ. ಉಳಿದವರು ಆರು ಮತ್ತು ಏಳನೆಯ ತರಗತಿಯಲ್ಲಿ ಇದ್ದಾರೆ. 430ರಷ್ಟು ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುತ್ತಾರೆ. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‍ಡಿಎಂಸಿ) ಸಕ್ರಿಯವಾಗಿದ್ದು ಅದರ ಎಲ್ಲ ವಿವರಗಳನ್ನು ತಿಳಿಸುವ ಬೃಹತ್ ಫಲಕ ಶಾಲಾ ವಠಾರದಲ್ಲಿದೆ.

ಪ್ರಭಾರಿ ಮುಖ್ಯ ಶಿಕ್ಷಕ ಅಚ್ಚಪ್ಪ ಗೌಡ ಸೇರಿದಂತೆ ಶಿಕ್ಷಣ ಇಲಾಖೆಯು ನೇಮಕ ಮಾಡಿದ ನಾಲ್ವರು ಅಧ್ಯಾಪಕರು ಇಲ್ಲಿದ್ದಾರೆ. ಇನ್ನುಳಿದಂತೆ ಐದು ಹುದ್ದೆಗಳು ಖಾಲಿ ಇವೆ. ತಾತ್ಕಾಲಿಕ ವ್ಯವಸ್ಥೆಯಲ್ಲಿ ಮೂವರು ಅತಿಥಿ ಅಧ್ಯಾಪಕರನ್ನು ನೇಮಿಸಲಾಗಿದೆ. ಶಾಲೆಯಲ್ಲಿ ಐದು ತರಗತಿ ಕೊಠಡಿಗಳು ಇವೆ. ಒಂದು ತಾತ್ಕಾಲಿಕ ತರಗತಿ ಕೊಠಡಿಯನ್ನು ಸೇರಿಸಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಕುಡಿಯುವ ನೀರು, ಆಟದ ಮೈದಾನ, ಶೌಚಾಲಯ, ಉದ್ಯಾನವನ, ವಿದ್ಯುತ್ ಸಂಪರ್ಕ ಮತ್ತು ರೇಡಿಯೋ, ಟೆಲಿವಿಷನ್ ವ್ಯವಸ್ಥೆಗಳು ಇವೆ.

ಅಚ್ಚಪ್ಪ ಗೌಡರ ಸ್ಥೂಲ ಪರಿಚಯ:

ಅಚ್ಚಪ್ಪ ಗೌಡ ಅವರು 19 ವರ್ಷಗಳಿಂದ ಅಧ್ಯಾಪಕ ವೃತ್ತಿಯಲ್ಲಿ ಇದ್ದಾರೆ. ಅವರು ಮೊದಲು ಸಹಾಯಕ ಅಧ್ಯಾಪಕರಾಗಿದ್ದು ಅನಂತರ 2015ರಲ್ಲಿ ಜುಮಾಲಪುರ ಜಿಎಚ್‍ಪಿಎಸ್‍ನ ಪ್ರಭಾರಿ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದರು. ಅವರು ಶಾಲೆಯ ಕಣ್ಣಳತೆಯ ದೂರದಲ್ಲೇ ವಾಸವಾಗಿದ್ದಾರೆ. ಸಮುದಾಯದ ಪ್ರತಿಯೊಬ್ಬ ಸದಸ್ಯರ ಮತ್ತು ಮಕ್ಕಳ ಪರಿಚಯವೂ ಅವರಿಗೆ ಇದೆ. ಅವರು ಮುಖ್ಯ ಶಿಕ್ಷಕರಾಗಿ ಜವಾಬ್ದಾರಿ ತೆಗೆದುಕೊಳ್ಳುವ ಹೊತ್ತಿಗೆ ಶಾಲೆ ಮತ್ತು ಸಮುದಾಯದ ನಡುವಣ ಸಂಬಂಧ ಹಳಸಿಹೋಗಿತ್ತು. ಸಮುದಾಯದ ಅಸಂತುಷ್ಟಿಗೆ ಇದ್ದ ಕಾರಣಗಳ ಅರಿವೂ ಗೌಡರಿಗೆ ಇತ್ತು. ತನ್ನ ಅಭಿವೃದ್ಧಿಗಾಗಿ ಸಂಪನ್ಮೂಲಗಳನ್ನು ಕ್ರೋಡೀಕರಿಸುವಲ್ಲಿ ಮತ್ತು ಬಳಸುವಲ್ಲಿ ಶಾಲೆ ಸೋಲುತ್ತಿದ್ದುದು ಮತ್ತು ಅಲ್ಲಿದ್ದ ಶಂಕಿತ ಆರ್ಥಿಕ ಅಕ್ರಮಗಳೇ ಸಮುದಾಯದ ಜನರ ಅತೃಪ್ತಿಗೆ ಕಾರಣವಾಗಿದ್ದುವು.

ಸಮುದಾಯ ಮತ್ತು ಶಾಲೆಯನ್ನು ಕುರಿತ ಅಚ್ಚಪ್ಪ ಗೌಡರ ಗ್ರಹಿಕೆಯ ಕಾರಣದಿಂದ ಶಾಲೆಯ ಸುಲಲಿತ ಚಟುವಟಿಕೆಗೆ ಅಡ್ಡಿಬರುವ ಆಳವಾದ ಸಮಸ್ಯೆಗಳನ್ನು ಗುರುತಿಸುವುದು ಸಾಧ್ಯವಾಯಿತು. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಸಮಸ್ಯೆ ಎಂದರೆ ವಿದ್ಯಾರ್ಥಿಗಳ ಅನಿಯತ ಹಾಜರಾತಿ. 500 ವಿದ್ಯಾರ್ಥಿಗಳು ಇರುವ ಶಾಲೆಯಲ್ಲಿ ಜೂನ್‍ನಿಂದ ಅಕ್ಟೋಬರ್ ವರೆಗೆ ಕೇವಲ ಶೇಕಡಾ 50 ಮಾತ್ರ ಹಾಜರಾತಿ ಇರುತ್ತಿತ್ತು. ಅಕ್ಟೋಬರ್ ನಂತರ ಈ ಹಾಜರಾತಿಯಲ್ಲಿ ಮತ್ತಷ್ಟು ಇಳಿಕೆ ಆಗುತ್ತಿತ್ತು. ಸುದೀರ್ಘ ವರ್ಷಗಳ ಕಾಲ ಸಹಾಯಕ ಅಧ್ಯಾಪಕರಾಗಿದ್ದ ಅಚ್ಚಪ್ಪ ಗೌಡರಿಗೆ ಈ ಪರಿಸ್ಥಿತಿಯ ಸ್ಪಷ್ಟ ಅರಿವು ಇತ್ತು. ಆದರೆ ಆಗ ಅವರಿದ್ದ ಸ್ಥಿತಿಯಲ್ಲಿ ಹೆಚ್ಚಿನದ್ದೇನನ್ನೂ ಮಾಡುವುದು ಸಾಧ್ಯವಿರಲಿಲ್ಲ. 2015 ರಲ್ಲಿ ಅವರು ಮುಖ್ಯ ಶಿಕ್ಷಕರಾದಾಗ ಈ ಪರಿಸ್ಥಿತಿಯನ್ನು ಬದಲಿಸುವ ಸದವಕಾಶವನ್ನು ಕಂಡರು.

ಭಾರತದ ಬಹುತೇಕ ಗ್ರಾಮೀಣ ಶಾಲೆಗಳಲ್ಲಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಆಗುವುದು ಮತ್ತು ಅವರು ನಿಯತವಾಗಿ ಹಾಜರಾಗದೇ ಇರುವುದು ಸಾಮಾನ್ಯ ಸಮಸ್ಯೆ. ಹೆತ್ತವರಿಗೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಯಾವುದೇ ಕಾಳಜಿ ಇಲ್ಲವೆನ್ನುವುದು ಮತ್ತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಅವರಿಗೆ ಆಸಕ್ತಿ ಇಲ್ಲ ಎನ್ನುವುದು ಶಾಲಾ ಅಧಿಕಾರಿಗಳ ದೃಷ್ಟಿಕೋನ. ಇಂತಹ ಸಮಸ್ಯೆಯನ್ನು ಪರಿಹರಿಸಲು ಸಮುದಾಯದ ಜತೆಗೆ ಸಂಪರ್ಕ ಸಾಧಿಸುವುದು ಅಗತ್ಯವೆಂದು ಅಚ್ಚಪ್ಪಗೌಡರು ಕಂಡುಕೊಂಡರು. ಮಕ್ಕಳ ಶಿಕ್ಷಣವನ್ನು ಕುರಿತ ಹೆತ್ತವರ ನಿಷ್ಕಾಳಜಿಯ ಕಾರಣಗಳನ್ನು ತಿಳಿದುಕೊಳ್ಳಲು ಮತ್ತು ಸಮಸ್ಯೆಗಳನ್ನು ಅರಿತುಕೊಳ್ಳಲು ಅವರು ಹೆತ್ತವರ ಜತೆಗೆ ಮತ್ತು ಸಮುದಾಯದ ಇತರ ಸದಸ್ಯರ ಜತೆಗೆ ಮಾತುಕತೆ ಆರಂಭಿಸಿದರು.

ಲಂಬಾಣಿ ಸಮುದಾಯದ ಮಕ್ಕಳ ಸಮಸ್ಯೆಗಳು:

ಲಂಬಾಣಿ ಸಮುದಾಯವು ಈ ಪ್ರದೇಶದ ಅತ್ಯಂತ ಬಡ ಸಮುದಾಯವಾಗಿದ್ದು ಅದು ಕೃಷಿಕಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಕೃಷಿ ಕೆಲಸವು ಋತುಮಾನಕ್ಕೆ ಹೊಂದಿಕೊಂಡು ಇರುವುದರಿಂದ ಅವರು ಕೆಲಸವನ್ನು ಹುಡುಕಿಕೊಂಡು ವಲಸೆ ಹೋಗಬೇಕಾಗುತ್ತದೆ. ಬಹುತೇಕ ಮಂದಿ ಪಕ್ಕದ ಜಿಲ್ಲೆಗಳ ಕಬ್ಬಿನ ಗದ್ದೆಗಳಲ್ಲಿ ಕೆಲಸಮಾಡುವುದಕ್ಕಾಗಿ ವಲಸೆ ಹೋಗುತ್ತಾರೆ. ಅಲ್ಲಿ ಕಟಾವು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳುತ್ತಿದ್ದು ಸುಮಾರು ಐದು ತಿಂಗಳವರೆಗೆ ಮುಂದುವರಿಯುತ್ತದೆ. ಹೆತ್ತವರು ವಲಸೆ ಹೋಗುವಾಗ ಮಕ್ಕಳನ್ನೂ ಕರೆದುಕೊಂಡು ಹೋಗುತ್ತಿದ್ದರು. ಹಾಗಾಗಿ ಸುಮಾರು ಅರ್ಧ ವರ್ಷ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಿದ್ದರು. ಇದರಿಂದ ಅವರು ಕಲಿಕೆಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಲಂಬಾಣಿ ಸಮುದಾಯದ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಇನ್ನೊಂದು ಸಮಸ್ಯೆ ಎಂದರೆ ಶಾಲೆಗಳಲ್ಲಿನ ಬೋಧನೆಯ ಮಾಧ್ಯಮದ್ದೇ ಆಗಿದೆ. ಈ ಮಕ್ಕಳು ಲಂಬಾಣಿ ಭಾಷೆ ಮಾತಾಡುತ್ತಿದ್ದು, ಶಾಲೆಯ ಬೋಧನೆಯ ಮಾಧ್ಯಮ ಕನ್ನಡವಾಗಿತ್ತು. ಸಣ್ಣ ತರಗತಿಯಲ್ಲಿರುವಾಗ ವಿದ್ಯಾರ್ಥಿಗಳಿಗೆ ಕನ್ನಡ ಪಾಠಗಳನ್ನು ಗ್ರಹಿಸುವ ಸಮಸ್ಯೆ ಉಂಟಾಗುತ್ತಿತ್ತು. ಅವರು ಕನ್ನಡ ಕಲಿಯುವ ಹೊತ್ತಿಗೆ ಒಂದಷ್ಟು ವರ್ಷಗಳು ಉರುಳಿಹೋಗುತ್ತಿದ್ದುವು. ಇದು ಅವರ ಕಲಿಕೆಯ ನೋವನ್ನು ಹೆಚ್ಚಿಸುತ್ತಿತ್ತು.

ಅಚ್ಚಪ್ಪ ಗೌಡರು ಮುಖ್ಯಶಿಕ್ಷಕರಾಗಿ ಬಡ್ತಿ ಹೊಂದಿದಾಗ ಶಾಲೆಯು ಪರಿಹರಿಸಿಕೊಳ್ಳಬೇಕಾದ ಇತರ ಅನೇಕ ಸಮಸ್ಯೆಗಳೂ ಇದ್ದುವು. ಕುಡಿಯುವ ನೀರು ತರುವುದಕ್ಕಾಗಿ ಮಕ್ಕಳು ಕಿಲೋಮೀಟರುಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಇತ್ತು. ಶಾಲಾ ಕಟ್ಟಡದ ಒಂದು ಭಾಗ ಕಾರ್ಯನಿರ್ವಹಿಸಲು ಯೋಗ್ಯವಲ್ಲದ ಸ್ಥಿತಿಯನ್ನು ತಲುಪಿತ್ತು. ತರಗತಿ ಕೋಣೆಗಳು ಸಾಕಾಗುತ್ತಿರಲಿಲ್ಲ. 500 ಮಂದಿ ಮಕ್ಕಳ ಚಟುವಟಿಕೆಗಳಿಗೆ ಶಾಲಾ ಮೈದಾನ ಸಾಕಷ್ಟು ದೊಡ್ಡದಿರಲಿಲ್ಲ. ಅಲ್ಲಿ ಶೌಚಾಲಯಗಳಿರಲಿಲ್ಲ. ಪೂರ್ಣಾವಧಿ ಅಡುಗೆಯವರಿಲ್ಲದ ಕಾರಣ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ. ಇಲ್ಲಿನ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಇರುವ ಆರ್ಥಿಕ ಸಂಪನ್ಮೂಲವೂ ಸೀಮಿತವಾಗಿತ್ತು. ಒಟ್ಟಿನಲ್ಲಿ ಅನೇಕ ದುಸ್ಥಿತಿಗಳ ನಡುವೆ ಶಾಲೆಯನ್ನು ನಿರ್ವಹಿಸಲಾಗುತ್ತಿತ್ತು.

The old building that was demolished.

ಮಕ್ಕಳನ್ನು ಶಾಲೆಯಲ್ಲೇ ಉಳಿಸುವ ಪ್ರಯತ್ನ:

ಅಚ್ಚಪ್ಪ ಗೌಡರು ಮೊದಲಿಗೆ ತನ್ನ ಶಾಲೆಯ ಎಲ್ಲ ಅಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಗೌಡರ ನೇತೃತ್ವದಲ್ಲಿ ಎಲ್ಲ ಅಧ್ಯಾಪಕರೂ ಶಾಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರಗುಳಿಯುತ್ತಿದ್ದ ಲಂಬಾಣಿ ಸಮುದಾಯದ ಮಕ್ಕಳನ್ನು ಶಾಲೆಯಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಸೃಜನಶೀಲವಾಗಿ ಯೋಚಿಸುವುದಕ್ಕೆ ಶುರುಮಾಡಿದರು. ಅಧ್ಯಾಪಕರು ತಮ್ಮ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕೆ ಸಮುದಾಯದ ಮಂದಿ ಅಧ್ಯಾಪಕರನ್ನು ನಿರ್ಲಕ್ಷಿಸುವುದಕ್ಕೆ ಆರಂಭಿಸಿದ್ದರು ಎನ್ನುವ ಸತ್ಯ ಅಧ್ಯಾಪಕರನ್ನು ಒಗ್ಗಟ್ಟಿನಲ್ಲಿರುವಂತೆ ಉತ್ತೇಜಿಸಿತು.

ಅಚ್ಚಪ್ಪ ಗೌಡರು ಹೇಳುವ ಪ್ರಕಾರ ಪ್ರತಿಭಾನ್ವಿತ ಮತ್ತು ಅರ್ಪಣಾ ಮನೋಭಾವದ ಅಧ್ಯಾಪಕರ ತಂಡ ಅವರ ಜತೆಗೆ ಇಲ್ಲದಿದ್ದಲ್ಲಿ ಇಂತಹ ಸವಾಲುಗಳನ್ನು ಎದುರಿಸುವುದು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಅಧ್ಯಾಪಕರು ಅನೇಕ ಯೋಜನೆಗಳನ್ನು ಚರ್ಚಿಸಿದರು. ದಾಖಲಾತಿಯ ಲೆಕ್ಕವನ್ನೂ ಹಾಜರಾತಿಯ ಲೆಕ್ಕವನ್ನೂ ಸರಿದೂಗಿಸುವುದು ಹೇಗೆ ಎನ್ನುವುದೇ ಆರಂಭಿಕ ಘಟ್ಟದ ಚರ್ಚೆಗಳ ವಿಷಯ. ಸಮುದಾಯದ ಮನಸ್ಸನ್ನು ಗೆಲ್ಲುವುದು ಅಗತ್ಯ ಎನ್ನುವುದನ್ನು ಅಧ್ಯಾಪಕರು ಮನಗಂಡರು. ಎಸ್‍ಡಿಎಂಸಿಯ ಸಲಹೆಯನ್ನು ಕೇಳಲಾಯಿತು. ವಿದ್ಯಾರ್ಥಿ ವಸತಿ ನಿಲಯ/ಹಾಸ್ಟೆಲ್ ಅನ್ನು ಆರಂಭಿಸುವ ಬಗ್ಗೆ ಅಚ್ಚಪ್ಪ ಗೌಡರು ಸುದೀರ್ಘ ಕಾಲದಿಂದ ಯೋಚಿಸುತ್ತಿದ್ದರು. ಆದರೆ ಆ ಯೋಜನೆ ಜಾರಿಗೆ ತರುವುದು ಸಾಧ್ಯವಾಗಿರಲಿಲ್ಲ. ಈಗ ಅಂಥದ್ದೊಂದು ಅವಕಾಶ ಎದುರಾಗಿತ್ತು.

ಐದು ತಿಂಗಳಿಗೆ ವಿದ್ಯಾರ್ಥಿ ನಿಲಯ/ಹಾಸ್ಟೆಲ್:

ಹಾಸ್ಟೆಲ್ ಮಾದರಿಯ ವ್ಯವಸ್ಥೆಯನ್ನು ಆರಂಭಿಸುವ ಪ್ರಸ್ತಾವವನ್ನು ಮುಂದಿಡಲಾಯಿತು. ಅದಕ್ಕೆ ಮಿಶ್ರ ಪ್ರತಿಕ್ರಿಯೆ ಬಂತು. ಹಾಸ್ಟೆಲ್ ನಡೆಸುವುದು ಅಪಾಯಕಾರಿ ಎನ್ನುವುದೇ ಬಹತೇಕ ಮಂದಿಯ ಅಭಿಪ್ರಾಯವಾಗಿತ್ತು. ಇದಲ್ಲದೇ 1 ರಿಂದ 5ನೇ ತರಗತಿ ವರೆಗೆ ಕಲಿಯುವ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯ ಪರಿಕಲ್ಪನೆ ಇಲ್ಲದ್ದರಿಂದ ಇಲಾಖೆಯು ಸೂಕ್ತ ಅನುಮತಿ ನೀಡುವುದು ಸಾಧ್ಯವಿರಲಿಲ್ಲ. ಹೆಣ್ಣುಮಕ್ಕಳ ಸುರಕ್ಷತೆ ಮತ್ತು ಸಂಪನ್ಮೂಲಗಳ ಸಂಗ್ರಹಣೆ ಇವೆಲ್ಲ ಇತರ ಸವಾಲುಗಳಾಗಿದ್ದುವು. ಆದರೆ ಮುಖ್ಯಶಿಕ್ಷಕರು ಮತ್ತು ಇತರ ಅಧ್ಯಾಪಕರು ಈ ಎಲ್ಲ ಸವಾಲುಗಳನ್ನು ಒಂದೊಂದಾಗಿ ಸ್ವೀಕರಿಸಿದರು.

ಬ್ಲಾಕ್ ಶಿಕ್ಷಣ ಕಚೇರಿಯ (ಬಿಇಒ) ಸಲಹೆ ಕೇಳಲಾಯಿತು. ಅಚ್ಚಪ್ಪ ಗೌಡರು ಸಮಸ್ಯೆಯ ತೀವ್ರತೆಯನ್ನು ಮತ್ತು ಮಧ್ಯಪ್ರವೇಶ ಮಾಡಬೇಕಾದ ಅಗತ್ಯವನ್ನೂ ಇಲಾಖೆಗೆ ತಿಳಿಸಿದರು. ತನ್ನ ಮಹತ್ವಾಕಾಂಕ್ಷೆಯ ಯೋಜನೆಗೆ ಅಡ್ಡಿಮಾಡಬಾರದೆಂದು ಅವರು ಬಿಇಒಗೆ ಕೇಳಿಕೊಂಡರು. ಅಧಿಕಾರಿಗಳು ಒಪ್ಪಿದರು. ಮುಂದೆ ಎಸ್‍ಡಿಎಂಸಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಯಿತು. ಸಮುದಾಯದ ಸದಸ್ಯರನ್ನೂ ಯೋಜನೆಯಲ್ಲಿ ಸೇರಿಸಿಕೊಳ್ಳಲಾಯಿತು. ಶಾಲೆಯ ಅವಧಿಯ ನಂತರ, ತರಗತಿ ಕೊಠಡಿಗಳನ್ನು ವಸತಿರೂಪದಲ್ಲಿ ಬಳಸಿಕೊಳ್ಳಲು ನಿರ್ಧರಿಸಲಾಯಿತು. ಈಗಾಗಲೇ ಇರುವ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ವ್ಯವಸ್ಥೆಯನ್ನೇ ಬಳಸಿಕೊಂಡು ಶಾಲೆಯಲ್ಲೇ ಬೆಳಗಿನ ಉಪಾಹಾರ ಮತ್ತು ರಾತ್ರಿಯ ಭೋಜನ ತಯಾರಿಸಲು ಯೋಚಿಸಲಾಯಿತು. ಶಾಲೆಯ ಒಳಗಿನ ಸೌಲಭ್ಯಗಳನ್ನೇ ಬಳಸಿ ಹಾಸ್ಟೆಲ್ ನಡೆಸಲು ಬೇಕಾದ ವೆಚ್ಚವನ್ನು ಲೆಕ್ಕ ಹಾಕಲಾಯಿತು. ಅಕ್ಟೋಬರ್ 2016ರಿಂದ ಫೆಬ್ರುವರಿ 2017ರ ವರೆಗಿನ ಐದು ತಿಂಗಳ ಅವಧಿಗೆ ಪ್ರತಿ ವಿದ್ಯಾರ್ಥಿಗೆ ತಲಾ ರೂಪಾಯಿ 700 ವೆಚ್ಚ ಆಗುತ್ತಿದ್ದು, ಅದನ್ನು ನೀಡಲು ಪಾಲಕರು ಒಪ್ಪಿದರು.

2016ರಲ್ಲಿ 40 ವಿದ್ಯಾರ್ಥಿಗಳನ್ನು ಹಾಸ್ಟೆಲ್‍ಗೆ ದಾಖಲು ಮಾಡಿಕೊಳ್ಳಲಾಯಿತು. ಮಕ್ಕಳ ಮೇಲ್ವಿಚಾರಣೆ ಮತ್ತು ಆರೈಕೆಗಾಗಿ ಅಧ್ಯಾಪಕರು ಪಾಳಿಯಲ್ಲಿ ಕೆಲಸ ಮಾಡಿದರು. ಕೆಲ ಸವಾಲುಗಳೊಂದಿಗೆ ಮೊದಲ ಐದು ತಿಂಗಳ ತನಕ ಹಾಸ್ಟೆಲ್ ನಡೆಸಲಾಯಿತು. ಆದರೆ ಈ ಅನುಭವ ಅಧ್ಯಾಪಕರಿಗೆ ಯೋಜನೆಯನ್ನು ಮುಂದುವರೆಸುವ ಆತ್ಮವಿಶ್ವಾಸವನ್ನು ತಂದು ಕೊಟ್ಟಿತು.

Classrooms being used as a hostel after school.

ಮುಂದಿನ ವರ್ಷ (2017−2018) ಶಾಲೆಯು ಹಾಸ್ಟೆಲ್ ವ್ಯವಸ್ಥೆಗೆ ಹೆಚ್ಚು ಸಿದ್ಧತೆಯನ್ನು ಮಾಡಿಕೊಂಡಿತು. ಅಚ್ಚಪ್ಪ ಗೌಡರು ಸ್ಥಳೀಯ ರಾಜಕಾರಣಿಗಳ ಮನವೊಲಿಸಿ ಶಾಲಾ ಆವರಣದಲ್ಲಿ ಒಂದು ಬೋರ್‍ವೆಲ್/ಕೊಳವೆಬಾವಿಯನ್ನು ಕೊರೆಯಿಸಿದರು. ಹೀಗೆ ನೀರು ಸರಬರಾಜಿನ ಸಮಸ್ಯೆ ಬಗೆಹರಿಯಿತು. ಬಿಸಿಯೂಟದ ದೈನಂದಿನ ವ್ಯವಸ್ಥೆಯ ಜತೆಗೆ ಹಾಸ್ಟೆಲ್‍ನ ವಿದ್ಯಾರ್ಥಿಗಳ ಅಗತ್ಯಗಳನ್ನು ನೋಡಿಕೊಳ್ಳಬಲ್ಲ ನಿಷ್ಠಾವಂತ ಅಡುಗೆಯವನನ್ನು ಶಾಲೆಯು ಸ್ಥಳೀಯ ಸಮುದಾಯದಿಂದಲೇ ನೇಮಕ ಮಾಡಿಕೊಂಡಿತು. ಇದೆಲ್ಲವನ್ನೂ ಚೆನ್ನಾಗಿಯೇ ಆಯೋಜಿಸಬೇಕಾಗಿತ್ತು. ಹಾಸ್ಟೆಲ್ ಅನ್ನು ನಡೆಸುವ ಖರ್ಚಿಗೆ ಬೇಕಾದ ಹಣವನ್ನು ಸಮುದಾಯದಿಂದಲೇ ಶೇಖರಿಸುವಲ್ಲಿ ಶಾಲೆಯು ಸಫಲವಾಯಿತು. ಜೋಳದ ರೊಟ್ಟಿಗಳನ್ನು ಕಳುಹಿಸಿಕೊಡುವಂತೆ ಹಾಸ್ಟೆಲ್‍ಗೆ ಮಕ್ಕಳನ್ನು ಕಳುಹಿಸುವ ಕುಟುಂಬದವರಲ್ಲಿ ಕೇಳಿಕೊಳ್ಳಲಾಯಿತು. ಪಾಲಕರು ನೀಡಿದ ಬೃಹತ್ ಪ್ರಮಾಣದ ಜೋಳದ ರೊಟ್ಟಿಗಳನ್ನು ಸಂಗ್ರಹಿಸುವಲ್ಲಿ ಶಾಲೆಯು ಯಶಸ್ವಿಯಾಯಿತು. ಹಾಸ್ಟೆಲ್‍ನ ಕೇರ್‍ಟೇಕರ್/ವಾರ್ಡನ್ ಆಗಿ ಕೆಲಸಮಾಡುವುದಕ್ಕೆ ಸ್ಥಳೀಯ ಲಂಬಾಣಿ ಸಮುದಾಯದಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಯಿತು. ಈ ಎಲ್ಲಾ ಕ್ರಮಗಳ ಪರಿಣಾಮವಾಗಿ ಆ ವರ್ಷ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 80ಕ್ಕೆ ಏರಿತು.

The makeshift classroom.

Pooled jawar rotis.

ಗ್ರಾಮದ ನಿವಾಸಿ ತೋಪಣ್ಣ ತನ್ನ ಇಬ್ಬರು ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಾರೆ. ಶಾಲೆಯಲ್ಲಿ ಪರಿಸ್ಥಿತಿ ಉತ್ತಮಗೊಳ್ಳುತ್ತಾ ಇದೆ ಎನ್ನುವುದು ಅವರ ಅನಿಸಿಕೆ. ಹಿಂದೆ ಅವರು ಶಾಲೆಗೆ ಭೇಟಿ ನೀಡುವ ಬಗ್ಗೆ ಎಂದೂ ಯೋಚಿಸಿಯೇ ಇರಲಿಲ್ಲ. ಈಗ, ತಾತ್ಕಾಲಿಕ ತರಗತಿ ಕೊಠಡಿ ನಿರ್ಮಾಣದಲ್ಲಿನ ತನ್ನ ಪಾತ್ರವನ್ನು ಬಹಳ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಅಂಥದ್ದೊಂದು ಶಾಲೆಯನ್ನು ಕಟ್ಟಲು ಬೇಕಾದ ಬಿದಿರುಗಳನ್ನು ಪಕ್ಕದ ಗ್ರಾಮದಿಂದ ತಾವು ಹೇಗೆ ಸಂಗ್ರಹಿಸಿದರು ಎನ್ನುವುದನ್ನು ಅವರು ವಿವರಿಸಿದರು.

Community contribution – a plate stand.

ಮಹತ್ತರ ಪರಿವರ್ತನೆ:

ವಲಸೆ ಹೋಗುವ ಕುಟುಂಬಗಳ ಮಕ್ಕಳಿಗೆ ಹಾಸ್ಟೆಲ್ ಎನ್ನುವುದು ಮಾತ್ರ ಇಲ್ಲಿನ ಏಕೈಕ ಅಭಿವೃದ್ಧಿ ಯೋಜನೆಯಲ್ಲ. ಏಕಕಾಲದಲ್ಲೇ ಅನೇಕ ಸಕಾರಾತ್ಮಕ ಬದಲಾವಣೆಗಳು ಕಂಡುಬಂದಿವೆ. ಶಾಲಾ ಸಂಕೀರ್ಣದ ಒಂದು ಭಾಗದಲ್ಲಿದ್ದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಲಾಯಿತು. ತಾತ್ಕಾಲಿಕ ತರಗತಿಕೋಣೆಗಳನ್ನು ಸಮುದಾಯದ ನೆರವು ಪಡೆದು ನಿರ್ಮಿಸಲಾಯಿತು. ಕಟ್ಟಡಕ್ಕೆಂದು ಮಂಜೂರುಗೊಂಡ ಹಣದಿಂದಲೇ ಹತ್ತಿರದಲ್ಲೇ ಇದ್ದ, ಸಮುದಾಯಕ್ಕೆ ಸೇರಿದ ವ್ಯಕ್ತಿಯ ಸಣ್ಣ ಜಮೀನೊಂದನ್ನು ರಿಯಾಯಿತಿ ದರದಲ್ಲಿ ಖರೀದಿಸಲಾಯಿತು. ಖಾಲಿ ಇದ್ದ ಶಿಕ್ಷಕ ಹುದ್ದೆಗಳಿಗೆ ಮೂವರು ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಯಿತು. ಶಾಲಾ ಸಿಬ್ಬಂದಿ ಮತ್ತು ಎಸ್‍ಡಿಎಂಸಿ ನಡುವಣ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಾಯಿತು.

News reports highlighting the efforts of the school.

ಶಾಲಾ ವೇಳೆಯ ನಂತರವೂ ಶಿಕ್ಷಕರು ಶಾಲೆಯಲ್ಲೇ ಉಳಿದುಕೊಳ್ಳಲು ಶುರು ಮಾಡಿದರು. ಮಕ್ಕಳ ಹಾಜರಾತಿ ದಿನಕಳೆದಂತೆ ಸುಧಾರಿಸುತ್ತಾ ಹೋಯಿತು. ದಾಖಲಾತಿಯ ಸಂಖ್ಯೆ ಮತ್ತು ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಕಡಿಮೆ ಸರಿಸಮಗೊಂಡಿತು. ಕ್ರಮೇಣ ಇಲ್ಲಿನ ಗ್ರಾಮದ ಮಕ್ಕಳು ಪಕ್ಕದ ಗ್ರಾಮಗಳಿಗೆ ಹೋಗಿ ಅಲ್ಲಿನ ಶಾಲೆಗಳಲ್ಲಿ ದಾಖಲಾತಿ ಪಡೆಯುವುದು ಕಡಿಮೆಯಾದದ್ದಷ್ಟೇ ಅಲ್ಲ, ನೆರೆಯ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಜುಮಾಲಪುರ ಜಿಎಚ್‍ಪಿಎಸ್ ಶಾಲೆಗೆ ಸೇರಲು ಶುರುಮಾಡಿದರು. ಮೊರಾರ್ಜಿ ಶಾಲೆಗೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಪ್ರತಿ ವರ್ಷ ಅತಿ ಕಡಿಮೆಯಿಂದ 15ಕ್ಕೇರಿತು. ಮಕ್ಕಳ ಕಲಿಕೆಯ ಮಟ್ಟ ಉತ್ತಮಗೊಳ್ಳುತ್ತಿರುವುದನ್ನು ಇದು ಸೂಚಿಸುತ್ತದೆ. ಮುಖ್ಯಶಿಕ್ಷಕರು ಮತ್ತು ಅವರ ತಂಡದವರ ಕಠಿಣ ಪರಿಶ್ರಮವು ವಿಶಾಲ ಸಮುದಾಯದ ಗಮನವನ್ನಷ್ಟೇ ಅಲ್ಲದೇ ಮಾಧ್ಯಮದ ಗಮನವನ್ನೂ ಸೆಳೆಯಿತು. ಶಾಲೆಯ ಯಶಸ್ಸಿನ ಸುದ್ದಿ ಸ್ಥಳೀಯ ಪತ್ರಿಕೆಗಳಲ್ಲೂ ಪ್ರಕಟಗೊಂಡಿತು.

ನೆರೆಯ ಬಾಗಲಕೋಟೆ ಜಿಲ್ಲೆಯ ಕೋಲಾರದ ಕಬ್ಬಿನಗದ್ದೆಗಳಲ್ಲಿ ಪಾಲಕರು ದುಡಿಯಲು ಹೋಗುವ ಸಂದರ್ಭಗಳಲ್ಲಿ ಶಾಲೆಯಲ್ಲೇ ಉಳಿಯುವ ಅನೇಕ ಅತ್ಯಂತ ಕಿರಿಯ ಹುಡುಗಿಯರಲ್ಲಿ ಮೀನಾಕ್ಷಿ ಕೂಡಾ ಒಬ್ಬಳು. ಪ್ರವೇಶದ ಆರಂಭದಲ್ಲಿ ಲಂಬಾಣಿ ಭಾಷೆಯನ್ನು ಮಾತ್ರ ಮಾತನಾಡುತ್ತಿದ್ದ ಮೀನಾಕ್ಷಿ ಈಗ ಕನ್ನಡದಲ್ಲಿ ಸರಾಗವಾಗಿ ಮಾತನಾಡಬಲ್ಲಳು. ಶಾಲೆಯಲ್ಲೇ ಇರುವುದಕ್ಕೆ ಇಷ್ಟ ಎಂದು ಆಕೆ ಹೇಳುತ್ತಾಳೆ. ಆಕೆಗೆ ಗಣಿತದ ಅಧ್ಯಯನ ಎಂದರೆ ಇಷ್ಟ. ಮೀನಾಕ್ಷಿಯನ್ನು ಶಾಲೆಯಲ್ಲೇ ಬಿಟ್ಟು ಹೊರಡುವ ಸಂದರ್ಭದಲ್ಲಿ ಆಕೆಯ ತಾಯಿ ಕಣ್ಣೀರು ಹಾಕಿದ್ದನ್ನು ಮುಖ್ಯ ಶಿಕ್ಷಕರು ನೆನಪಿಸಿಕೊಳ್ಳುತ್ತಾರೆ.

ಸಾಂಘಿಕ ಕೆಲಸ:

ಇದೆಲ್ಲ ಸಾಧ್ಯವಾದದ್ದು ಸಾಂಘಿಕ ಕೆಲಸದಿಂದ ಎಂದು ಹೇಳುತ್ತಾರೆ ಅಚ್ಚಪ್ಪ ಗೌಡ. ಅವರ ಪ್ರಕಾರ ತಂಡವು ಒಂದು ಕುಟುಂಬದಂತೆ. ತನ್ನ ಪಾತ್ರ ಏನಿದ್ದರೂ ಹಿರಿಯಣ್ಣನದ್ದಷ್ಟೇ. ಜತೆಯಾಗಿ ಕೆಲಸ ಮಾಡುವುದರಲ್ಲಿ ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದರಲ್ಲಿ ತಮಗೆ ನಂಬಿಕೆ ಇದೆ ಎಂದು ಅಧ್ಯಾಪಕರು ಹೇಳುತ್ತಾರೆ. ಮಕ್ಕಳು ದೀರ್ಘ ಕಾಲ ಗೈರು ಹಾಜರಾದಾಗೆಲ್ಲ ಅಧ್ಯಾಪಕರು ಸಮುದಾಯದ ಭೇಟಿಯ ಕ್ರಮ ಕೈಗೊಂಡು ಹೆತ್ತವರೊಡನೆ ಮಾತುಕತೆ ನಡೆಸುತ್ತಾರೆ. ಪ್ರತಿದಿನ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಅವರು ಹೆತ್ತವರನ್ನು ಒತ್ತಾಯಿಸುತ್ತಾರೆ.

Achchappa Gouda (second from right) with his team.

ಪೂರ್ಣಗೊಳ್ಳದ ಕಾರ್ಯ:

ತಮ್ಮ ಕೆಲಸ ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದು ಅಚ್ಚಪ್ಪ ಗೌಡರಿಗೆ ಮತ್ತು ಅವರ ಶಿಕ್ಷಕ ವೃಂದದವರಿಗೆ ತಿಳಿದಿದೆ. ನಲಿ-ಕಲಿ ವಿಧಾನದ ಮೂಲಕ ಮಕ್ಕಳಿಗೆ ಪಾಠಮಾಡುತ್ತಿರುವ ಮಲ್ಲಿಕಾರ್ಜುನ್ ಹೇಳುವಂತೆ ಕೇವಲ ಭೌತಿಕ ಅಡೆತಡೆಗಳನ್ನು ಮಾತ್ರ ಈಗ ಮುರಿಯುವುದಕ್ಕೆ ಸಾಧ್ಯವಾಗುತ್ತಿದೆ. ಬೌದ್ಧಿಕ ಅಡ್ಡಿಆತಂಕಗಳನ್ನು ನಿವಾರಿಸಿದ ನಂತರದ ನಿರೀಕ್ಷೆಯ ನೆಲೆಯ ಕಲಿಕೆಯ ಮಟ್ಟವನ್ನು ಇನ್ನಷ್ಟೇ ಸಾಧಿಸಬೇಕಾಗಿದೆ.

ಆರಂಭಿಕ ತರಗತಿಗಳಲ್ಲಿ ಲಂಬಾಣಿ ಸಮುದಾಯಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಸಂಭಾಷಣೆ ನಡೆಸುವುದಕ್ಕೆ ಲಂಬಾಣಿ ಭಾಷೆಯ ಜ್ಞಾನ ಇಲ್ಲದೇ ಇದ್ದದ್ದು ತಮಗೆ ಒಂದು ತಡೆ ಆಗಿತ್ತು ಎನ್ನುವುದನ್ನು ಶಿಕ್ಷಕರು ಒಪ್ಪಿಕೊಳ್ಳುತ್ತಾರೆ. ಅವರು ಬಹು-ಹಂತದ/ಬಹುತರಗತಿಯ ಬೋಧನಾ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಈ ಸವಾಲನ್ನು ಉತ್ತರಿಸಲು ತಕ್ಕಮಟ್ಟಿಗೆ ಸಾಧ್ಯ ಆಯಿತು. ಆದರೆ ತರಗತಿಯ ಗಾತ್ರ – ಒಂದು ತರಗತಿಯಲ್ಲಿ ಸುಮಾರು 60 ಮಂದಿ- ಸಮಸ್ಯೆಯನ್ನು ಸಂಕೀರ್ಣಗೊಳಿಸಿತು. ಹೆಚ್ಚು ಶಿಕ್ಷಕರನ್ನು ನೇಮಕ ಮಾಡಲು ಶಾಲೆ ಬಯಸಿತು. ತಮ್ಮ ಕಠಿಣ ದುಡಿಮೆಯ ಮೂಲಕ ಸಮುದಾಯದ ಔದಾರ್ಯವನ್ನು ಶಿಕ್ಷಕರು ಪಡೆದುಕೊಂಡಿದ್ದರು. ಹಾಗಾಗಿ ಆರ್ಥಿಕ ಮತ್ತು ಮಾನವ ಸಂಪನ್ಮೂಲಗಳ ಮೂಲಕ ಸಮುದಾಯವು ಶಾಲೆಗೆ ನೆರವಾಗುವ ಎಲ್ಲ ನಂಬಿಕೆಯನ್ನು ಅವರು ಇಟ್ಟುಕೊಂಡಿದ್ದಾರೆ.

ಗ್ರಾಮದ ಪ್ರತಿಯೊಬ್ಬ ಮಗು ಕೂಡ ಶಿಕ್ಷಣದ ಅವಕಾಶ ಪಡೆಯಬೇಕು ಎನ್ನುವುದು ಅಚ್ಚಪ್ಪ ಗೌಡರ ಬಯಕೆ. ತನ್ನ ಗ್ರಾಮದ ಮತ್ತು ನೆರೆಯ ಗ್ರಾಮದ ಮಕ್ಕಳು ಕೂಡಾ ತನ್ನ ಶಾಲೆಗೆ ಬರಬೇಕೆನ್ನುವುದು ಅವರ ನಿರೀಕ್ಷೆ. ಶಾಲೆಯಲ್ಲಿರುವ ಕೆಲವು ಮೂಲಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಪುಸ್ತಕಗಳು, ತರಗತಿ ಕೊಠಡಿಗಳು ಮತ್ತು ಮಧ್ಯಾಹ್ನದ ಬಿಸಿಯೂಟದ ಸೇವೆ ಇವುಗಳನ್ನೆಲ್ಲ ಮೇಲ್ದರ್ಜೆಗೆ ಏರಿಸಬೇಕೆನ್ನುವುದು ಅವರ ಭಾವನೆ. ವಿದ್ಯಾರ್ಥಿಗಳಲ್ಲಿನ ಕಲಿಕೆಯನ್ನು ಸುಧಾರಿಸುವುದಕ್ಕಾಗಿ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಲಕರಣೆಗಳು ಮತ್ತು ಕಂಪ್ಯೂಟರ್/ಗಣಕ ಪ್ರಯೋಗಾಲಯಗಳನ್ನು ಸಜ್ಜುಗೊಳಿಸಬೇಕಾಗಿದೆ. ಇವೆಲ್ಲ ಪಾಲಕರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬಲ್ಲವು. ಇವೆಲ್ಲವನ್ನು ಸಾಧಿಸುವುದಕ್ಕೆ ತಾನು ದೀರ್ಘಕಾಲ ಕಾಯಬೇಕಾಗಿ ಬರಲಾರದು ಎನ್ನುವ ಅಚಲ ವಿಶ್ವಾಸ ಅಚ್ಚಪ್ಪ ಗೌಡ ಅವರದ್ದು.

ಉಪಸಂಹಾರ:

ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಗ್ರಾಮೀಣ ಸಮುದಾಯದ ಜನರಿಗೆ ಆಸಕ್ತಿ ಇಲ್ಲ ಎನ್ನುವುದು ಬಹುತೇಕ ಜನರಲ್ಲಿ ಇರುವ ಒಂದು ಭಾವನೆ. ತಮ್ಮಿಂದ ಸಾಧ್ಯವಾದ ಅತ್ಯುತ್ತಮ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಪ್ರತಿಯೊಬ್ಬರೂ ಬಯಸುತ್ತಾರೆ. ಸಮುದಾಯಗಳು ಶಾಲೆಗೆ ಎಷ್ಟು ಕೊಡುಗೆಯನ್ನು ಕೊಡಬಲ್ಲವು ಎನ್ನುವುದನ್ನು ಶಾಲೆಯ ಒಳಗಿನ ಮತ್ತು ಹೊರಗಿನ ಸನ್ನಿವೇಶಗಳು ನಿರ್ಧರಿಸುತ್ತವೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಶಾಲೆಗಳು ಸಮರ್ಥವಾಗಿವೆ. ಕ್ರಿಯಾಶೀಲ ನಾಯಕತ್ವದ ಅಚ್ಚಪ್ಪ ಗೌಡರಂಥವರು ಇಂಥ ಜವಾಬ್ದಾರಿ ಹೊತ್ತುಕೊಂಡಾಗ ಅವರು ಬಯಸಿದ ಪರಿವರ್ತನೆಯನ್ನು ತಡೆಯುವ ಯಾವ ಶಕ್ತಿಯೂ ಇರುವುದಿಲ್ಲ. ಜುಮಾಲಾಪುರ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂತಹ ಪರಿವರ್ತನೆಗೆ ಅತ್ಯುತ್ತಮ ಉದಾಹರಣೆ.

ಕೃತಜ್ಞತೆ:

ತಮ್ಮ ಎಡೆಬಿಡದ ಚಟುವಟಿಕೆಗಳ ನಡುವೆಯೂ ತಮ್ಮ ವೃತ್ತಿಬದುಕಿನ ಅನುಭವ ಮತ್ತು ಆಲೋಚನೆಗಳನ್ನು ನಮ್ಮ ಜತೆಗೆ ಹಂಚಿಕೊಳ್ಳಲು ಸಮಯ ಹೊಂದಿಸಿಕೊಂಡ ಅಚ್ಚಪ್ಪ ಗೌಡ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಶಾಲಾ ಭೇಟಿಯ ಸಂದರ್ಭದಲ್ಲಿ ಸಂವಾದಕ್ಕೆ ಅವಕಾಶ ಮಾಡಿ ನಮ್ಮೊಂದಿಗೆ ಸಹಕರಿಸಿದ ಶಾಲೆಯ ಮಕ್ಕಳಿಗೆ ಹಾಗು ಶಿಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳು. ಬಿಡುವು ಮಾಡಿಕೊಂಡು ಶಾಲೆಗೆ ಭೇಟಿ ನೀಡಿ ತಮ್ಮ ಅನುಭವ ಮತ್ತು ಆಲೋಚನೆಗಳನ್ನು ಹಂಚಿಕೊಂಡ ಸಮುದಾಯದ ಸದಸ್ಯರಿಗೂ ಹೃದಯಪೂರ್ವಕ ಕೃತಜ್ಞತೆಗಳು. ಶಿಕ್ಷಕರನ್ನು ಗುರುತಿಸಿ ಅವರ ಬಗ್ಗೆ ಮಾಹಿತಿ ನೀಡಿದ ಮತ್ತು ಕ್ಷೇತ್ರ ಸಂದರ್ಶನಕ್ಕೆ ಬೇಕಾದ ಎಲ್ಲ ಬಗೆಯ ವ್ಯವಸ್ಥೆ ಮಾಡಿದ ಯಾದಗಿರಿ ಜಿಲ್ಲಾ ಸಂಸ್ಥೆ, ಅಜೀಂ ಪ್ರೇಮ್‍ಜಿ ಫೌಂಡೇಷನ್‍ಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಲೇ

ಶರದ್ ಸುರೆ ಮತ್ತು ಮೇಘಾ ಕುಲಕರ್ಣಿ