ಭಾರತೀಯ ಪೌರ ಶಿಕ್ಷಣದಲ್ಲಿ ಹಳೆಯ ಮತ್ತು ಹೊಸ ಸಂದಿಗ್ಧತೆಗಳು

ಭಾರತೀಯ ಪೌರ ಶಿಕ್ಷಣದಲ್ಲಿ ಹಳೆಯ ಮತ್ತು ಹೊಸ ಸಂದಿಗ್ಧತೆಗಳ ಬಗ್ಗೆ ಜೆ. ಎಸ್‌. ಸದಾನಂದ ಮತ್ತು ಎಸ್‌. ಶಿವಕುಮಾರ್‌ ಅವರೊಂದಿಗೆ ಸಿ. ಎಸ್‌. ಮಹೇಶ್‌ಕುಮಾರ್‌ ಅವರು ಸಂವಾದ ನಡೆಸಲಿದ್ದಾರೆ.

27 June 2023 Kannada Webinar LN

ಶಾಲೆ ಮತ್ತು ಪ್ರಭುತ್ವಗಳು ವಿಶಾಲ ಸಮಾಜದ ಎರಡು ಅಂಗಗಳಾಗಿದ್ದರೂ, ಸಮಾಜದ ಆಗುಹೋಗುಗಳ ಮೇಲೆ ಅವುಗಳ ಪ್ರಭಾವ ಗಾಢವಾಗಿಯೇ ಇರುತ್ತದೆ. ವಸಹಾತುಶಾಹಿ ಮೌಲ್ಯಗಳಿಂದ ಪ್ರೇರಿತವಾದ ಆಧುನಿಕ ಭಾರತೀಯ ಪ್ರಭುತ್ವಗಳು ಮತ್ತು ತನ್ನದೇ ಆಳವಾದ ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಮಾಜದ ಮುಖಾಮುಖಿಯು ಅನೇಕ ರೀತಿಯ ಸಂದಿಗ್ದತೆಗಳನ್ನು ಹುಟ್ಟುಹಾಕುತ್ತಿರುವುದು ಸಹಜವೇ ಆಗಿದೆ. ಇಂತಹ ಸಂದಿಗ್ದತೆಗಳ ಮೂಲವು ಪ್ರಭುತ್ವ ಮತ್ತು ಸಮಾಜದ ಮೌಲ್ಯಗಳಲ್ಲಿನ ಭಿನ್ನತೆಯಲ್ಲಡಗಿದೆ. ಪ್ರಭುತ್ವವು ತನಗೆ ಬೇಕಾದ ರೀತಿಯ ಪೌರರನ್ನು ರೂಪಿಸಲು ಶಾಲೆಯನ್ನು ತನ್ನ ಸಾಮಾಜೀಕರಣದ ಸಾಧನವಾಗಿ ಬಳಸಿಕೊಂಡರೆ, ಸಾಮಾಜಿಕ ಮೌಲ್ಯಗಳು ಇದಕ್ಕೆ ಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿವೆ. 

ಇದು ಪಠ್ಯ ಪುಸ್ತಕ ರಚನೆ, ಮರು ರಚನೆಯಂತಹ ಸಂದರ್ಭಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಪೌರ ನೀತಿ ಶಿಕ್ಷಣ ಹೇಗಿದೆ ಮತ್ತು ಹೇಗಿರಬೇಕು? ಸಾಮಾಜಿಕ ಮೌಲ್ಯಗಳು ಮತ್ತು ಪ್ರಭುತ್ವದ ಮೌಲ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವೇ? ಇದರಲ್ಲಿ ಶಾಲಾ ಶಿಕ್ಷಣದ ಪಾತ್ರವೇನು ಈ ವಿಚಾರಗಳ ಮೇಲೆ ಸಾಕಷ್ಟು ಚಿಂತನ‑ಮಂಥನವಾಗಬೇಕಿದ್ದು ಇದರ ಭಾಗವಾಗಿ ಈ ವೆಬಿನಾರ್ ಅನ್ನು ಆಯೋಜಿಸಲಾಗಿದೆ.

ಲೇಖನವನ್ನು ಓದಲು ಈ ಲಿಂಕ್ https://​bit​.ly/​3​p​byiGp ನ್ನು ಬಳಸಿ.

ವೆಬಿನಾರ್‌ಗೆ ಸೇರಲು ಕೆಳಗೆ ಕ್ಲಿಕ್ ಮಾಡಿ

ಸಂಪನ್ಮೂಲ ವ್ಯಕ್ತಿಗಳ ಬಗ್ಗೆ

ಜೆ. ಎಸ್‌. ಸದಾನಂದರವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ರಾಜ್ಯ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ರಾಜ್ಯ ಶಾಸ್ತ್ರ ಮತ್ತು ಸಮಾಜ ವಿಜ್ಞಾನಗಳ ನಿರ್ವವಸಾಹತುಕರಣ ವಿಷಯಗಳಲ್ಲಿ ಆಸಕ್ತಿ ಇರುವ ಇವರು ಹುಡುಕಾಟವನ್ನು ನಿಲ್ಲಿಸದಿರೋಣ’, ಭಾರತೀಯ ಸಂಸತ್ತು ಮತ್ತು ಪ್ರಜಾಪ್ರಭುತ್ವ’ ಪುಸ್ತಕಗಳ ಅನುವಾದವೂ ಸೇರಿದಂತೆ ಹತ್ತು ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.

ಎಸ್‌. ಶಿವಕುಮಾರ್‌ ಅವರು ಕೊರಟಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಂಯೋಕಜರಾಗಿ ಸೇವೆ ಸಲ್ಲಿಸಿರುವ ಇವರು ಶಿಕ್ಷಣ ಇಲಾಖೆ ಕೈಗೊಳ್ಳುವ ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸಿ. ಎಸ್‌. ಮಹೇಶ್‌ಕುಮಾರ್‌ ಅವರು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ಅನುವಾದ ಉಪಕ್ರಮ ತಂಡದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಭಾರತೀಯ ಸಂಸ್ಕೃತಿ, ಇಸ್ಲಾಂ, ಮಾತೃಭಾಷೆಗಳಲ್ಲಿ ಸಮಾಜವಿಜ್ಞಾನಗಳ ಸ್ವರೂಪದ ಬಗೆಗೆ ಸಂಶೋಧನೆ ನಡೆಸಿ ಎರಡು ಪುಸ್ತಕಗಳನ್ನು ಮತ್ತು ಹಲವು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ಅನುವಾದ ಸಂಪದ