ಆರಂಭಿಕ ಬಾಲ್ಯ ಶಿಕ್ಷಣ (ECE) | ವಿಚಾರ ಸಂಕಿರಣದ ಪರಿಕಲ್ಪನಾ ಟಿಪ್ಪಣಿ

ವಿಚಾರ ಸಂಕಿರಣದ ಎಲ್ಲ ಪ್ರಕ್ರಿಯೆಗಳು ಕನ್ನಡದಲ್ಲಿಯೇ ಇರುತ್ತದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಕನ್ನಡದಲ್ಲಿಯೇ ಸಂಶೋಧನಾ ಲೇಖನವನ್ನು ಸಲ್ಲಿಸಬೇಕು ಹಾಗೂ ವಿಚಾರ ಮಂಡಿಸಬೇಕು.

Early childhood

ಮಗುವಿನ ಮೆದುಳಿನ ಬೆಳವಣಿಗೆಯು ಅದರ ಜನನಕ್ಕೂ ಮೊದಲೇ ಆರಂಭವಾಗುತ್ತದೆ. ಈ ಸಮಯದಲ್ಲಿ, ಮೆದುಳಿನ ಜೀವಕೋಶಗಳು ಶೀಘ್ರಗತಿಯಲ್ಲಿ ಉತ್ಪತ್ತಿಯಾಗುತ್ತವೆ ಮತ್ತು ಹೊಸ ಸಂಪರ್ಕಗಳ ಬೆಳವಣಿಗೆಯಾಗಲು ಪ್ರಾರಂಭವಾಗುತ್ತದೆ. ಜನನದ ನಂತರದ ಮೊದಲ ಕೆಲವು ವರ್ಷಗಳಲ್ಲಿ ಮೆದುಳಿನಲ್ಲಿ ನರತಂತುಗಳ ಸಂಪರ್ಕಗಳು ಹೆಚ್ಚಿನ ವೇಗದಿಂದ ಉಂಟಾಗುತ್ತವೆ.

ಯಾವ ನರತಂತುಗಳ ಸಂಪರ್ಕಗಳು ಮುಂದಕ್ಕೆ ಉಳಿದುಕೊಳ್ಳುತ್ತವೆ ಎಂಬುದನ್ನು ಮಗುವಿನ ಪರಿಸರ ಮತ್ತು ಅದರ ದೈನಂದಿನ ಅನುಭವಗಳು ನಿರ್ಧರಿಸುತ್ತವೆ. ಪರಸ್ಪರ ಅಂತರ್ ಕ್ರಿಯೆಗಳಲ್ಲಿ ಹುದುಗಿರುವ ಮಗುವಿನ ಸ್ವಾಭಾವಿಕವಾದ ಆಲೋಚನಾ ವಿಧಾನಗಳನ್ನು ಬೆಂಬಲಿಸುವ ಪರಿಸರವು ಮೆದುಳಿನ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಗುಣಮಟ್ಟದ ಬಾಲ್ಯ ಆರೈಕೆ ಮತ್ತು ಶಿಕ್ಷಣದ (Early Childhood Care and Education- ECCE) ಅನುಭವಗಳು ಮಕ್ಕಳಿಗೆ ಈ ರೀತಿಯ ಸಕ್ರಿಯ ವಾತಾವರಣ ಒದಗಿಸುತ್ತವೆ ಮತ್ತು ಅವರ ಸಂಜ್ಞಾನಾತ್ಮಕ ಸಾಮಥ್ರ್ಯ, ಸಾಮಾಜಿಕ‑ಭಾವನಾತ್ಮಕ ಮತ್ತು ದೈಹಿಕ ಆರೋಗ್ಯಗಳಿಗೆ ಬೆಂಬಲ ನೀಡುತ್ತವೆ. 

ಭಾರತ ದೇಶವು ಆರಂಭಿಕ ಬಾಲ್ಯಶಿಕ್ಷಣದ ಪ್ರಾಮುಖ್ಯತೆಯನ್ನು ಅದರಲ್ಲೂ ವಿಶೇಷವಾಗಿ 5ನೇ ಪಂಚವಾರ್ಷಿಕ ಯೋಜನೆಯಲ್ಲಿ ಆರೋಗ್ಯ, ಪೋಷಣೆ ಮತ್ತು ಶಿಕ್ಷಣಗಳನ್ನೊಳಗೊಂಡ ಅತೀದೊಡ್ಡ ಯೋಜನೆಯಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು (Integrated Child Development Services- ICDS) ಚಾಲನೆ ಮಾಡಿದ ನಂತರ ಗುರುತಿಸಿದೆ. 

ಇತ್ತೀಚಿನ ವರ್ಷಗಳಲ್ಲಿ, ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಕಾರ್ಯನೀತಿಯ ಮಟ್ಟ (policy level) ದಲ್ಲಿ ಹೆಚ್ಚಿನ ಪ್ರಾಧಾನ್ಯತೆ ಪಡೆದಿವೆ. ರಾಷ್ಟ್ರೀಯ ಬಾಲ್ಯಆರೈಕೆ ಮತ್ತು ಶಿಕ್ಷಣ ನೀತಿಯು (The National Early Childhood Care and Education Policy 2013) ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಮತ್ತು ಗುಣಮಟ್ಟದ ಮಾನಕಗಳ (National Curriculum Framework and Quality Standards) ಜೊತೆಗೆ ಗುಣಮಟ್ಟದ ಬಾಲ್ಯಾವಧಿಯ ಆರೈಕೆ ಮತ್ತು ಶಿಕ್ಷಣದ ಯೋಜನೆ ಮತ್ತು ಅನುಷ್ಠಾನಕ್ಕೆ ಚೌಕಟ್ಟನ್ನು ಕೊಡುತ್ತದೆ. 

ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಯು ECCEಯು 8 ವರ್ಷದವರೆಗಿನ ಒಂದು ಹಂತವೆಂದು ಗುರುತಿಸಿ ಉತ್ತೇಜನ ನೀಡಿದೆ. ಈ ನೀತಿಯು ಆರಂಭಿಕ ಬಾಲ್ಯಯನ್ನು 3 – 8 ವರ್ಷದವರೆಗಿನ ಆಟ ಮತ್ತು ಚಟುವಟಿಕೆ ಆಧಾರಿತ ಪಠ್ಯಕ್ರಮವನ್ನೊಳಗೊಂಡ ಒಂದು ನಿರಂತರತೆಯ ರೇಖೆಯೆಂದು ಪರಿಗಣಿಸಿದೆ. ಇನ್ನೂ ಮುಂದುವರೆಸಿ, ಅದು ಸಮರ್ಪಕವಾದ ಶಿಕ್ಷಕರ ತಯಾರಿ, ಪ್ರಸ್ತುತ ಇರುವ ಆರಂಭಿಕ ಬಾಲ್ಯಯ ಶಿಕ್ಷಣವನ್ನು ಇನ್ನಷ್ಟು ಬಲಗೊಳಿಸುವ ಮತ್ತು ಒಂದು ಸಮರ್ಥವಾದ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸುವ, ಹಾಗೂ ಎಲ್ಲ ಮಕ್ಕಳಿಗೂ ಉತ್ತಮ ಗುಣಮಟ್ಟದ ECCEಯು ದೊರೆಯುವ ಹಾಗೆ ಮಾಡುವ ಹಲವು ರೂಪುರೇಖೆಗಳನ್ನು ಕೊಡುತ್ತದೆ. 

ಮಕ್ಕಳಿಗಾಗಿ ಪೂರಕ ನೀತಿ ಚೌಕಟ್ಟು ಇದ್ದರೂ ಕೂಡ ECCEಯನ್ನು ಜಾರಿಯಲ್ಲಿ ಹಲವಾರು ಅಸಮಾನತೆಗಳಿವೆ. ಹೆಚ್ಚಿನ ತರಗತಿಗಳಲ್ಲಿ ವೈವಿಧ್ಯಮಯ ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಮಕ್ಕಳಿರುತ್ತಾರೆ, ವಿವಿಧ ಸಾಮರ್ಥ್ಯ ಅಥವಾ ವಯಸ್ಸಿನವರಿರುತ್ತಾರೆ ಮತ್ತು ಬೇರೆ ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಈ ರೀತಿಯ ಸನ್ನಿವೇಶದಲ್ಲಿ ವಿಭಿನ್ನ ಸಾಮರ್ಥ್ಯಗಳಿಗನುಗುಣವಾಗಿ ಪಠ್ಯಕ್ರಮ ಇಲ್ಲದಿರುವುದು, ಆಂಗ್ಲ ಭಾಷೆ ಬೇಕೆನ್ನುವ ಪೋಷಕರು, ಬೋಧನಾ-ಕಲಿಕೆ ಸಾಮಗ್ರಿಗಳ ಅಭಾವ ಮತ್ತು ಮನೆಯಲ್ಲಿ ಕಲಿಕೆಗೆ ಸೀಮಿತವಾದ ಬೆಂಬಲ ಮುಂತಾದವುಗಳು ಸಮರ್ಪಕ ತರಬೇತಿ ಇಲ್ಲದಿರುವ ಶಿಕ್ಷಕರಿಗೆ ಸವಾಲನ್ನೊಡ್ಡುತ್ತವೆ. 

ನಿಗದಿತ ವಯಸ್ಸಿಗಿಂತ ಮೊದಲೇ ಕಟ್ಟುನಿಟ್ಟಾದ ಅಭ್ಯಾಸ ಮತ್ತು ಉರು ಹೊಡೆಯುವ ವಿಧಾನಗಳ ಮೂಲಕ ಔಪಚಾರಿಕ ಶಿಕ್ಷಣವನ್ನು ಪ್ರಾರಂಭಿಸುವುದು ಕಲಿಕೆಯ ಮೇಲಿನ ಮಕ್ಕಳ ಆಸಕ್ತಿ ಮತ್ತು ಪ್ರೇರಣೆಗಳ ಮೇಲೆ ಪರಿಣಾಮ ಬೀರುತ್ತವೆ. ಇವುಗಳ ಜೊತೆಗೆ, ಪ್ರವೇಶಕ್ಕೆ ಸಂಬಂಧಿಸಿದ ಅಡಚಣೆಗಳು, ಶಿಕ್ಷಕರ ಭಾಗವಹಿಸುವಿಕೆ ಮತ್ತು ಅವರ ನಿಲುವುಗಳು ಪ್ರತಿಕೂಲ ಹಿನ್ನೆಲೆಯಿಂದ ಬಂದಿರುವ ಅಥವಾ ನ್ಯೂನತೆಗಳಿರುವ ಮಕ್ಕಳನ್ನು ಕಡೆಗಣಿಸುತ್ತವೆ. ಕೊರೊನಾ-19 ಸಾಂಕ್ರಾಮಿಕದಿಂದಾಗಿ ಶಾಲೆಗಳನ್ನು ಮುಚ್ಚಿರುವುದು ಶೈಕ್ಷಣಿಕ ಅವಕಾಶಗಳಿಗೆ ಇನ್ನಷ್ಟು ಅಡ್ಡಿಯುಂಟು ಮಾಡಿತು. ಇದರ ಪರಿಣಾಮಗಳು ಎಲ್ಲರ ಮೇಲೆ ಆಗಿದ್ದರೂ ಪ್ರತಿಕೂಲ ಹಿನ್ನೆಲೆಯ ಮಕ್ಕಳ ಕಲಿಕೆಯಲ್ಲಿ ಗಮನಾರ್ಹ ನಷ್ಟವನ್ನುಂಟುಮಾಡುವ ಮೂಲಕ ಅಸಮಾನ ಪರಿಣಾಮವನ್ನುಂಟುಮಾಡಿತು.

ರಾಷ್ಟ್ರೀಯ ಶಿಕ್ಷಣ ನೀತಿಯು ಸಮತೆಯುಳ್ಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಅಡಿಪಾಯ ಹಾಕಿದೆ ಮತ್ತು ಶಿಕ್ಷಣವ್ಯವಸ್ಥೆಯನ್ನು ಪರಿಷ್ಕರಿಸುವ ಪ್ರಸ್ತಾವನೆ ಮಾಡಿದೆ. ಈಗ ನಾವೆಲ್ಲರೂ ಒಟ್ಟಾಗಿ ECEಯನ್ನು ರೂಪಿಸಿದಂತಹ ಬಗೆ ಬಗೆಯ ಆಚರಣೆಗಳನ್ನು ಚರ್ಚಿಸಲು, ಉಪಯುಕ್ತ ವಿಧಾನಗಳನ್ನು ಗುರುತಿಸುವುದು, ಸಂಶೋಧನಾ ಫಲಿತಗಳನ್ನು ಹಂಚಿಕೊಳ್ಳುವುದು, ಅನುಭವಗಳನ್ನು ದಾಖಲಿಸಿಕೊಳ್ಳುವುದು ಮತ್ತು ECE ಕ್ಷೇತ್ರಕ್ಕೆ ನಮ್ಮ ಕೊಡುಗೆ ನೀಡಲು ಒಂದು ಅವಕಾಶ ಬಂದಿದೆ.

ವಿವಿಧ ಸಂದರ್ಭ ಮತ್ತು ಸನ್ನಿವೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪಾಲುದಾರರಾಗಿರುವವರು ECEಯ ಬಗ್ಗೆ ನಡೆಸಿದ ಸಂಶೋಧನೆ ಮತ್ತು ಈ ಕೆಲಸದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಳ್ಳಲು ಅವರೆಲ್ಲರನ್ನೂ ಒಗ್ಗೂಡಿಸುವುದು ಈ ವಿಚಾರ ಸಂಕಿರಣದ ಉದ್ದೇಶ. ಇದು ಶಿಕ್ಷಕರು, ಶಿಕ್ಷಕ ಶಿಕ್ಷಕರು, ಮೇಲ್ವಿಚಾರಕರು/ಆಡಳಿತಗಾರರು, ಸರಕಾರಿ ಅಧಿಕಾರಿಗಳು, ಪಠ್ಯಕ್ರಮ ರಚನಾಕಾರರು ಮತ್ತು ಮಕ್ಕಳ ಜೊತೆ ಕೆಲಸ ಮಾಡುವ ಎಲ್ಲರೂ ಒಟ್ಟು ಸೇರಿ ಅವರವರ ಕೆಲಸ, ಯಶಸ್ಸಿನ ಕತೆಗಳು, ಎದುರಿಸಿದ ಸವಾಲುಗಳು ಮತ್ತು ಆ ಮೂಲಕ ಅವರ ಕಲಿಕೆಗಳ ಬಗ್ಗೆ ಚರ್ಚಿಸಲು ಒಂದು ವೇದಿಕೆಯನ್ನು ಕೊಡುತ್ತದೆ.

ವಿಚಾರ ಸಂಕಿರಣದಲ್ಲಿನ ಪ್ರಸ್ತುತಿಗಳು/ ಪ್ರಬಂಧ ಮಂಡನೆಗಳು ಮತ್ತು ಚರ್ಚೆಗಳು ಕೆಲವು ಆಚರಣೆಗಳು ಮತ್ತು ಅನುಭವಗಳಿಗೆ ಸಂಬಂಧಿಸಿದ ಈ ಕೆಳಗಿನ ಪ್ರಶ್ನೆಗಳ ಬಗ್ಗೆ ವಿವರಣೆ ನೀಡುವುದಾಗಿರುತ್ತವೆ. ಅವುಗಳೆಂದರೆ: ECE ಕೇಂದ್ರಗಳನ್ನು ಸ್ಪಂದಿಸುವ, ಖುಷಿ ಕೊಡುವಂತಹ ಹಾಗೂ ಮಕ್ಕಳ ಸಮಗ್ರ ಬೆಳವಣಿಗೆಗೆ ಗಮನ ಕೊಡುವಂತಹ ಕೇಂದ್ರಗಳಾಗಿ ಹೇಗೆ ಬದಲಾಯಿಸಬಹುದು? 

ಆಟ ಮತ್ತು ಚಟುವಟಿಕೆ ಆಧಾರಿತ ಬೋಧನಾ ವಿಧಾನಗಳ ಮೂಲಕ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಗಳನ್ನು ಬೆಳೆಸುವುದಕ್ಕೆ ಶಿಕ್ಷಕರು ಯಾವ ರೀತಿ ಗಮನ ಕೊಡಬಹುದು? ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು ಯಾವ ರೀತಿ ಮಕ್ಕಳ ವೈವಿಧ್ಯಮಯ ಕಲಿಕಾ ಅವಶ್ಯಕತೆಗಳನ್ನು ಪೂರೈಸಿವೆ? ತಲಸ್ತರದ ವಾಸ್ತವಿಕತೆಗಳನ್ನು ಎದುರಿಸಲು ಶಿಕ್ಷಕರನ್ನು ತಯಾರು ಮಾಡುವಂತಹ ಶಿಕ್ಷಕರ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಸುವ ಕೆಲವು ನವೀನ ಮಾದರಿಗಳು ಯಾವುವು? ECE ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪಾತ್ರವೇನು?

ಈ ಪ್ರಸ್ತುತಿಗಳು ಬೇರೆ ಸನ್ನಿವೇಶಗಳಲ್ಲಿ ಪುನರಾವರ್ತಿಸಲು ಸಾಧ್ಯವಿರುವಂತಹ ವಿಧಾನಗಳನ್ನು ಗುರುತಿಸುವ ಅವಕಾಶವನ್ನು ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರಿಗೆ ಕೊಡುತ್ತವೆ. 

ಮೂರು ದಿನಗಳ ವಿಚಾರ ಸಂಕಿರಣವು ಪ್ರಧಾನ ಅಧಿವೇಶನಗಳು ಮತ್ತು ಪ್ರಬಂಧ ಮಂಡನೆಗಳನ್ನೊಳಗೊಂಡಿದೆ. ಇವುಗಳು ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು, ಶಾಲಾ ಸಿದ್ಧತೆ ಮತ್ತು ಬುನಾದಿ ಕಲಿಕೆ ಹಾಗೂ ಶಿಕ್ಷಕರ ವೃತ್ತಿಪರ ಬೆಳವಣಿಗೆ ಎಂಬ ಮೂರು ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಶಿಕ್ಷಕರು, ಸಂಶೋಧಕರು, ಮತ್ತು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ತಮ್ಮ ಪ್ರಯತ್ನಗಳು, ಸವಾಲುಗಳು, ಅನುಭವಗಳು ಮತ್ತು ಅಲ್ಲಿನ ಕಲಿಕೆಗಳ ಬಗ್ಗೆ ವಿಷಯ ಮಂಡನೆ ಮಾಡಿ ECE ಕ್ಷೇತ್ರವನ್ನು ಶ್ರೀಮಂತಗೊಳಿಸಲು ಆಹ್ವಾನಿಸುತ್ತಿದ್ದೇವೆ.

ಪಠ್ಯಕ್ರಮ ಮತ್ತು ಬೋಧನಾ ವಿಧಾನ: 

ಈ ವಿಷಯದ ಕೆಳಗೆ ಬರುವಂತಹ ಪ್ರಬಂಧ/ಲೇಖನಗಳು ECEಯಲ್ಲಿನ ಬೋಧನಾ ವಿಷಯ ಮತ್ತು ಬೋಧನಾ ಅಭ್ಯಾಸಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ. ಇನ್ನೂ ಸ್ಪಷ್ಟವಾಗಿ, ಆಟಗಳ ಉಪಯೋಗ, ತಂತ್ರಜ್ಞಾನಗಳ ಬಳಕೆ, ಕಲೆ, ಸಂಗೀತ ಮತ್ತು ನಾಟಕಗಳ ಪಾತ್ರಗಳನ್ನು ಅನ್ವೇಷಿಸುವುದಾಗಿದೆ. ಮಕ್ಕಳ ವೈವಿಧ್ಯಮಯ ಕಲಿಕಾ ಅವಶ್ಯಕತೆಗಳು, ಭಾಷಾ ಅಡಚಣೆಗಳು ಮತ್ತು ಮೌಲ್ಯಮಾಪನಕ್ಕೆ ಉಪಯೋಗಿಸುವ ಪರ್ಯಾಯ ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ಬೆಳವಣಿಗೆಗೆ ಪೂರಕವಾದ ಮತ್ತು ಸಾಂಸ್ಕೃತಿಕವಾಗಿ ಸೂಕ್ತವಾದ ಪಠ್ಯಕ್ರಮವನ್ನು ಉತ್ತೇಜಿಸಲು ECE ಕೇಂದ್ರಗಳು ಅಳವಡಿಸಿಕೊಂಡಿರುವ ಮಾರ್ಗೋಪಾಯಗಳನ್ನು ಅನ್ವೇಷಿಸಲಿದ್ದೇವೆ.

ಮುಖ್ಯ ಪ್ರಶ್ನೆಗಳು:
  1. ಮಕ್ಕಳು ಮತ್ತು ಅವರ ಕುಟುಂಬದವರು ECEಯ ಪಠ್ಯಕ್ರಮದ ಆಕರವಾಗಬಹುದೇ? ECE ವೃತ್ತಿಪರರು/ಶಿಕ್ಷಕರು/ಅಧಿಕಾರಿಗಳು ಯಾವ ರೀತಿ ಮಕ್ಕಳ ಸಂಸ್ಕತಿ ಮತ್ತು ಅನುಭವಗಳನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ? ಇದರ ಪರಿಣಾಮವೇನು? (ಪ್ರಬಂಧಗಳು ಸ್ಪಷ್ಟ ಉದಾಹರಣೆಗಳು ಮತ್ತು ಇದರಲ್ಲಿರುವ ಯಾವುದೇ ಸವಾಲುಗಳು ಮತ್ತು ಇದರಲ್ಲಿನ ಕಲಿಕೆಗಳಿಗೆ ಒತ್ತುಕೊಡಬೇಕು)
  2. ಮಕ್ಕಳು ಸಂಗೀತ, ಕಲೆ, ನಾಟಕ, ಚಲನವಲನ ಮುಂತಾದ ವಿವಿಧ ವಿಧಾನಗಳ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುತ್ತಾರೆ. ಈಗ ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳು/ಪಠ್ಯಕ್ರಮಗಳು ಮಕ್ಕಳಿಗೆ ಪರಿಕಲ್ಪನೆಗಳನ್ನು ಕಲಿಯಲು, ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಸಂಸ್ಕೃತಿ/ ವೈವಿಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಯಾವ ರೀತಿ ಕಲೆಯನ್ನು ಅಳವಡಿಸಿಕೊಂಡು ಬೆಂಬಲ ಕೊಡುತ್ತವೆ?
  3. ಮಕ್ಕಳ ಕಲಿಕೆ ಕೇಂದ್ರ ಹಾಗೂ ಬೆಳವಣಿಗೆಗೆ ಆಟವು ಮುಖ್ಯವೆಂದು ಗುರುತಿಸಲ್ಪಟ್ಟಿದೆ. ಆದರೆ, ಶಾಲಾಪೂರ್ವ/ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಆರಂಭಿಕ ತರಗತಿಗಳಲ್ಲಿ ಆಟಕ್ಕೆ ಅವಕಾಶಗಳು ಕಡಿಮೆ ಅಥವಾ ಅದು ನಿರ್ದಿಷ್ಟ ರಚನೆಯಲ್ಲಿ ಆಯೋಜಿಸಲ್ಪಟ್ಟಿರುತ್ತದೆ. ಶಿಕ್ಷಕರು/ಶಿಕ್ಷಕ ಶಿಕ್ಷಕರು, ಅಧಿಕಾರಿಗಳು 3 – 8 ವರ್ಷದವರೆಗಿನ ಮಕ್ಕಳ ಪಠ್ಯಕ್ರಮದಲ್ಲಿ ಆಟವನ್ನು ಯಾವ ರೀತಿ ಅಳವಡಿಸಿಕೊಂಡಿದ್ದಾರೆ? (ಭಾಗವಹಿಸುವವರು ಶಾಲಾಪೂರ್ವ ಆರಂಭಿಕ ತರಗತಿಗಳಲ್ಲಿ ಬಳಸುವ ವಿಧಾನಗಳು, ಆಟದ ಮೂಲಕ ಕಲಿಕೆ, ಅದಕ್ಕೆ ಅವಕಾಶವನ್ನುಂಟುಮಾಡುವುದರಲ್ಲಿ ಶಿಕ್ಷಕರ ಪಾತ್ರ, ಆಟಕ್ಕೆ ಬೇಕಾದ ಅವಕಾಶ, ಸುಗಮವಾದ ಜಾಗವನ್ನು ಆಯೋಜಿಸುವುದು ಸಮಯ ಇವುಗಳ ಬಗ್ಗೆ ಸ್ಪಷ್ಟ ಉದಾಹರಣೆಗಳನ್ನು ಹಂಚಿಕೊಳ್ಳಬೇಕು).
  4. 3 – 8 ವರ್ಷದವರೆಗಿನ ಮಕ್ಕಳ ಕಲಿಕೆಯಲ್ಲಿ ತಂತ್ರಜ್ಞಾನದ ಪಾತ್ರವೇನು? ತಂತ್ರಜ್ಞಾನದ ಬಳಕೆಯಲ್ಲಿನ ಅನುಕೂಲಗಳು ಮತ್ತು ಸವಾಲುಗಳು ಏನು? (ಪ್ರಬಂಧಗಳು ECE ಕೇಂದ್ರಗಳಲ್ಲಿ ಮತ್ತು ಆರಂಭಿಕ ತರಗತಿಗಳಲ್ಲಿ ತಂತ್ರಜ್ಞಾನವನ್ನು ಉದ್ದೇಶಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ಬಳಸಿಕೊಂಡಿರುವ ವಿಧಾನಗಳನ್ನು ಎತ್ತಿ ತೋರಿಸಬೇಕು).
  5. ECE ಕೇಂದ್ರಗಳು/ಶಾಲೆಗಳು ಎಲ್ಲ ಮಕ್ಕಳಿಗೂ ಒಳಗೊಳ್ಳುವ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿರುವ ಜಾಗವಾಗಿರಬೇಕು. ವಿವಿಧ ಹಿನ್ನೆಲೆಗಳಿಂದ ಬಂದಿರುವ, ಭಿನ್ನಭಿನ್ನ ಸಾಮಥ್ರ್ಯ ಮತ್ತು ಆಸಕ್ತಿಗಳಿರುವ ಮಕ್ಕಳಿಗೆ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳು ಹೇಗೆ ಬೆಂಬಲವಾಗಿವೆ ಎಂಬುದರ ಬಗ್ಗೆ ಅನುಭವಗಳನ್ನು ಹಂಚಿಕೊಳ್ಳುವುದು. (ಪ್ರಬಂಧಗಳು ತಮ್ಮ ಸನ್ನಿವೇಶಗಳು ಎದುರಿಸಿರುವ ಸವಾಲುಗಳು ಮತ್ತು ಪಡೆದ ಯಶಸ್ಸಿನ ಬಗ್ಗೆ ಸ್ಪಷ್ಟ ಉದಾಹರಣೆಗಳನ್ನು ಕೊಡಬೇಕು).
  6. ECE ಮತ್ತು ಆರಂಭಿಕ ತರಗತಿಗಳಲ್ಲಿ ಮೌಲ್ಯಮಾಪನದ ಗುರಿ ಮತ್ತು ಉದ್ದೇಶಗಳೇನು? ವಿವಿಧ ಸನ್ನಿವೇಶಗಳಲ್ಲಿ ಮಕ್ಕಳ ಕಲಿಕೆಯ ಮೌಲ್ಯಮಾಪನ ಮಾಡಲು ಬಳಸಿಕೊಂಡಿರುವ ಪರ್ಯಾಯ ವಿಧಾನಗಳೇನು? ಮಕ್ಕಳ ಸಾಮರ್ಥ್ಯ ಮತ್ತು ಸವಾಲುಗಳೇನು? ಮಕ್ಕಳನ್ನು ಮೌಲ್ಯಮಾಪನ ಮಾಡುವುದರಲ್ಲಿ ಕುಟುಂಬಗಳು ಯಾವ ರೀತಿ ಬೆಂಬಲ ನೀಡಬಹುದು?
  7. ಸಾಂಕ್ರಾಮಿಕದ ನಂತರ ಮಕ್ಕಳ ಯೋಗಕ್ಷೇಮ ಮತ್ತು ಕಲಿಕೆಗಾಗಿ ECE ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳಲ್ಲಿ ಏನು ಬದಲಾವಣೆ ಮಾಡಲಾಗಿದೆ? ಅವುಗಳನ್ನು ಜಾರಿಗೆ ತಂದಾಗ ಎದುರಿಸಿದ ಸವಾಲುಗಳು ಮತ್ತು ಯಶಸ್ಸುಗಳೇನು? (ಏಕೀಕೃತ ಸಮಗ್ರ ಪಠ್ಯಕ್ರಮ, ದೈನಂದಿನ ಕಾರ್ಯಕ್ರಮಗಳಲ್ಲಿನ ಬದಲಾವಣೆಗಳು, ಮಕ್ಕಳು/ಕುಟುಂಬದವರನ್ನು ಸಂಪರ್ಕಿಸುವ ಪರ್ಯಾಯ ವಿಧಾನಗಳು, ಕಲಿಕೆಯಲ್ಲಿನ ನಷ್ಟಗಳನ್ನು ತುಂಬುವ ಪಠ್ಯಕ್ರಮ, ಸಾಮಾಜಿಕ‑ಭಾವನಾತ್ಮಕ ಕೌಶಲಗಳು, ಆಟ ಇತ್ಯಾದಿಗಳಿಗೆ ಸಂಬಂಧಿಸಿದ ಯೋಜನೆಗಳು)

ಶಾಲಾ ಸಿದ್ಧತೆ ಮತ್ತು ಬುನಾದಿ ಕಲಿಕೆ:

ಈ ವಿಷಯದ ಕೆಳಗೆ ಬರುವಂತಹ ಪ್ರಬಂಧ/ಲೇಖನಗಳು ಪೂರ್ವಪ್ರಾಥಮಿಕ ಮತ್ತು ಆರಂಭಿಕ ತರಗತಿಗಳ (1 ನೇ ಮತ್ತು 2 ನೇ ತರಗತಿಗಳು) ನಡುವಿನ ಬೋಧನಾ ವಿಧಾನಗಳ ಪಠ್ಯಕ್ರಮದ ನಿರಂತರತೆಯ ಮೇಲೆ ಕೇಂದ್ರೀಕೃತವಾಗಿರುತ್ತವೆ. 

ಲೇಖನಗಳು ಮಕ್ಕಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಗಳನ್ನು ಬೆಳೆಸಲು ಬಳಸಿದ ಮಾರ್ಗೋಪಾಯಗಳು ಮತ್ತು ನೂತನ ವಿಧಾನಗಳ ಬಗ್ಗೆ ತಿಳಿಸುವುದಾಗಿರಬೇಕು. ಆರಂಭಿಕ ತರಗತಿಗಳಲ್ಲಿ ಮಕ್ಕಳಲ್ಲಿ ಶಾಲಾ ಸಿದ್ಧತೆ ಮತ್ತು ಅವರು ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಗಳನ್ನು ಸಾಧಿಸುವುದರ ನಡುವಿನ ಸಂಬಂಧವನ್ನು ತೋರಿಸುವ ಲೇಖನಗಳೂ ಆಗಿರಬಹುದು.

ಮುಖ್ಯ ಪ್ರಶ್ನೆಗಳು:
  1. ಪೂರ್ವಪ್ರಾಥಮಿಕ ತರಗತಿಗಳ ಪಠ್ಯಕ್ರಮವು ಸಾಮಾನ್ಯವಾಗಿ ಓದುವ, ಬರೆಯುವ ಮತ್ತು ಗಣಿತಕ್ಕೆ ಹೆಚ್ಚು ಒತ್ತು ಕೊಡುವಂತಹ ಪ್ರಾಥಮಿಕ ತರಗತಿಗಳ ಪಠ್ಯಗಳ ಕೆಳಮುಖ ವಿಸ್ತರಣೆಯಾಗಿರುತ್ತದೆ. ಯಾವರೀತಿಯಲ್ಲಿ ಕಾರ್ಯಕ್ರಮಗಳು/ECE ಕೇಂದ್ರಗಳು ತಮ್ಮ ಗಮನವನ್ನು ಸಮಗ್ರ ಬೆಳವಣಿಗೆಯತ್ತ/ಶಾಲಾ ಸಿದ್ಧತಾ ಕೌಶಲ್ಯಗಳತ್ತ ಮರುಜೋಡಣೆ ಮಾಡಿಕೊಂಡಿವೆ? (ಲೇಖನಗಳು ಮಕ್ಕಳಲ್ಲಿ ಶಾಲಾಸಿದ್ಧತಾ ಕೌಶಲ್ಯಗಳು, ಕುಟುಂಬಗಳ ಜೊತೆ ಸಂಪರ್ಕ, ಮಕ್ಕಳ ವಿವಿಧ ಕಲಿಕಾ ಅವಶ್ಯಕತೆಗಳಿಗನುಗುಣವಾಗಿ ಶಾಲೆಗಳು/ ECE ಕೇಂದ್ರಗಳು ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಕೇಂದ್ರೀಕೃತವಾಗಿರಬಹುದು).
  2. ಆರಂಭಿಕ ತರಗತಿಗಳಲ್ಲಿ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಗಳನ್ನು ಪಡೆದುಕೊಳ್ಳಲು ಬೆಂಬಲಕೊಡುವಂತಹ ಕೆಲವು ಮಾರ್ಗಗಳೇನು? ಎದುರಿಸಿರುವ ಸವಾಲುಗಳು, ಯಶಸ್ಸಿನ ಕಥೆಗಳು ಮತ್ತು ಕಲಿಕೆಗಳೇನು? (ಲೇಖನಗಳು ವಿವಿಧ ಹಿನ್ನೆಲೆಗಳಿಂದ ಬರುವ ಮಕ್ಕಳನ್ನು ಗಮನದಲ್ಲಿಕೊಂಡು ವಿವಿಧ ಆಯಾಮಗಳಾದ ಪಠ್ಯಕ್ರಮ ಅಥವಾ ಬೋಧನಾ ವಿಧಾನಗಳಲ್ಲಿನ ಬದಲಾವಣೆಗಳು, ಶಾಲೆ/ಶಾಲಾವ್ಯವಸ್ಥೆಯ ಹಂತದಲ್ಲಿನ ಪ್ರಯತ್ನಗಳು, ತರಬೇತಿಗಳು, ಮೌಲ್ಯಮಾಪನಗಳು, ECE ಜೊತೆಗಿನ ಸಂಪರ್ಕ ಇತ್ಯಾದಿಗಳ ಬಗ್ಗೆ ಕೇಂದ್ರೀಕೃತವಾಗಿರಬಹುದು).
  3. ನಮ್ಮ ದೇಶದಲ್ಲಿನ ಭಾಷಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪೂರ್ವ ಪ್ರಾಥಮಿಕ ಮತ್ತು ಆರಂಭಿಕ ತರಗತಿಗಳಲ್ಲಿ ಭಾಷಾ ಬೋಧನೆ ಮತ್ತು ಕಲಿಕೆಗಳಲ್ಲಿ ಯಾವ ರೀತಿಯ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು? ಅಳವಡಿಸಿಕೊಂಡಿರುವ ಕೆಲವು ನೂತನ ಅಭ್ಯಾಸಗಳೇನು ಮತ್ತು ಇವು ಯಾವ ರೀತಿ ಮಕ್ಕಳ ಕಲಿಕೆ ಮತ್ತು ಅಭಿಪ್ರೇರಣೆಗಳಿಗೆ ಬೆಂಬಲ ನೀಡಿವೆ? (ಲೇಖನಗಳು ವಿಧಾನಗಳು, ಎದುರಿಸಿದ ಸವಾಲುಗಳು ಮತ್ತು ಅವುಗಳಿಂದ ಆದ ಕಲಿಕೆಗಳನ್ನು ಪ್ರತಿಬಿಂಬಿಸಬಹುದು).
  4. ಪ್ರಸ್ತುತವಿರುವ ಕಾರ್ಯಕ್ರಮಗಳು/ಮಾದರಿಗಳು ಮಕ್ಕಳ ಕಲಿಕೆ ಹಾಗೂ ಬೆಳವಣಿಗೆಗಳನ್ನು ಪ್ರೋತ್ಸಾಹಿಸಲು ಶಿಕ್ಷಕರು, ಪೋಷಕರು, ಸಮುದಾಯದ ಸದಸ್ಯರು/ಸ್ಥಳೀಯ ಸಂಸ್ಥೆಗಳೊಡನೆ ಯಾವರೀತಿ ಯಶಸ್ವಿಯಾಗಿ ಸಂಪರ್ಕ ಸಾಧಿಸಿವೆ? ಚರ್ಚೆಗಳು ಅತ್ಯುತ್ತಮ ಆಚರಣೆಗಳು, ಮತ್ತು ಇವುಗಳಲ್ಲಿನ ಸವಾಲುಗಳು ಹಾಗೂ ಕಲಿಕೆಗಳನ್ನು ಪ್ರತಿಫಲಿಸಬೇಕು.
  5. 3 ರಿಂದ 8 ವರ್ಷದವರೆಗಿನ ಮಕ್ಕಳ ಪಠ್ಯವಿಷಯಗಳು, ಪಠ್ಯಕ್ಷೇತ್ರಗಳು, ಅರ್ಥಪೂರ್ಣ ಕಲಿಕೆಗೆ ಬೇಕಾದ ಕೌಶಲ್ಯಗಳಿಗೆ ಸಂಪರ್ಕ ಕಲ್ಪಿಸುವ ಏಕೀಕೃತ ಪಠ್ಯಕ್ರಮವನ್ನು ಉಪಯೋಗಿಸುವುದರಲ್ಲಿನ ಶಿಕ್ಷಕರ ಅನುಭವಗಳು ಮತ್ತು ಪ್ರತಿಫಲನಗಳೇನು? ಮಕ್ಕಳ ಆಸಕ್ತಿ ಮತ್ತು ಅವರ ಸನ್ನಿವೇಶಗಳಿಗನುಗುಣವಾಗಿ ನಿರೂಪಣಾ ವಿಷಯ ಮತ್ತು ಯೋಜನಾ ಕಾರ್ಯಗಳನ್ನೊಳಗೊಂಡ ಏಕೀಕೃತ ಪಠ್ಯಕ್ರಮವನ್ನು ಬಳಸುವಾಗ ಗಣಿತ, ಭಾಷೆ, ಪರಿಸರ ವಿಜ್ಞಾನ, ದೈಹಿಕ, ಸಂಜ್ಞಾನಾತ್ಮಕ ಮತ್ತು ಸಾಮಾಜಿಕ ಸಾಂಸ್ಕøತಿಕ ಬೆಳವಣಿಗೆಗಳನ್ನು ಹೇಗೆ ಅನ್ವೇಷಿಸಬಹುದು ಎಂಬುದನ್ನು ಮತ್ತು ಅದರಲ್ಲಿರುವ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆ ಅವಲೋಕಿಸಿ ಲೇಖನಗಳನ್ನು ಬರೆಯಬಹುದು. ಲೇಖನಗಳು ಕುಟುಂಬಗಳ ಪಾತ್ರ ಮತ್ತು ಸೂಕ್ತ ಮೌಲ್ಯಮಾಪನಗಳ ಪಾತ್ರವನ್ನೂ ಕೂಡ ನಿರೂಪಿಸಬಹುದು.

ಶಿಕ್ಷಕರ ವೃತ್ತಿಪರ ಬೆಳವಣಿಗೆ:

ಈ ಉಪವಿಷಯವು ಸೇವಾ-ಪೂರ್ವ ಮತ್ತು ಸೇವಾನಿರತ ತರಬೇತಿಗಳ ಮೂಲಕ ಶಿಕ್ಷಕರ ಪೂರ್ವ ಸಿದ್ಧತೆ, ನಿರಂತರವಾದ ವೃತ್ತಿಪರ ಬೆಳವಣಿಗೆಗೆ ಮಾರ್ಗೋಪಾಯಗಳು ಮತ್ತು ಶಿಕ್ಷಕರ ಗುಣಮಟ್ಟ ಹಾಗೂ ಅಭಿಪ್ರೇರಣೆಗಳ ಸುಧಾರಣೆಗೆ ಬೆಂಬಲ ಮುಂತಾದವುಗಳನ್ನು ಕೇಂದ್ರೀಕರಿಸಿದೆ. 

ಶಿಕ್ಷಕ‑ಶಿಕ್ಷಕರು, ಅಧಿಕಾರಿಗಳು, ಸಂಶೋಧಕರು, ವಿವಿಧ ವಿಧಾನಗಳನ್ನು ಬಳಸಿ ಶಿಕ್ಷಕರ ಸಾಮಥ್ರ್ಯ ವೃದ್ಧಿಪಡಿಸಲು ಕೆಲಸ ಮಾಡುವ ಸಂಸ್ಥೆಗಳಿಂದ ಲೇಖನಗಳನ್ನು ನಿರೀಕ್ಷಿಸಲಾಗಿದೆ. ಈ ರೀತಿಯ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಗಳನ್ನು ಅನುಭವಿಸಿದ ಶಿಕ್ಷಕರೂ ಕೂಡ ಲೇಖನಗಳನ್ನು ಸಲ್ಲಿಸಬಹುದಾಗಿದೆ.

ಮುಖ್ಯ ಪ್ರಶ್ನೆಗಳು:

  1. ರಾಷ್ಟ್ರೀಯ ಶಿಕ್ಷಣ ನೀತಿಯ ಸನ್ನಿವೇಶದಲ್ಲಿ ಶಿಕ್ಷಕರ/ಅಂಗನವಾಡಿ ಕಾರ್ಯಕರ್ತರ ಸೇವಾ ಪೂರ್ವ ಮತ್ತು ಸೇವಾನಿರತ ತರಬೇತಿಗಳಿಗೆ ಬಳಸಲಾಗಿರುವ ಕೆಲವು ನೂತನ ಮಾರ್ಗಗಳು ಯಾವುವು? ಇವು ಇಅಇ ಸನ್ನಿವೇಶ/ತರಗತಿಗಳಲ್ಲಿ ಇರುವ ಅವಶ್ಯಕತೆಗಳನ್ನು ಪೂರೈಸಲು ಯಾವ ರೀತಿ ಶಿಕ್ಷಕರನ್ನು ತಯಾರು ಮಾಡಿವೆ? (ಲೇಖನಗಳು ತರಬೇತಿಯ ಸ್ವರೂಪ, ಅವಧಿ, ತರಬೇತಿಯ ವಿಷಯ, ಬಳಸಿದ ವಿಧಾನಗಳು ಸಂಪನ್ಮೂಲಗಳ ಲಭ್ಯತೆ, ಮಾರ್ಗದರ್ಶನದ ಬೆಂಬಲ, ಮೇಲ್ವಿಚಾರಣೆ ಇತ್ಯಾದಿಗಳ ಬಗ್ಗೆ ಗಮನ ಹರಿಸಿರಬೇಕು).
  2. ಸಂಸ್ಥೆಗಳು ಶಿಕ್ಷಕರನ್ನು ಸಬಲಗೊಳಿಸಲು ಮತ್ತು ಮಕ್ಕಳ ಕಲಿಕೆಯನ್ನು ಅವರ ಅವಶ್ಯಕತೆ ಮತ್ತು ಸನ್ನಿವೇಶಗಳಿಗನುಗುಣವಾಗಿ ಪ್ರೋತ್ಸಾಹಿಸಲು ಯಾವ ರೀತಿ ತಮ್ಮ ತರಬೇತಿ ಪಠ್ಯಕ್ರಮವನ್ನು ತಯಾರಿಸಿದ್ದಾರೆ? (ಲೇಖನಗಳು ಸನ್ನಿವೇಶಕ್ಕನುಗುಣವಾಗಿ ಶಿಕ್ಷಕರ ತರಬೇತಿಯ ಪಠ್ಯಕ್ರಮವನ್ನು ರೂಪಿಸಿರುವುದನ್ನು, ತರಗತಿಯಲ್ಲಿ ವೈವಿಧ್ಯತೆ ಮತ್ತು ಸಮಗ್ರತೆಯನ್ನೊಳಗೊಂಡ ವಿಷಯಗಳ ಸಮನ್ವಯತೆ, ಕ್ಷೇತ್ರ ಅಭ್ಯಾಸಕ್ಕೆ ಅವಕಾಶ, ಹೊರಾಂಗಣ ಭೇಟಿಗಳು, ಸಂಶೋಧನೆಯ ಪಾತ್ರ ಮತ್ತು ಪ್ರತಿಫಲನಗಳ ಬಗ್ಗೆ ಕೇಂದ್ರೀಕೃತವಾಗಿರಬೇಕು).
  3. ಸಂಸ್ಥೆಗಳು/ರಾಜ್ಯ ಸರಕಾರಗಳು/ಶಿಕ್ಷಣ ಇಲಾಖೆಗಳು ಶಿಕ್ಷಕರು/ಅಂಗನವಾಡಿ ಕಾರ್ಯಕರ್ತರನ್ನು ಬೆಳೆಸಲು ಮತ್ತು ಅವರಿಗೆ ಮಾರ್ಗದರ್ಶನ ನೀಡಲು ನಿಯತವಾಗಿ, ವ್ಯಾಪಕವಾಗಿ ಯಾವ ಹೊಸ ವಿಧಾನಗಳನ್ನು ಯೋಚಿಸಿವೆ? (ಲೇಖನಗಳು ನಿರಂತರ ವೃತ್ತಿಪರ ಬೆಳವಣಿಗೆಗೆ ಬೆಂಬಲ ಕೊಡುವ ಮಾದರಿಗಳಲ್ಲಿನ ವಿಷಯಗಳ ನಾವೀನ್ಯತೆಯ ಬಗ್ಗೆ ಕೇಂದ್ರೀಕೃತವಾಗಿರಬೇಕು).
  4. ಇತ್ತೀಚಿನ ಸಾಂಕ್ರಾಮಿಕವು ಶಿಕ್ಷಕರು ಮತ್ತು ಅವರ ಸಾಮಾನ್ಯ ಕಾರ್ಯ ವಿಧಾನಗಳ ಮೇಲೆ ಪರಿಣಾಮ ಬೀರಿದೆ. ಸಾಂಕ್ರಾಮಿಕದ ನಂತರದ ಶಿಕ್ಷಕರ ಅವಶ್ಯಕತೆಗಳನ್ನು ತರಬೇತಿಗಳು/ ಕಾರ್ಯಾಗಾರಗಳು/ನಿರಂತರ ವೃತ್ತಿಪರ ಬೆಳವಣಿಗೆಗಳು ಯಾವ ರೀತಿ ಪೂರೈಸಿವೆ? (ಲೇಖನಗಳು ಶಿಕ್ಷಕರ ಸಾಮಾಜಿಕ‑ಭಾವನಾತ್ಮಕ ಸಾಮಥ್ರ್ಯಗಳನ್ನು ಬೆಳೆಸುವ, ವೈಯಕ್ತಿಕ ಬೆಳವಣಿಗೆ, ಸ್ಥಿತಿಸ್ಥಾಪಕತೆಯನ್ನು ಬೆಳೆಸುವುದು ಮತ್ತು ಭವಿಷ್ಯದ ಸವಾಲುಗಳಿಗೆ ಹೊಂದಿಕೊಳ್ಳುವ ಕಾರ್ಯತಂತ್ರಗಳನ್ನು ಪರಿಶೀಲಿಸಬಹುದು).

ವಿಚಾರ ಸಂಕಿರಣಕ್ಕೆ ಸಂಬಂಧಿಸಿದ ಮುಖ್ಯ ಮಾಹಿತಿಗಳು: 

ಪ್ರಬಂಧಗಳನ್ನು ಎರಡು ವಿಧಗಳಲ್ಲಿ ಬರೆಯಬಹುದು:

  • 1200 ರಿಂದ 1500 ಪದಗಳ ಮಿತಿಯ ಲಘು ಲೇಖನ
  • 2500 ರಿಂದ 5000 ಪದಗಳ ಮಿತಿಯ ದೀರ್ಘ ಲೇಖನ

ಪ್ರಬಂಧಗಳ ಸಾರಾಂಶದ(Abstract) ಸಲ್ಲಿಕೆ: 

ಲಘು ಪ್ರಬಂಧಗಳಿಗೆ 300 – 500 ಪದಗಳ ಮಿತಿಯಲ್ಲಿ ಮತ್ತು ದೀರ್ಘ ಲೇಖನಗಳಿಗೆ 600 – 800 ಪದಗಳ ಮಿತಿಯಲ್ಲಿ ಪ್ರಬಂಧದ ಸಾರಾಂಶವನ್ನು (Abstract) ಮೊದಲಿಗೆ ಕಳುಹಿಸಬೇಕು.

ಪ್ರಬಂಧಗಳ ಸಾರಾಂಶವು ಆಯ್ಕೆ ವಿಷಯಕ್ಕೆ ಸಂಬಂಧಿಸಿದ ಈ ಕೆಳಗಿನ ಅಂಶಗಳನ್ನು ಸ್ಥೂಲವಾಗಿ ಹೊಂದಿರಬೇಕು:

• ಒಟ್ಟಾರೆ ಪ್ರಬಂಧದ ಔಚಿತ್ಯತೆ

• ಅಧ್ಯಯನ/ಪ್ರಬಂಧದ ಉದ್ದೇಶಗಳು 

• ಅಧ್ಯಯನಕ್ಕೆ ಬಳಸಿದ (ಕ್ಷೇತ್ರ ಅನುಭವ ಆಧಾರಿತ ಲೇಖನಗಳಿಗೆ) ವಿಧಾನಗಳು 

• ವಿಶ್ಲೇಷಣಾತ್ಮಕ ಅಥವಾ ಪ್ರಮುಖ ವಾದ ಮಂಡನೆಯ ಹರಿವು

• ಪ್ರಬಂಧದಿಂದ ಹೊರಹೊಮ್ಮುವ ಫಲಿತಗಳು/ಒಳನೋಟಗಳು

ಸಾರಾಂಶ ಕಳುಹಿಸಬೇಕಾದ ಇ‑ಮೇಲ್ ವಿಳಾಸ kan.​eceseminar@​apu.​edu.​in

Important Dates to Remember

ಪ್ರಬಂಧದ ಸಾರಾಂಶ ಸಲ್ಲಿಕೆಗೆ ಕಡೆಯ ದಿನಾಂಕ

ಸಾರಾಂಶ ಪರಿಶೀಲನೆ

ಪೂರ್ಣ ಲೇಖನ ಸಲ್ಲಿಕೆ

ವಿಚಾರ ಸಂಕಿರಣದ ದಿನಾಂಕ

ಸಂಗ್ರಹ ಗ್ರಂಥ (Compendium):

ವಿಚಾರ ಸಂಕಿರಣದಲ್ಲಿ ಪ್ರಸ್ತುತಪಡಿಸಲಾಗುವ ಆಯ್ದ ಪ್ರಬಂಧಗಳನ್ನು ಒಟ್ಟುಗೂಡಿಸಿ ಒಂದು ಸಂಗ್ರಹ ಗ್ರಂಥವಾಗಿ ಪ್ರಕಟಿಸಲಾಗುವುದು.

ಸ್ಥಳ

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ, ಬಿಕ್ಕನಹಳ್ಳಿ, ಸರ್ಜಾಪುರ, ಬೆಂಗಳೂರು- 562125

ಸಾರಾಂಶ ಕಳುಹಿಸಬೇಕಾದ ಇ‑ಮೇಲ್ ವಿಳಾಸ: kan.​eceseminar@​apu.​edu.​in

Attribution

  • Translations Initiative

    Our initiative to plug lacunae in the higher education domain with learning materials for users from different backgrounds.