ಕನಸಿನ ಸಾಕಾರ

ಅದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದಲ್ಲಿರುವ ನೆಹರೂ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಶಾಲೆಯ ಆವರಣ ಹಚ್ಚಹಸಿರಿನಿಂದ ತುಂಬಿದೆ.

Pic11

ಶಿಕ್ಷಕ: ರಾಮನ ಗೌಡ
ಶಾಲೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನೆಹರೂ ನಗರ, ಹಳ್ಳಿಖೇಡ, ಹುಮ್ನಾಬಾದ್, ಬೀದರ್, ಕರ್ನಾಟಕ

This is a translation of the article originally written in English

ಹಿನ್ನೆಲೆ:

ಅದು ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದಲ್ಲಿರುವ ನೆಹರೂ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಶಾಲೆಯ ಆವರಣ ಹಚ್ಚಹಸಿರಿನಿಂದ ತುಂಬಿದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿ, ಬೆಳಗಿನ ಪ್ರಾರ್ಥನೆಯನ್ನು ಮುಗಿಸಿದ್ದರು. ತರಗತಿಗಳು ಇನ್ನೂ ಆರಂಭವಾಗಿಲ್ಲ. ಆದರೆ ಮಧ್ಯಾಹ್ನದ ಬಿಸಿಯೂಟಕ್ಕೆ ಆಗಲೇ ಸಿದ್ಧತೆಗಳು ಶುರುವಾಗಿದ್ದವು. ಶಿಕ್ಷಕರಾದ ರಾಮನ ಗೌಡ ಅವರು ತರಗತಿಯಲ್ಲಿ ಹಾಜರಾತಿಯನ್ನು ಪಡೆದುಕೊಳ್ಳುತ್ತಿದ್ದರು. ನಾವು ನೇರವಾಗಿ ಮುಖ್ಯ ಶಿಕ್ಷಕಿ ಕೊಠಡಿಯನ್ನು ಪ್ರವೇಶಿಸಿದೆವು. ಮುಖ್ಯ ಶಿಕ್ಷಕಿ ಅನುರಾಧಾ ನಮ್ಮ ನಿರೀಕ್ಷೆಯಲ್ಲಿದ್ದರು.

(ಚಿತ್ರ:1,2- ಹಸಿರು ಶಾಲೆ)


ಈ ಶಾಲೆಯಲ್ಲಿರುವ ಶಿಕ್ಷಕರ ಸಂಖ್ಯೆ ಕೇವಲ ಮೂರು. ಇಲ್ಲಿ 55 ವಿದ್ಯಾರ್ಥಿಗಳಿದ್ದಾರೆ. ಈ ಗ್ರಾಮದ ಒಟ್ಟು ಜನಸಂಖ್ಯೆ 765. ಈ ಶಾಲೆಗೆ ಬರುವವರೆಲ್ಲ ಈ ಗ್ರಾಮದ ಮಕ್ಕಳೇ. ಇಲ್ಲಿರುವ 86 ಕುಟುಂಬಗಳ ಪೈಕಿ ಅಲ್ಪಸಂಖ್ಯಾತ ಸಮುದಾಯದ ಹತ್ತು ಕುಟುಂಬಗಳನ್ನು ಹೊರತುಪಡಿಸಿದರೆ ಉಳಿದವರೆಲ್ಲ ಪರಿಶಿಷ್ಟ ಜಾತಿಗೆ ಸೇರಿದವರು.

ಶಾಲೆಯ ಹಿನ್ನೆಲೆ:

ಕಳೆದ ಒಂಭತ್ತು ವರ್ಷಗಳಿಂದ ಶ್ರೀಮತಿ ಅನುರಾಧಾ ಅವರು ಈ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾರೆ. ಹತ್ತು ವರ್ಷಗಳ ಹಿಂದೆ ಈ ಶಾಲೆ ಅಕ್ಷರಶಃ ಭಣಗುಡುತ್ತಿತ್ತು. ಶಾಲಾ ಆಡಳಿತ ಮತ್ತು ಅಭಿವೃದ್ಧಿ ಸಮಿತಿ (ಎಸ್‍ಡಿಎಂಸಿ)ಯನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲು ಇಲ್ಲಿನ ಸಮುದಾಯದ ಎರಡು ಬಣಗಳು ಪ್ರಯತ್ನ ನಡೆಸಿದ್ದವು. ಈ ಎರಡು ಬಣಗಳ ನಡುವಿನ ಸಂಘರ್ಷದಿಂದಾಗಿ ಶಾಲೆಯ ಪರಿಸ್ಥಿತಿ ಹದಗೆಟ್ಟು ಹೋಗಿತ್ತು. ಇಂತಹ ಸಂದರ್ಭದಲ್ಲಿ ಶಾಲೆಗೆ ಮುಖ್ಯಸ್ಥರಾಗಿ ಬಂದವರು ಅನುರಾಧಾ ಅವರು. ಎಸ್‍ಡಿಎಂಸಿ ಸದಸ್ಯರು ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡರೂ ಅನುಮತಿ ಸೂಚಿಸುತ್ತಿರಲಿಲ್ಲ. ಹಾಗಾಗಿ ಅಭಿವೃದ್ಧಿ ಕನಸಿನ ಮಾತಾಗಿತ್ತು. ಈ ಸದಸ್ಯರ ಒಳಜಗಳ ಶಾಲೆಯ ದಿನನಿತ್ಯದ ಕೆಲಸಕ್ಕೂ ತೊಂದರೆಯಾಗಿತ್ತು. ಶಿಕ್ಷಕರು ಸ್ವತಂತ್ರವಾಗಿ ಕೆಲಸ ಮಾಡುವುದು ಸಾಧ್ಯವಿರಲಿಲ್ಲ. ಹಾಗಾಗಿ ಮಕ್ಕಳ ಕಲಿಕೆಯ ಮೇಲೂ ಇದರ ಪರಿಣಾಮ ಬೀರುತ್ತಿತ್ತು ಎನ್ನುತ್ತಾರೆ ಮುಖ್ಯ ಶಿಕ್ಷಕಿ.

ಶಿಕ್ಷಕ ರಾಮನ ಗೌಡ:

ರಾಮನ ಗೌಡರ ಮೂಲ ಊರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ತಾಳಿಕೋಟೆಯಲ್ಲಿ ತಮ್ಮ ಪ್ರೌಢಶಾಲಾ ಮಟ್ಟದ ಶಿಕ್ಷಣವನ್ನು ಪಡೆದ ಅವರು ಸಂಬಂಧಿಯೊಂದಿಗೆ ವಾಸವಿದ್ದಾರೆ. ಅವರು ಶಿಕ್ಷಣ ಕ್ಷೇತ್ರದ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದು 2009ರಲ್ಲಿ. ಅದಕ್ಕೂ ಮುನ್ನ ಅವರು ಕಲಬುರಗಿ ಜಿಲ್ಲೆಯ ಅಫಜಲ್ಪುರದಲ್ಲಿ ಡಿಎಡ್ (ಡಿಪ್ಲೊಮಾ ಇನ್ ಎಜುಕೇಶನ್) ಮುಗಿಸಿದರು. ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ (ಡಿಐಇಟಿ)ಯಲ್ಲಿ ಅವರು ಗಳಿಸಿದ್ದು ಅಗ್ರಸ್ಥಾನ. ಅವರು ಕರ್ತವ್ಯಕ್ಕೆ ಹಾಜರಾದ ದಿನವೇ ಹೊಸದಾಗಿ ನೇಮಕ ಹೊಂದಿದ ಶಿಕ್ಷಕರಿಗೆ ನೀಡುವ ತರಬೇತಿ ಕಾರ್ಯಕ್ರಮವಾದ ಪ್ರೇರಣ’ಕ್ಕೆ ಹಾಜರಾಗುತ್ತಾರೆ.

ಪ್ರೇರಣ’ಕ್ಕೆ ಹಾಜರಾದ ಹೊಸ ಶಿಕ್ಷಕರಿಗೆ ನೀಡುವ ಅನೇಕ ತರಬೇತಿಗಳಲ್ಲಿ ಒಂದು ನಿಮ್ಮ ಕನಸಿನ ಶಾಲೆಯ ಬಗ್ಗೆ ಲೇಖನ ಬರೆಯುವುದು. ತಮ್ಮ ಕನಸಿನ ಶಾಲೆ’ ಎಂದರೆ ಏನು ಎನ್ನುವ ಬಗ್ಗೆ ಬರೆದ ಸಾಲುಗಳು ರಾಮನ ಗೌಡರಿದೀಗಲೂ ಸ್ಪಷ್ಟವಾಗಿ ನೆನಪಿದೆ. ಒಂದು ಮಾದರಿ ಶಾಲೆಗೆ ಮಕ್ಕಳು ಪ್ರೀತಿಯಿಂದ ಬರುವಂತಿರಬೇಕು, ಅದು ಮಕ್ಕಳ ಕಲಿಕೆಯ ಅಪರೂಪದ ಕೇಂದ್ರವಾಗಬೇಕು, ಅಲ್ಲಿ ಶಿಕ್ಷಕರು ಒಗ್ಗಟ್ಟಿನಿಂದ ದುಡಿಯುವಂತಿರಬೇಕು, ಒಂದು ಸಮುದಾಯವಿರುವ ಪ್ರದೇಶದಲ್ಲೇ ಆ ಶಾಲೆಯಿರಬೇಕು ಮತ್ತು ಆ ಶಾಲೆಯೂ ಅವರದ್ದೇ ಆಗಿರಬೇಕು ಹಾಗೂ ಆ ಶಾಲೆಗೆ ಅದರದ್ದೇ ಆದ ಸುಂದರ ಕೈತೋಟವಿರಬೇಕು. ನೆಹರೂ ನಗರದ ಈ ಶಾಲೆಯನ್ನು ಸೇರಿಕೊಂಡಾಗ ರಾಮನ ಗೌಡ ಅವರ ಕನಸು ಸಾಕಾರಗೊಳ್ಳುವುದು ದೂರದ ಮಾತಾಗಿತ್ತು. ಶಾಲಾ ನೋಂದಣಿಯಲ್ಲಿ 58 ವಿದ್ಯಾರ್ಥಿಗಳ ಹೆಸರಿತ್ತು, ಆದರೆ ಸರಿಯಾಗಿ ಶಾಲೆಗೆ ಬರುತ್ತಿದ್ದವರು ಕೇವಲ 15 ಮಂದಿ ಮಾತ್ರ. ಶಾಲಾ ಆವರಣ ಎಲ್ಲರಿಗೂ ಮುಕ್ತವಾಗಿತ್ತು ಮತ್ತು ಆ ಕಾರಣಕ್ಕೆ ಅದು ಸಮುದಾಯದಿಂದ ದುರ್ಬಳಕೆಗೆ ಒಳಗಾಗಿತ್ತು. ಹಾಗಾಗಿ ಅಲ್ಲೊಂದು ಬದಲಾವಣೆ ಅನಿವಾರ್ಯವಾಗಿತ್ತು.

ಬದಲಾವಣೆಯ ಗಾಳಿ:

ಶಾಲೆ ಮತ್ತು ಸಮುದಾಯದ ನಾಡಿ ಮಿಡಿತವನ್ನು ಅರ್ಥ ಮಾಡಿಕೊಳ್ಳಲು ರಾಮನ ಗೌಡರಿಗೆ ಒಂದು ವರ್ಷವೇ ಬೇಕಾಯಿತು. ಮೊದಲ ಒಂದು ವರ್ಷವನ್ನು ಸಮುದಾಯದ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಪಾಲಕರ ಜೊತೆ ಮಾತುಕತೆ ನಡೆಸುವುದಕ್ಕೇ ಮೀಸಲಿಟ್ಟರು. ಅವರು ಕಂಡುಕೊಂಡ ಮೊದಲ ಸತ್ಯ ಏನೆಂದರೆ ಅಲ್ಲಿರುವ ಅನೇಕ ಕುಟುಂಬಗಳಿಗೆ ಬೆಳಗಿನ ಉಪಹಾರಕ್ಕೆ ಒಂದೆರಡು ಬಿಸ್ಕತ್ತು ಹೊಂದಿಸುವುದೂ ಕಷ್ಟವಿತ್ತು. ಅನೇಕರು ಒಂದು ಹೊತ್ತಿನ ಊಟಕ್ಕಾಗಿ ಮಧ್ಯಾಹ್ನದ ಬಿಸಿಯೂಟವನ್ನೇ ಅವಲಂಬಿಸಿದ್ದಾರೆ. ಯಾಕೆಂದರೆ ಅವರ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಸಿಗುವುದೆಂದರೆ ಅದೊಂದೇ. ಬಹುತೇಕ ಕುಟುಂಬಗಳಿಗೆ ಕ್ಲಾಸ್-ವರ್ಕ್‍ಗೆಂದು ಬಳಸುವ ಗ್ರಾಫ್‍ಶೀಟ್ ಕೊಂಡುಕೊಳ್ಳುವ ಸಾಮರ್ಥ್ಯವೂ ಇಲ್ಲ. ತಮ್ಮ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗೆಗೂ ಅವರಲ್ಲಿ ಯಾವುದೇ ಅರಿವಿಲ್ಲ. ಆಧಾರ್ ಕಾರ್ಡ್‍ನ ದ್ವಿಪ್ರತಿ ಪಡೆಯಲು ಹತ್ತಿರದ ಪಟ್ಟಣಕ್ಕೆ ಭೇಟಿ ಕೊಡಬೇಕು. ಬಸ್ ಪ್ರಯಾಣಕ್ಕೆ ಬೇಕಾದ ಹತ್ತು ರೂಪಾಯಿ ಭರಿಸುವ ಶಕ್ತಿಯೂ ಅನೇಕರಲ್ಲಿ ಇಲ್ಲ. ಮನೆಯ ಯಜಮಾನ ಕುಡಿತದ ಚಟಕ್ಕೆ ದಾಸನಾಗಿರುವ ಕಾರಣ ಬಹಳಷ್ಟು ಕುಟುಂಬಗಳು ಅಸಹಾಯಕವಾಗಿವೆ. ಸಮುದಾಯದ ಜೊತೆ ರಾಮನ ಗೌಡರು ನಡೆಸಿದ ಮಾತುಕತೆ ಸಮುದಾಯ ಹಾಗೂ ವಿದ್ಯಾರ್ಥಿಗಳ ಸ್ಥಿತಿಗತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಇದಕ್ಕೆ ಏಕೈಕ ಪರಿಹಾರ ಶಾಲೆ ಮತ್ತು ಸಮುದಾಯದ ನಡುವೆ ನಿಕಟ ಸಂಬಂಧ ಕಾಯ್ದುಕೊಳ್ಳುವುದು ಎಂದು ಅವರು ತಿಳಿದರು. ಇದನ್ನು ಸಮುದಾಯದ ಸದಸ್ಯರಿಗೆ ಮನವರಿಕೆ ಮಾಡಲು ಅವರು ಎಸ್‍ಡಿಎಂಸಿ ಜೊತೆ ಮಾತುಕತೆ ಶುರುಮಾಡಿದರು. ಒಬ್ಬ ಶಿಕ್ಷಕನಾದವನಿಗೆ ಇದು ಅನೇಕ ಶಾಲೆಗಳಲ್ಲಿ ಒಂದು, ಇದಲ್ಲದೇ ಹೋದರೆ ಇನ್ನೊಂದು ಶಾಲೆಗೆ ಹೋಗಿ ಕಲಿಸಬಹುದು. ಆದರೆ ಈ ಸಮುದಾಯಕ್ಕೆ ಇರುವುದು ಇದೊಂದೇ ಸರಕಾರಿ ಶಾಲೆ. ಹಾಗಾಗಿ ಶಾಲೆ ಪರಿಣಾಮಕಾರಿಯಾಗಿ ನಡೆಯುವುದು ಸಮುದಾಯದ ಜವಾಬ್ದಾರಿಯಾಗಬೇಕು’ ಎಂಬ ರಾಮನ ಗೌಡರ ತರ್ಕಬದ್ಧ ಮಾತುಗಳು ಸಮುದಾಯದ ಮನಪರಿವರ್ತನೆಗೆ ನಾಂದಿ ಹಾಡಿತು. ಸಮುದಾಯದಲ್ಲಿ ಸಾಮರಸ್ಯದ ಆಶಾಕಿರಣವನ್ನು ಮೂಡಿಸಿತು.

ಶಾಲೆ ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಮನ ಗೌಡ ಅವರು ಕರೆದ ಪಾಲಕರ ಸಭೆ ಬದಲಾವಣೆಯ ಮೊದಲ ಹೆಜ್ಜೆಯಾಗಿತ್ತು. ಅವರು ಸಮುದಾಯದ ಸದಸ್ಯರಿಗೆ ಮಾಡಿಕೊಂಡ ಮನವಿ ಒಂದೇ ಆಗಿತ್ತು; ಇದು ನಿಮ್ಮದೇ ಮಕ್ಕಳ ಲಾಭಕ್ಕಾಗಿ ತೆರೆದಿರುವ ಶಾಲೆ, ಈ ಸಂಸ್ಥೆ ಜೊತೆ ದಯವಿಟ್ಟು ಕೈಜೋಡಿಸಿ ಎಂದು.

ರಾಮನ ಗೌಡ ಅವರು ಶಾಲೆಯಲ್ಲಿ ಹೆಚ್ಚಿನ ಸಮಯ ಕಳೆಯಲು ಆರಂಭಿಸಿದರು. ಬೆಳಿಗ್ಗೆ ಹತ್ತಕ್ಕೆ ಶಾಲೆ ಆರಂಭವಾಗುವುದಿದ್ದರೆ ಒಂದು ತಾಸು ಮೊದಲೇ ಅವರು ಶಾಲೆಯಲ್ಲಿ ಹಾಜರಿರುತ್ತಿದ್ದರು. ತಾವೇ ಗಿಡಗಳಿಗೆ ನೀರು ಹಾಕುವುದು, ಶಾಲಾ ಆವರಣವನ್ನು ಸ್ವಚ್ಛಗೊಳಿಸುವುದನ್ನು ಮಾಡತೊಡಗಿದರು. ಭಾನುವಾರ ಮತ್ತು ಇತರ ರಜಾ ದಿನಗಳಲ್ಲೂ ಅವರು ಶಾಲೆಗೆ ಬರತೊಡಗಿದರು. ದಿನಗಳು ಕಳೆಯುತ್ತಲೇ ಶಿಕ್ಷಕ ಮಾಡುವ ಈ ಕೆಲಸಗಳು ತಮ್ಮದೂ ಕೂಡ ಎಂಬ ಭಾವನೆ ಮಕ್ಕಳಲ್ಲಿ ಬೆಳೆಯಿತು. ಅವರೂ ಆ ಕೆಲಸಗಳಲ್ಲಿ ಕೈಜೋಡಿಸಲು ಆರಂಭಿಸಿದರು. ಇದು ತಮ್ಮದೇ ಶಾಲಾ ಆವರಣ ಎಂಬ ಅಭಿಪ್ರಾಯ ಅವರಲ್ಲಿ ಗಟ್ಟಿಯಾಯಿತು.

ಆ ಹೊತ್ತಿಗೇ ನಮ್ಮ ಈ ಶಾಲಾ ಆವರಣದೊಳಕ್ಕೆ ಜಾನುವಾರುಗಳು ಮತ್ತು ಜನ ನುಗ್ಗದಂತೆ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಅರಿವು ಮೂಡಿತು. ತಕ್ಷಣ ಶುರುವಾಗಿದ್ದು ಕಂಪೌಂಡ್ ಗೋಡೆ ಕಟ್ಟುವ ಕೆಲಸ. ಇದಕ್ಕಾಗಿ ಊರಿನ ಸಮುದಾಯದ ಸದಸ್ಯರು ಜಿಲ್ಲಾ ಪಂಚಾಯತ್ ಮೇಲೆ ಒತ್ತಡ ತಂದರು. ಆವರಣ ಗೋಡೆ ಕಟ್ಟಲು 1,23,000 ರೂ. ಮತ್ತು ಶೌಚಾಲಯ ನಿರ್ಮಾಣಕ್ಕೆ 1,88,000 ರೂ. ಬಿಡುಗಡೆಯಾಯಿತು. ಒಟ್ಟಾರೆ ಕಾಮಗಾರಿ ಶಿಕ್ಷಕರು ಮತ್ತು ಸಮುದಾಯ ಸದಸ್ಯರ ಮೇಲ್ವಿಚಾರಣೆಯಲ್ಲಿ ನಡೆಯಿತು. ಸರಕಾರದಿಂದ ಮಂಜೂರಾದ ಹಣ ಸುಭದ್ರವಾಗಿರುವಂತೆ ಕಣ್ಣಿಡಲಾಯಿತು. ಸಮುದಾಯದ ಅನೇಕ ಮಂದಿ ಅಕ್ಷರ ದೇಗುಲಕ್ಕೆ ಕರಸೇವೆಯನ್ನು ಮಾಡಿದರು. ಆ ಹೊತ್ತಿಗೆ ಅವರಿಗೂ ಅರಿವಾಗಿತ್ತು – ಶಾಲೆ ಮತ್ತು ಸಮುದಾಯದ ನಡುವಿನ ಸಾಮರಸ್ಯವೆಂದರೆ ಇದೇ ಎಂದು.

ಕಲಿಕಾ ಕೊಠಡಿಯೊಳಗೆ:

ಈಗ ಶಾಲಾ ಆವರಣ ಮಕ್ಕಳದ್ದೆ, ಅವರು ಇದನ್ನು ಕಾಯ್ದುಕೊಳ್ಳುತ್ತಾರೆ ಎಂಬ ನಂಬಿಕೆ ರಾಮನ ಗೌಡ ಅವರಲ್ಲಿ ಗಟ್ಟಿಯಾಯಿತು. ಇದನ್ನು ಸ್ವಚ್ಛ ಹಾಗೂ ಹಚ್ಚಹಸಿರಾಗಿ ಇಟ್ಟುಕೊಳ್ಳಬೇಕು ಎಂಬ ಪ್ರೀತಿ ಮಕ್ಕಳಲ್ಲಿ ಬಲಿತು ಬಿಟ್ಟಿದ್ದೇ ಇದಕ್ಕೆ ಕಾರಣ. ನಮ್ಮ ಶಾಲೆಯ ಆವರಣದಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂಬ ಆಸಕ್ತಿ ಅವರಲ್ಲಿ ಮೂಡಿತು. ಇಂತಹ ಸಣ್ಣಪುಟ್ಟ ಆಸೆಗಳೇ ಅವರನ್ನು ಕಲಿಕೆಯ ಕಡೆಗೆ ಸೆಳೆಯಿತು ಎನ್ನುತ್ತಾರೆ ಅವರು. ಶಾಲಾ ಅವಧಿಯಲ್ಲಿ ಶೇ.20ರಷ್ಟು ಸಮಯವನ್ನು ಕೈತೋಟದಲ್ಲಿಯೇ ಕಳೆಯುವುದರಿಂದ ಕಲಿಕೆಗೆ ಅದೂ ಒಂದು ವೇದಿಕೆಯಾಗಿತ್ತು. ಮಕ್ಕಳು ಕಲಿಯುವುದು ಪಠ್ಯಪುಸ್ತಕಗಳಿಂದ ಮಾತ್ರ ಅಲ್ಲ ಎಂಬುದು ರಾಮನ ಗೌಡ ಅವರ ನಂಬಿಕೆ. ಇದಕ್ಕೆ ಅವರು ಸಸ್ಯಗಳ ಬಗ್ಗೆ ಇರುವ ಪಾಠಗಳ ಉದಾಹರಣೆಯನ್ನು ಕೊಡುತ್ತಾರೆ. ಸಸ್ಯಗಳ ಅಂಗಗಳು ಮತ್ತು ಅವು ಮಾಡುವ ಕೆಲಸ ಮಕ್ಕಳಿಗಾಗಲೇ ಪರಿಚಯವಾಗಿರುತ್ತಿತ್ತು. ಇಂತಹ ಸಸ್ಯಗಳನ್ನೇ ಕಲಿಕಾ ಕೊಠಡಿಯೊಳಗೆ ಕೊಂಡೊಯ್ದರೆ ಮಕ್ಕಳು ಪ್ರಶ್ನೆ ಕೇಳಲು ಶುರು ಮಾಡುತ್ತಿದ್ದರು. ಇವರ ಮಾತುಕತೆಗಳೆಲ್ಲವೂ ಸ್ಥಳೀಯ ಪರಿಭಾಷೆಯಲ್ಲೇ ನಡೆಯುತ್ತಿದ್ದವು. ಈ ಸಂದರ್ಭದಲ್ಲಿಯೇ ಇಂತಹ ಗಿಡಗಳಿಗೆ ಪಠ್ಯಪುಸ್ತಕದಲ್ಲಿ ಯಾವ ಹೆಸರಿದೆ ಎಂದು ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದರು. ಶಿಕ್ಷಕ ಕಲಿಕಾ ಕೇಂದ್ರ (ಟಿಎಲ್‍ಸಿ)ದಲ್ಲಿ ಚರ್ಚೆಗೆ ಬಂದ ವಿಚಾರಗಳು ಈ ರೀತಿಯ ತರಗತಿಗಳನ್ನು ನಡೆಸಿ ಕೊಡಲು ಸಹಕಾರಿಯಾಗಿದೆ ಎಂದವರು ನಂಬಿದ್ದಾರೆ. ಬೋಧನೆ ಎಂದರೆ ಕೇವಲ ಪಠ್ಯಕ್ರಮವನ್ನು ಪೂರ್ಣಗೊಳಿಸುವುದು ಮಾತ್ರವಲ್ಲ ಬದಲಾಗಿ ಕಲಿಕೆಯನ್ನು ಪರಿಪೂರ್ಣಗೊಳಿಸುವುದು ಎನ್ನುವುದು ರಾಮನ ಗೌಡರ ನಂಬಿಕೆ.

ನಿಜ, ಶಿಕ್ಷಕ ರಾಮನ ಗೌಡ ಹಾಕಿದ ಎಲ್ಲ ಶ್ರಮ ಫಲ ಕೊಡತೊಡಗಿದವು. ಅದು ಮಕ್ಕಳ ಕಲಿಕೆಯಲ್ಲಿ ಕಾಣತೊಡಗಿತ್ತು. ಶಿಕ್ಷಕನ ಶ್ರಮ ಮಕ್ಕಳ ಕಣ್ಣಲ್ಲಿ ಕಾಣು ಎಂಬುದಕ್ಕೆ ಇದು ಜೀವಂತ ಸಾಕ್ಷಿ. ಎರಡನೇ ತರಗತಿಯಲ್ಲಿ ಓದುವ ಮಗು ಕೂಡ ಕನ್ನಡದಲ್ಲಿ ಬರೆಯುವುದು ಮತ್ತು ಓದುವುದನ್ನು ಸಲೀಸಾಗಿ ಮಾಡತೊಡಗಿತು. ಇದು ಹಳ್ಳಿಖೇಡದ ಖಾಸಗಿ ಶಾಲೆಗಳ ಮಕ್ಕಳಿಗೂ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ಈ ಹಳ್ಳಿಯ ಒಂದೇ ಒಂದು ಮಗು ಖಾಸಗಿ ಶಾಲೆಯಲ್ಲಿ ನೋಂದಣಿ ಪಡೆದಿಲ್ಲ. ಖಾಸಗಿ ಶಾಲೆಗಳು ಪಾಲಕರನ್ನು ಸೆಳೆಯಲು ಎಲ್ಲ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇವೆ. ತೀರಾ ಕುಗ್ರಾಮಗಳಿಗೂ ತೆರಳಿ, ಮಕ್ಕಳನ್ನು ನಮ್ಮ ಶಾಲೆಗೆ ಕಳಿಸಿ, ಸಾರಿಗೆ ಶುಲ್ಕವೂ ಬೇಡ ಎನ್ನುತ್ತಿವೆ. ಆದರೆ ನೆಹರೂ ನಗರದಿಂದ ಒಂದೇ ಒಂದು ಮಗುವಿನ ನೋಂದಣಿ ಮಾಡಿಸಲು ಅವರಿಂದ ಸಾಧ್ಯವಾಗಿಲ್ಲ. ನಮ್ಮ ಶಾಲೆ ಅದ್ಭುತವಾಗಿ ನಡೆಯುವವರೆಗೆ ಈ ಊರಿನಿಂದ ಯಾವ ಮಗುವೂ ಖಾಸಗಿ ಶಾಲೆಗೆ ಸೇರುವುದಿಲ್ಲ ಎಂಬ ದೃಢವಾದ ವಿಶ್ವಾಸ ರಾಮನ ಗೌಡ ಅವರದ್ದು. ಖಾಸಗಿ ಶಾಲೆಗಳಿಂದಲೂ ಮಕ್ಕಳನ್ನು ಬಿಡಿಸಿ ನೆಹರೂ ನಗರದ ಈ ಶಾಲೆಯಲ್ಲಿ ನೋಂದಣಿ ಮಾಡಿಸುವ ಪರಿಪಾಠ ಬೆಳೆಯುತ್ತಿದೆ. ಹತ್ತಿರದ ಖೇಣಿ ಶಾಲೆಗೆ ಈ ಹಿಂದೆ ನೋಂದಣಿಯಾಗಿದ್ದ, ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮಗ ಸಿದ್ಧಾರ್ಥ ಈಗ ನೆಹರೂ ನಗರದ ಸರಕಾರಿ ಶಾಲೆಯ ವಿದ್ಯಾರ್ಥಿಯಾಗಿರುವುದೇ ಇದಕ್ಕೆ ಸಾಕ್ಷಿ. ಖೇಣಿ ಶಾಲೆಯಲ್ಲಿ ಮಗನ ಕಲಿಕೆ ಅಷ್ಟಕಷ್ಟೇ ಇತ್ತು, ಈ ಸರಕಾರಿ ಶಾಲೆಗೆ ಸೇರಿದಾಗಿನಿಂದ ಸಾಕಷ್ಟು ಸುಧಾರಣೆ ಕಂಡಿದೆ ಎನ್ನುತ್ತಾರೆ ಸಿದ್ಧಾರ್ಥನ ತಂದೆ.

ಪಠ್ಯದಿಂದ ಆಚೆಗೆ:

ಮಕ್ಕಳ ಕಲಿಕೆ ಕ್ಲಾಸ್‍ರೂಮ್‍ನಿಂದ ಆಚೆಗೂ ವಿಸ್ತರಿಸಬೇಕು. ಅಂತಹ ಕೆಲಸವನ್ನು ರಾಮನ ಗೌಡ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಮೊರಾರ್ಜಿ ದೇಸಾಯಿ ಮತ್ತು ನವೋದಯ ಶಾಲೆಗಳಲ್ಲಿ ಮುಂದಿನ ಶಿಕ್ಷಣದ ಅವಕಾಶಗಳಿರುವ ಬಗ್ಗೆ ಸಮುದಾಯದ ಜನರಲ್ಲಿ ಅರಿವು ಮೂಡಿದೆ. ಮಕ್ಕಳೂ ಇಂತಹ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಬರೆಯಲು ಸಿದ್ಧರಾಗುತ್ತಿದ್ದಾರೆ. ಈ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ವಿದ್ಯಾರ್ಥಿಗಳು ದಿನವೂ ಶಾಲೆಯಲ್ಲಿ ಒಂದು ಗಂಟೆ ಕಳೆಯುತ್ತಿದ್ದಾರೆ ಮತ್ತು ಅದಕ್ಕಾಗಿ ಅವರಿಗೆ ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರವೇಶ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಮಕ್ಕಳಲ್ಲಿ ವಿಶ್ವಾಸ ಮೂಡುತ್ತಿದೆ. ಇಂತಹ ತರಬೇತಿ, ಸಿದ್ಧತೆ ಮತ್ತು ಪರೀಕ್ಷೆಗಾಗಿ ಹುಮ್ನಾಬಾದ್ ಕೇಂದ್ರಕ್ಕೆ ಕರೆದೊಯ್ಯುವ ಎಲ್ಲ ಜವಾಬ್ದಾರಿಗಳನ್ನು ರಾಮನ ಗೌಡ ಅವರೇ ಹೊತ್ತಿರುವುದು ವಿಶೇಷ. 2013ರಲ್ಲಿ ಮೊರಾರ್ಜಿ ಶಾಲೆಯಲ್ಲಿ ಪ್ರವೇಶ ಪಡೆಯಲು 13 ಮಕ್ಕಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 11 ಮಂದಿಗೆ ಪ್ರವೇಶ ಸಿಕ್ಕಿದ್ದು ಅವರೆಲ್ಲರೂ ಈಗ ಡಿಎಡ್ ಮಾಡುತ್ತಿದ್ದಾರೆ. ಅಲ್ಲಿಂದೀಚೆ ಯಾರೂ ತಿರುಗಿ ನೋಡಿದ್ದೇ ಇಲ್ಲ. ನೆಹರು ನಗರದ ಸರಕಾರಿ ಶಾಲೆಯಲ್ಲಿ ಐದನೇ ತರಗತಿ ಪೂರ್ಣಗೊಳಿಸಿದ ಮಕ್ಕಳು ನಿರಂತರವಾಗಿ ನವೋದಯ ಅಥವಾ ಮೊರಾರ್ಜಿ ಶಾಲೆಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗುತ್ತಲೇ ಇದ್ದಾರೆ.

ಪ್ರಕರಣದ ಉಲ್ಲೇಖ:

ಐದನೇ ತರಗತಿ ವಿದ್ಯಾರ್ಥಿ ಸೋಮಶೇಖರ್‍ನ ತಂದೆ ಬಸವರಾಜ್. ಅವರ ಇನ್ನೂ ಇಬ್ಬರು ಮಕ್ಕಳು ಒಂದು ಮತ್ತು ಮೂರನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳು ಶಾಲೆಗೆ ಹೋಗಲು ಆಸಕ್ತರಾಗಿರುವುದು ಮತ್ತು ಸೋಮಶೇಖರ್‍ಗೆ ಇಂಗ್ಲಿಷ್ ಓದಲು ಮತ್ತು ಬರೆಯಲು ಸಾಧ್ಯವಾಗಿರುವುದು ಬಸವರಾಜ್‍ಗೆ ಇನ್ನಿಲ್ಲದ ಖುಷಿ. ಅವರ ಪ್ರಕಾರ ರಾಮನ ಗೌಡ ಅವರು ಮಾದರಿ ಶಿಕ್ಷಕ. ಶಿಕ್ಷಕರಾಗಿ ಅವರು ವಿದ್ಯಾರ್ಥಿಗಳ ಈಗಿನ ಅಗತ್ಯವೇನು ಮತ್ತು ಅವರ ಭವಿಷ್ಯ ಏನಾಗಬೇಕು ಎಂಬುದನ್ನೂ ಯೋಚಿಸುತ್ತಾರೆ. ಅವರ ಶ್ರಮದಿಂದಾಗಿಯೇ ಬಸವರಾಜ್ ಅವರ ಮಕ್ಕಳು ಮೊರಾರ್ಜಿ ಮತ್ತು ನವೋದಯ ಶಾಲೆಗಳಿಗೆ ಹೋಗುವ ಬಗ್ಗೆ ಮಾತನಾಡಲು ಆರಂಭಿಸಿದ್ದಾರೆ. ಮಕ್ಕಳು ಮತ್ತು ಸಮುದಾಯ ರಾಮನ ಗೌಡ ಅವರ ಕುರಿತು ಹೆಮ್ಮೆಯಿಂದ ಮಾತನಾಡತ್ತಾರೆ. ಇಂತಹ ಒಬ್ಬರು ಶಿಕ್ಷಕರು ಆ ಶಾಲೆಗೆ ಮಾತ್ರವಲ್ಲ, ಇಡೀ ಸಮುದಾಯಕ್ಕೆ ಆಶಾಕಿರಣ. ಅವರನ್ನು ಆ ಶಾಲೆಯಲ್ಲಿಯೇ ಉಳಿಸಿಕೊಳ್ಳಲು ಸಮುದಾಯ ಏನು ಬೇಕಾದರೂ ಮಾಡಲು ಸಿದ್ಧ ಎನ್ನುತ್ತಾರೆ ಬಸವರಾಜ್. ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಸಿಕ್ಕ ತಕ್ಷಣ ಅಲ್ಲಿನ ಇಡೀ ಸಮುದಾಯ ಎಚ್ಚೆತ್ತುಕೊಂಡು ಧರಣಿ ನಡೆಸಲು ಸಜ್ಜಾಗಿದೆ. ಆ ಶಿಕ್ಷಕರೇ ಈ ಶಾಲೆಯಿಂದ ತೆರಳುತ್ತೇನೆಂದು ಬಯಸುವವರೆಗೆ ನಮ್ಮ ಸಮುದಾಯ ಅವರನ್ನು ಹೋಗಲು ಬಿಡುವುದಿಲ್ಲ ಎನ್ನುವಾಗ ಬಸವರಾಜ್ ಅವರ ಕಣ್ಣುಗಳು ತೇವಗೊಂಡವು.

ಕ್ಲಾಸ್‍ರೂಮ್ ಕಲಿಕೆಯ ಆಚೆಗೂ ಮಾರ್ಗದರ್ಶನ:

ಮಕ್ಕಳ ಶೈಕ್ಷಣಿಕ ಬದುಕಿನ ಪಾಲಿಗೆ ಮುಖ್ಯ ಅಡಿಪಾಯವಾದ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳಬೇಕು ಎಂಬ ಬಗ್ಗೆ ಸಮುದಾಯದ ಜನರಲ್ಲಿ ಅರಿವು ಕಡಿಮೆ. ಬ್ಯಾಂಕ್ ಖಾತೆಗಳೇ ಇಲ್ಲದಿರುವುದು ಅವರ ಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಇದನ್ನು ಅರಿತ ರಾಮನ ಗೌಡ ಅವರು ವಿದ್ಯಾರ್ಥಿಗಳು ಬ್ಯಾಂಕ್‍ನಲ್ಲಿ ಹಣರಹಿತ ಖಾತೆಗಳನ್ನು ತೆರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈವರೆಗೆ ವಿದ್ಯಾರ್ಥಿಗಳು ಕೆನರಾ ಬ್ಯಾಂಕ್‍ನಲ್ಲಿ ನೂರಕ್ಕೂ ಹೆಚ್ಚು ಖಾತೆಗಳನ್ನು ತೆರೆದಿದ್ದು, ಇವೆಲ್ಲವೂ ರಾಮನ ಗೌಡ ಅವರ ವೈಯಕ್ತಿಕ ಮುತುವರ್ಜಿಯಿಂದ ಸಾಧ್ಯವಾಗಿದೆ. ಇನ್ನೊಂದು ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅನೇಕ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸರಿಸುಮಾರು 45000 ರೂ.ವನ್ನು ಪಡೆದುಕೊಳ್ಳಲು ಅವರು ತಮ್ಮದೇ ಪಾಕೆಟ್‍ನಿಂದ 700 ರೂ ಖರ್ಚು ಮಾಡಿದ್ದಾರೆ. ವಿದ್ಯಾರ್ಥಿ ವೇತನ ಮಕ್ಕಳ ಪಾಲಿಗೆ ಬಹುದೊಡ್ಡ ಮೊತ್ತವಾದ್ದರಿಂದ ಅವರಿಗೆ ಆ ಬಗ್ಗೆ ಚಿಂತೆ ಇಲ್ಲ. ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಲು ಪಾಲಕರು ಯಾವತ್ತೂ ಶಾಲೆಗೆ ಎಡತಾಕುತ್ತಿರುತ್ತಾರೆ. ಐದನೇ ತರಗತಿ ಮುಗಿಸಿದ ಬಳಿಕ ತಮ್ಮ ಮಕ್ಕಳಿಗೆ ಇರುವ ಶೈಕ್ಷಣಿಕ ಅವಕಾಶಗಳು ಯಾವುವು ಎಂದು ಅವರು ಶಿಕ್ಷಕರ ಜೊತೆ ಚರ್ಚೆ ನಡೆಸುತ್ತಾರೆ. ಈಗಂತೂ ರಾಮನ ಗೌಡ ಅವರು ಸಮುದಾಯದ ಪಾಲಿನ ಶೈಕ್ಷಣಿಕ ಮಾರ್ಗದರ್ಶಕರಾಗಿದ್ದಾರೆ. ಅವರ ಅನೇಕ ಹಳೆಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಹಂತವನ್ನು ತಲುಪಿದ್ದಾರೆ. ಆದರೆ ಈಗಲೂ ನಿರಂತರ ಮಾರ್ಗದರ್ಶನ ಪಡೆಯುತ್ತಿರುತ್ತಾರೆ. 2013ರ ಬ್ಯಾಚ್‍ನಲ್ಲಿ 11ರಿಂದ 12 ವಿದ್ಯಾರ್ಥಿಗಳು ಡಿಎಡ್ ಮಾಡುತ್ತಿದ್ದಾರೆ-ಅದಕ್ಕೆ ಶಿಕ್ಷಕ ರಾಮನ ಗೌಡ ಅವರ ಸಲಹೆಯೇ ಕಾರಣ.

ಒಮ್ಮೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಪರಿಶೀಲನೆಗಾಗಿ ಈ ಶಾಲೆಗೆ ಭೇಟಿ ನೀಡುದ್ದರು. ಆ ಸಂದರ್ಭದಲ್ಲಿ ರಾಮನ ಗೌಡ ಅವರು ಶಾಲೆಯಲ್ಲಿ ಇರಲಿಲ್ಲ. ಆದರೆ ಹಾಜರಾತಿ ಪುಸ್ತಕದಲ್ಲಿ ಅವರ ಸಹಿಯಿತ್ತು. ಅದಕ್ಕಾಗಿ ಅಧಿಕಾರಿ ಅವರಿಗೆ ಶೋಕಾಸ್ ನೋಟಿಸ್ ನೀಡಿದರು. ಆ ಹೊತ್ತಿನಲ್ಲಿ ರಾಮನ ಗೌಡರು ಪಟ್ಟಣದಲ್ಲಿದ್ದರು. ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವ ಕೆಲಸದಲ್ಲಿ ತಲ್ಲೀನರಾಗಿದ್ದರು. ವಿದ್ಯಾರ್ಥಿ ವೇತನ ನಿಯಮಿತವಾಗಿ ಬರಬೇಕಿದ್ದರೆ ಆ ಕೆಲಸವನ್ನು ಅವರು ಮಾಡಲೇಬೇಕಿತ್ತು.

ಇಲಾಖೆ ನೀಡಿದ ಶೋಕಾಸ್ ನೋಟಿಸ್‍ಗೆ ಉತ್ತರ ನೀಡುವ ಜವಾಬ್ದಾರಿಯನ್ನು ತೆಗೆದುಕೊಂಡವರು ಶಾಲೆಯ ಮುಖ್ಯ ಶಿಕ್ಷಕಿ. ನಾವೆಲ್ಲರೂ ಮಕ್ಕಳಿಗಾಗಿಯೇ ದುಡಿಯುತ್ತಿರುವುದರಿಂದ ಇದಕ್ಕೆ ವಿವರಣೆ ನೀಡುವ ಬಗ್ಗೆ ಚಿಂತಿಸಬೇಕಾದ ಅಗತ್ಯ ಎಂಬುದು ಅವರ ಸ್ಪಷ್ಟನೆ. ಈ ಶಾಲೆ ಮತ್ತು ಮಕ್ಕಳ ಪ್ರಯೋಜನಕ್ಕಾಗಿ ಕೈಗೊಳ್ಳುವ ಪ್ರತಿಯೊಂದು ಕೆಲಸಕ್ಕೂ ಉತ್ತೇಜನ ಮತ್ತು ಸ್ವಾತಂತ್ರ್ಯ ನೀಡುತ್ತಿರುವ ಮುಖ್ಯ ಶಿಕ್ಷಕರನ್ನು ರಾಮನ ಗೌಡ ಅವರು ಕೃತಜ್ಞತೆಯಿಂದ ನೆನೆಯುತ್ತಾರೆ.

ಶಾಲಾ ಸಹಕಾರಿ ಅಂಗಡಿ ಹಾಗು ಸಹಕಾರಿ ಬ್ಯಾಂಕ್:

ಶಾಲೆಯಲ್ಲಿ ಮಕ್ಕಳು ಸಹಕಾರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೇಕಾದ ಬಹುತೇಕ ಎಲ್ಲ ಲೇಖನ ಸಾಮಗ್ರಿಗಳು ಈ ಅಂಗಡಿಯಲ್ಲಿ ಲಭ್ಯ. ಇಲ್ಲಿ ಮಾರಾಟ ಮಾಡುವ ವಸ್ತುಗಳ ಪಟ್ಟಿಯನ್ನು ತೂಗುಹಾಕಲಾಗಿದೆ. ಶಾಲಾ ಅವಧಿಯಲ್ಲಿ ಈ ಅಂಗಡಿ ತೆರೆದಿರುತ್ತದೆ. ಅಂಗಡಿಗೆ ತಂದಿರುವ ಮತ್ತು ಮಾರಾಟ ಮಾಡಿರುವ ವಸ್ತುಗಳ ಪಕ್ಕಾ ದಾಖಲೆಯೂ ಇಲ್ಲಿರುತ್ತದೆ. ಈ ಲೇಖನ ಸಾಮಗ್ರಿಗಳನ್ನು ಹೊಂದಿರುವ ಕಪ್‍ಬೋರ್ಡ್‍ನ್ನು ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ಇಡಲಾಗಿದೆ. ವಿದ್ಯಾರ್ಥಿಗಳು ಮುಕ್ತವಾಗಿ ಇಲ್ಲಿಗೆ ತೆರಳಿ ತಮಗೆ ಬೇಕಾದದ್ದನ್ನು ಖರೀದಿ ಮಾಡಬಹುದಾಗಿದೆ. ಸದ್ಯ ಈ ಅಂಗಡಿಯ ಉಸ್ತುವಾರಿ ಹೊತ್ತಿರುವ ವಿದ್ಯಾರ್ಥಿ ಸಿದ್ಧಾರ್ಥ.

(ಚಿತ್ರ 3 – 4: ಸಹಕಾರಿ ಅಂಗಡಿಯ ಲೇಖನ ಸಾಮಗ್ರಿಗಳು ಮತ್ತು ಬೆಲೆಪಟ್ಟಿ)

ಶಾಲೆಯಲ್ಲೊಂದು ಸಹಕಾರಿ ಬ್ಯಾಂಕ್ ಕೂಡ ಇದೆ. ಬ್ಯಾಂಕಿನ ದಿನನಿತ್ಯದ ವ್ಯವಹಾರವನ್ನು ನಿರ್ವಹಿಸುವವರು ವಿದ್ಯಾರ್ಥಿಗಳೇ. ಅವರೇ ಪ್ರತಿದಿನ ಶಿಕ್ಷಕರಿಗೆ ವಿವರ ನೀಡುತ್ತಾರೆ. ಮಕ್ಕಳೇ ಈ ಬ್ಯಾಂಕ್ ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಹಣಕಾಸು ವ್ಯವಹಾರದ ಅರಿವು ಪಕ್ವವಾಗುತ್ತಾ ಹೋಗುತ್ತದೆ ಎಂಬುದು ರಾಮನ ಗೌಡ ಅವರ ನಂಬಿಕೆ. ಹಣ ಉಳಿತಾಯದ ಮೌಲ್ಯವನ್ನು ಹೇಳುವುದರ ಜೊತೆಗೆ ನಮ್ಮ ದಿನನಿತ್ಯದ ಬದುಕಿನಲ್ಲಿ ಹಣವನ್ನು ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಲು ಶಾಲೆ ಕೈಗೊಂಡಿರುವ ಇಂತಹ ಕ್ರಮಗಳು ದಾರಿದೀಪವಾಗುತ್ತವೆ. ಕಾರಣ ನೀಡದೇ ಗೈರುಹಾಜರಾದರೆ ಒಂದು ರೂಪಾಯಿ ದಂಡ ವಿಧಿಸಲಾಗುತ್ತದೆ. ದಂಡದ ಹಣ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಸದ್ಯ ಬ್ಯಾಂಕ್‍ನಲ್ಲಿರುವ ಠೇವಣಿ 8000 ರೂ.

ಚಿತ್ರ‑5 – 6: ಬ್ಯಾಂಕ್ ಪಾಸ್ ಪುಸ್ತಕ.

ಚಿತ್ರ‑7 – 8: ಠೇವಣಿ ವಿವರಗಳನ್ನು ಹೊಂದಿರುವ ಬ್ಯಾಂಕ್ ಖಾತೆಗಳು.

ಹಳೆಯ ವಿದ್ಯಾರ್ಥಿಗಳ ಸಂಘ:

ಶಾಲೆಯಲ್ಲೊಂದು ಹಳೆ ವಿದ್ಯಾರ್ಥಿಗಳ ಸಂಘವೂ ಸಕ್ರಿಯವಾಗಿದೆ. ಈ ಸಂಘದ ಭಾಗವಾಗಿರುವ ವಿದ್ಯಾರ್ಥಿಗಳ ಮೊದಲ ತಂಡ ಈಗ ನಾನಾ ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿದೆ. ಹಳೆಯ ವಿದ್ಯಾರ್ಥಿಗಳು ಮತ್ತು ಈಗಿನ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ಏರ್ಪಡಿಸಲಾಗುತ್ತದೆ. ಹಳೆಯ ವಿದ್ಯಾರ್ಥಿಗಳು ತಮ್ಮ ಉನ್ನತ ಅಧ್ಯಯನದ ಬಗ್ಗೆ ಅನುಭವ ಹಂಚಿಕೊಳ್ಳುತ್ತಾರೆ. ಮೊರಾರ್ಜಿ ಮತ್ತು ನವೋದಯ ಶಾಲೆಯ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಸಮಾಲೋಚನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಚಿತ್ರ‑9: ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು

ಶಿಕ್ಷಕರ ದೂರದೃಷ್ಟಿ:

ಒಂದು ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯ ಎಂಬುದು ರಾಮನ ಗೌಡ ಅವರ ನಂಬಿಕೆ. ಶಿಕ್ಷಕನೊಬ್ಬ ಎಲ್ಲರನ್ನೂ ಒಳಗೊಳ್ಳುವ ಭಾವನೆಯನ್ನು ಹೊಂದಿದಾಗಲೇ ಎಲ್ಲರಿಗಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದು ಕೇವಲ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಯ ವೈಯಕ್ತಿಕ ಅಗತ್ಯಗಳಿಗೆ ಸ್ಪಂದಿಸುವುದೂ ಆಗಿದೆ. ವಿದ್ಯಾರ್ಥಿಗಳ ಸಾಮರ್ಥ್ಯದಲ್ಲಿ ಗೌಡರಿಗೆ ಯಾವತ್ತೂ ನಂಬಿಕೆ. ಹಾಗಾಗಿ ಅವರು ವಿದ್ಯಾರ್ಥಿಗಳೇ ಮಾಡುವ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೇ ಜವಾಬ್ದಾರಿ ನೀಡಿದರೆ ಅತ್ಯಂತ ಸಕ್ರಿಯವಾಗಿ ಅವರು ಆ ಕೆಲಸದಲ್ಲಿ ತೊಡಗಿಕೊಂಡು ನಿರೀಕ್ಷಿತ ಫಲಿತಾಂಶವನ್ನು ಕೊಡುತ್ತಾರೆ. ಯಾವುದೇ ರೀತಿಯ ಶಿಕ್ಷಣವಾಗಿದ್ದರೂ ಅದರ ಗುರಿ ಏನಾಗಿರಬೇಕು ಎಂಬುದರ ವಿಶ್ವಾಸ ಅವರಲ್ಲಿ ಬಲವಾಗಿದೆ. ಒಂದು ಚಿಕ್ಕ ಹಳ್ಳಿಯ ಶಾಲೆಯಲ್ಲಿಯೂ ಇದು ಸಾಧ್ಯವಾಗಿದೆ ಎನ್ನುವುದಾದರೆ ಅದಕ್ಕಿಂತ ಖುಷಿಯ ವಿಚಾರ ಇನ್ನೊಂದಿಲ್ಲ. ವಿದ್ಯಾರ್ಥಿಗಳ ಬಗ್ಗೆ ರಾಮನ ಗೌಡರಿಗೆ ಇರುವ ಪ್ರೀತಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಾಲೆ ಮತ್ತು ವಿದ್ಯಾರ್ಥಿಗಳಿಗಾಗಿ ದುಡಿಯಬೇಕು ಎಂದು ಹೊರಟುಬಿಟ್ಟರೆ ಹಗಲು, ರಾತ್ರಿ, ವಾರ, ತಿಥಿಗಳು ಅವರಿಗೆ ಲೆಕ್ಕಕ್ಕಿಲ್ಲ. ಶಾಲೆ ವiತ್ತು ಮಕ್ಕಳ ಬಗ್ಗೆ ಅವರಿಗಿರುವ ನಿಸ್ವಾರ್ಥ ಭಾವನೆಯನ್ನು ವಿದ್ಯಾರ್ಥಿಗಳು ಯಾವತ್ತೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಧಿಕೃತ ಕೆಲಸಗಳಿಗೆಂದು ಅವರು ಶಾಲೆಯಿಂದ ಹೊರಗೆ ಹೋದರೆ, ಮತ್ತೆ ಮತ್ತೆ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರ ಬಳಿಗೆ ಹೋಗಿ ರಾಮನ ಟೀಚರ್ ಯಾವಾಗ ಬರುತ್ತಾರೆ’ ಎಂದು ಕಾಡುತ್ತಲೇ ಇರುತ್ತಾರೆ. ರಜಾ ದಿನಗಳಲ್ಲೂ ಮಕ್ಕಳು ಶಾಲೆಗೆ ಬರುತ್ತಿರುತ್ತಾರೆ; ಅದಕ್ಕೆ ರಾಮನ ಸರ್ ಶಾಲೆಯಲ್ಲಿ ಇರುತ್ತಾರೆ ಎಂಬುದೊಂದೇ ಕಾರಣ.

ಶಾಲೆಗಾಗಿ ತಾವು ಮಾಡುತ್ತಿರುವ ಕೆಲಸ ಇನ್ನೂ ಮುಗಿದಿಲ್ಲ ಎಂಬುದು ರಾಮನ ಗೌಡ ಅವರ ಅನಿಸಿಕೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ತರಕಾರಿಗಳನ್ನು ಒದಗಿಸುವುದರಲ್ಲಿ ಶಾಲೆ ಇನ್ನೂ ಸ್ವಾವಲಂಬಿಯಾಗಿಲ್ಲ ಎಂಬ ಕೊರಗು ಅವರಿಗಿದೆ. ಸದ್ಯ ತರಕಾರಿ ಕೊಳ್ಳಲಿಕ್ಕೆಂದೇ ದಿನಕ್ಕೆ 55 ರೂ. ಸಿಗುತ್ತದೆ. ಆದರೆ ನಿಜವಾದ ಖರ್ಚು 75 ರೂ. ಕೆಲ ಕುಟುಂಬಗಳು ಬೇಳೆ ಮತ್ತು ತರಕಾರಿಗಳನ್ನು ತಂದು ಕೊಡುತ್ತಾರೆ. ನಾವೇ ಕೆಲವು ತರಕಾರಿಗಳನ್ನು ಬೆಳೆಯುವಂತಾದರೆ ಖರ್ಚು ಇನ್ನಷ್ಟು ಕಡಿಮೆಯಾಗುತ್ತದೆ ಎಂಬುದು ಅವರ ಯೋಚನೆ.

ತಮ್ಮ ಶಾಲೆಯ ಮಕ್ಕಳು ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಜ್ಞಾನವನ್ನೂ ಪಡೆಯುವಂತಾಗಬೇಕು. ಇದರಿಂದ ಅವರಿಗೆ ಹೊಸ ಜಗತ್ತಿನ ಅನುಭವವಾದಂತಾಗುತ್ತದೆ ಎಂಬುದು ರಾಮನ ಗೌಡ ಅವರ ನಂಬಿಕೆ. ಅದಕ್ಕಾಗಿ ಶಾಲೆಯಲ್ಲೊಂದು ಕಂಪ್ಯೂಟರ್ ಲ್ಯಾಬ್ ತೆರೆಯಬೇಕು ಎಂಬ ಕನಸು ಅವರದ್ದು. ಇದಕ್ಕಾಗಿ ಶಾಲೆಯಲ್ಲೊಂದು ಜಾಗವನ್ನೂ ಗುರುತಿಸಿದ್ದಾರೆ. ತಮ್ಮ ಕನಸು ಪೂರ್ಣಗೊಳ್ಳಲು ಹಣಕಾಸಿನ ಸಹಾಯ ನೀಡುವ ದಾನಿಗಳ ಹುಡುಕಾಟವನ್ನಾಗಲೇ ಆರಂಭಿಸಿದ್ದಾರೆ. ಇದರ ಜೊತೆಗೆ ಗ್ರಂಥಾಲಯ ಮತ್ತು ಪ್ರಯೋಗಾಲಯ ಸೌಲಭ್ಯಗಳಿಗಾಗಿಯೂ ಅವರು ಎದುರು ನೋಡುತ್ತಿದ್ದಾರೆ. ಇಂತಹ ಸೌಲಭ್ಯಗಳ ಕೊರತೆಯ ನಡುವೆ ಬೋಧನೆ ಮತ್ತು ಕಲಿಕೆಯಲ್ಲಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದು ಅವರ ಇರಾದೆ. ಇಷ್ಟಿದ್ದೂ ಮಕ್ಕಳಿನ್ನೂ ನೆಲದ ಮೇಲೇ ಕುಳಿತು ಕಲಿಯುತ್ತಿದ್ದಾರೆ, ಅವರಿಗೆಲ್ಲ ಚಾಪೆಗಳನ್ನು ಒದಗಿಸುವ ಯೋಚನೆಯೂ ಅವರಿಗಿದೆ.

ಇತ್ತೀಚಿನ ದಿನಗಳಲ್ಲಿ ಅಜೀಮ್ ಪ್ರೇಮ್‍ಜಿ ಪ್ರತಿಷ್ಠಾನ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ತಮ್ಮ ವೃತ್ತಿಪರ ಅಭಿವೃದ್ಧಿಗೆ ನೆರವಾಗಿದೆ ಎಂದು ರಾಮನ ಗೌಡ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಪ್ರತಿಷ್ಠಾನ ಕೈಗೊಂಡಿರುವ ಅನೇಕ ಉಪಕ್ರಮಗಳನ್ನು ಶ್ಲಾಘಿಸಲು ಅವರು ಮರೆಯುವುದಿಲ್ಲ. ರಾಜ್ಯದ ಹೊರಗೂ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಲು ಅವಕಾಶ ದೊರೆತಿರುವುದು ಮತ್ತು ನಾನಾ ಭಾಗಗಳಿಂದ ವಿವಿಧ ಕ್ಷೇತ್ರಗಳ ಜನ ಶಾಲೆಗೆ ಭೇಟಿ ಕೊಡುತ್ತಿರುವುದು ತಮ್ಮ ಮೇಲೆ ಪೂರಕವಾದ ಪರಿಣಾಮ ಬೀರಿದೆ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಾರೆ. ಶಿಕ್ಷಣ ಇಲಾಖೆಯ ಮಾನ್ಯತೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ’ ಕೂಡ ಅವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಚಿತ್ರ‑10: ಶಾಲೆಗೆ ಬಂದಿರುವ ಪ್ರಶಂಸನಾ ಮತ್ತು ಪ್ರಮಾಣಪತ್ರಗಳ ಸಂಗ್ರಹ

ಉಪಸಂಹಾರ:

ಕಳೆದ ಅನೇಕ ವರ್ಷಗಳ ಕಾಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅತ್ಯಂತ ಮುತುವರ್ಜಿಯಿಂದ ನಿರ್ವಹಣೆ ಮಾಡಿಕೊಂಡು ಬಂದಿರುವ ಶಾಲೆಯ ಚೆಂದದ ಕ್ಯಾಂಪಸ್‍ಗೆ ಹಸಿರು ಶಾಲಾ ಪ್ರಶಸ್ತಿ’ ದೊರಕಿದೆ. ತಮ್ಮ ಕನಸಿನ ಶಾಲೆಯ ಬಗ್ಗೆ ಲೇಖನ ಬರೆದಾಗ ಆ ಯೋಚನೆ ಇನ್ನೂ ಅಸ್ಪಷ್ಟವಾಗಿತ್ತು. ತಮ್ಮ ಕನಸು ಸಾಕಾರಗೊಳ್ಳುವುದು ಅವರಿಗೆ ಖಚಿತವಾಗಿರಲಿಲ್ಲ. ಶಿಕ್ಷಕ ವೃತ್ತಿ ಜೀವನದಲ್ಲಿ ಇನ್ನೇನು ದಶಕ ಪೂರೈಸುತ್ತಿರುವ ಈ ಹೊತ್ತಿನಲ್ಲಿ ಹಿಂದಿರುಗಿ ನೋಡಿದಾಗ ಇಷ್ಟು ಬೇಗ ಇವೆಲ್ಲವೂ ನಿಜವಾಯಿತೇ ಎಂದು ಅಚ್ಚರಿಯಾಗುತ್ತಿದೆ ಎನ್ನುತ್ತಾರೆ ರಾಮನ ಗೌಡ. ಆದರೆ ತಾನು ಕಂಡ ಕನಸಿಗಿಂತ ಹೆಚ್ಚೇ ಕೆಲಸ ಮಾಡಿರುವ ಬಗ್ಗೆ ಅವರಲ್ಲಿ ಹೆಮ್ಮೆ ಇದೆ. ಈಗ ಅವರಿಗೆ ತಮ್ಮ ಶಾಲೆಯ ಬಗ್ಗೆ ಇನ್ನೊಂದು ಕನಸಿದೆ; ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಶಾಲೆ ತಮ್ಮದಾಗಬೇಕು ಎಂಬುದು. ತಮ್ಮ ವೃತ್ತಿಪರ ಜೀವನದ ಅತ್ಯಂತ ತೃಪ್ತಿಯ ಕ್ಷಣವನ್ನು ಅವರು ಹೆಮ್ಮೆಯಿಂದ ನೆನಪು ಮಾಡಿಕೊಳ್ಳುತ್ತಾರೆ; ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಮೂರು ಪ್ರಸಿದ್ಧ ಖಾಸಗಿ ಶಾಲೆಗಳನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳು ಸೋಲಿಸಿದ ಅಪರೂಪದ ಕ್ಷಣವದು. ಸ್ಪರ್ಧೆಯಲ್ಲಿ ಜಯ ಗಳಿಸಿದ ತಕ್ಷಣ ನುಗ್ಗಿ ಬಂದ ಮಕ್ಕಳು ತಮ್ಮನ್ನು ತಬ್ಬಿಕೊಂಡು ಇನ್ನಿಲ್ಲದ ಖುಷಿಯಲ್ಲಿ ಬೀಗಿದರು ಎನ್ನುವಾಗ ರಾಮನ ಗೌಡರ ಕಣ್ಣಿನಲ್ಲಿ ಆನಂದಭಾಷ್ಪ. ಈವರೆಗೆ ತಾವು ನಡೆದುಬಂದ ದಾರಿಯ ಬಗ್ಗೆ ಅವರಲ್ಲಿ ತೃಪ್ತಿಯಿದೆ. ಆದರೆ ಸಾಗಬೇಕಾದ ದಾರಿ ಇನ್ನೂ ಸಾಕಷ್ಟು ದೂರವಿದೆ ಎಂಬ ಅರಿವೂ ಅವರಿಗಿದೆ.

ಸರಕಾರಿ ಶಾಲೆಗಳ ಮೂಲಕ ಉತ್ತಮ ಶಿಕ್ಷಣವನ್ನು ಒದಗಿಸಿ ಸಮುದಾಯಗಳ ಶೈಕ್ಷಣಿಕ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಿದೆ ಎಂಬುದನ್ನು ನೆಹರೂ ನಗರದ ಈ ಶಾಲೆ ತೋರಿಸಿಕೊಟ್ಟಿದೆ. ಶಾಲೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಖಾಸಗಿ ಶಾಲೆಗಳು ಒಡ್ಡುತ್ತಿರುವ ಸ್ಪರ್ಧೆಯನ್ನು ಮೀರಿ ಬೆಳೆಯುವುದು ಕಷ್ಟಸಾಧ್ಯವೇನೂ ಅಲ್ಲ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಎತ್ತಿ ಹಿಡಿಯುವ ಮೂಲಕ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕರೆತರಲು ಸಾಧ್ಯವಿದೆ. ಇಲ್ಲದೇ ಹೋದರೆ ಅವರು ಮತ್ತೆ ಖಾಸಗಿ ಶಾಲೆಗಳ ಪಾಲಾಗುತ್ತಾರೆ. ಶಾಲೆಗಳು ಯಾವತ್ತೂ ಸಮುದಾಯಗಳ ಜೊತೆ ನಿಕಟವಾಗಿದ್ದು ಕೆಲಸ ಮಾಡಬೇಕಾಗುತ್ತದೆ. ಅದರ ಜೊತೆಗೆ ಸಮುದಾಯಗಳು ಕೂಡ ತಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸಿಕ್ಕ ಅವಕಾಶಗಳನ್ನು ಗೌರವಿಸಬೇಕು.

ಕೃತಜ್ಞತೆ:

ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೇ ತಮ್ಮ ವೃತ್ತಿಪರ ಜೀವನದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡ ರಾಮನ ಗೌಡ ಅವರಿಗೆ ನಮ್ಮ ವಿನಮ್ರ ಕೃತಜ್ಞತೆಗಳು. ತಮ್ಮ ಅಮೂಲ್ಯ ಸಮಯದ ಜೊತೆಗೆ ಅನುಭವಗಳನ್ನು ಹಂಚಿಕೊಂಡ ಮುಖ್ಯಶಿಕ್ಷಕಿ ಶ್ರೀಮತಿ ಅನುರಾಧಾರವರಿಗೂ ಧನ್ಯವಾದಗಳು. ಈ ಸಂದರ್ಭದಲ್ಲಿ ಶಾಲೆಗೆ ಭೇಟಿ ನೀಡಿ ತಮ್ಮ ಅನುಭವ ಮತ್ತು ಚಿಂತನೆಗಳನ್ನು ಹಂಚಿಕೊಂಡ ಸಮುದಾಯದ ಸದಸ್ಯರಿಗೂ ನಮ್ಮ ಹೃದಯಪೂರ್ವಕ ಕೃತಜ್ಞತೆ. ಇಂತಹುದೊಂದು ಶಾಲೆಯನ್ನು ಗುರುತಿಸಿ ಶಿಕ್ಷಕರ ಬಗ್ಗೆ ವಿವರಿಸುವುದು ಮಾತ್ರವಲ್ಲದೆ ನೆಹರು ನಗರಕ್ಕೆ ಭೇಟಿ ನೀಡಲು ಎಲ್ಲ ವ್ಯವಸ್ಥೆಗಳನ್ನು ಮಾಡಿದ ಅಜೀಮ್ ಪ್ರೇಮ್‍ಜಿ ಪ್ರತಿಷ್ಠಾನದ ಬೀದರ್ ಜಿಲ್ಲಾ ಘಟಕಕ್ಕೆ ನಮ್ಮ ಧನ್ಯವಾದ ಸಲ್ಲಿಕೆ.

ಲೇಖಕರು:

ಶರದ್ ಸುರೆ, ಅಧ್ಯಾಪಕರು, ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯ

ಶಿವುಕುಮಾರ್ ಸಿಎಂ: ಬೀದರ್ ಜಿಲ್ಲೆಯ ಅಜೀಮ್ ಪ್ರೇಮ್‍ಜಿ ಪ್ರತಿಷ್ಠಾನದ ಜಿಲ್ಲಾ ಸಂಚಾಲಕರು. ಅವರು ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿ. ಗುಲ್ಬರ್ಗ ಜಿಲ್ಲೆಯವರಾದ ಶಿವಕುಮಾರ್ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ ಭಾಷೆ) ಮತ್ತು ಬಿಎಡ್ ಪದವಿಗಳನ್ನು ಪಡೆದಿದ್ದು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪಡೆದಿದ್ದಾರೆ. ಪ್ರತಿಷ್ಠಾನವನ್ನು ಸೇರುವುದಕ್ಕೂ ಮುನ್ನ ಅವರು ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಮೈರಾಡಾ ಸೊಸೈಟಿ ಮತ್ತು ಯೂನಿಸೆಫ್‍ನ ಅಡಿಯಲ್ಲಿ ಬಾಲ ಕಾರ್ಮಿಕರು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.